Advertisement

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

08:01 AM May 06, 2020 | mahesh |

“ಅಮ್ಮಾ, ತಿನ್ನೋಕೆ ಏನಾದ್ರೂ ಕೊಡು…’ – ಲಾಕ್‌ಡೌನ್‌ನ ಈ ಸಮಯದಲ್ಲಿ, ಮಕ್ಕಳು ದಿನಕ್ಕೆ ಹಲವು ಬಾರಿ ಹೀಗೆ ಕೇಳುತ್ತಾ ಹಿಂದೆ ಮುಂದೆ ಸುತ್ತುತ್ತವೆ. ಚಾಕ್ಲೆಟ್, ಬಿಸ್ಕೆಟ್ಸ್ ಕೊಡುವುದು ಸುಲಭವಾದರೂ, ಅದರಿಂದ ಮಕ್ಕಳ ಆರೋಗ್ಯಕ್ಕೆ ಉಪಯೋಗವಿಲ್ಲ. ಹಾಗಾಗಿ, ಪೌಷ್ಟಿಕಾಂಶಗಳನ್ನು ರುಚಿಯಾದ ತಿನಿಸಿನಲ್ಲಿ ಅಡಗಿಸುವುದು ಜಾಣತನ. ಸುಲಭವಾಗಿ ತಯಾರಿಸಬಹುದಾದ ರುಚಿಕರ ತಿನಿಸುಗಳ ರೆಸಿಪಿ ಇಲ್ಲಿದೆ…

Advertisement

ಹೆಸರು ಕಾಳು ಉಂಡೆ
ಬೇಕಾಗುವ ಸಾಮಗ್ರಿ: ಹೆಸರು ಕಾಳು – 4 ಕಪ್‌, ಬೆಲ್ಲ/ ಸಕ್ಕರೆ- 3 ಕಪ್‌, ತುಪ್ಪ- 2 ಕಪ್‌, ಒಣದ್ರಾಕ್ಷಿ, ಏಲಕ್ಕಿ, ಗೋಡಂಬಿ.
ಮಾಡುವ ವಿಧಾನ: ಹೆಸರು ಕಾಳನ್ನು ಚೆನ್ನಾಗಿ ಹುರಿದು, ಮಿಕ್ಸಿಯಲ್ಲಿ ರುಬ್ಬಿ, ಹಿಟ್ಟು ತಯಾರಿಸಿಕೊಳ್ಳಿ. ಕಾದ ಬಾಣಲೆಯಲ್ಲಿ ತುಪ್ಪ ಹಾಕಿ, ಅದು ಬಿಸಿಯಾಗುತ್ತಿದ್ದಂತೆ ಹೆಸರು ಕಾಳು ಹಿಟ್ಟನ್ನು ಹಾಕಿ 10 ನಿಮಿಷ ಮಗುಚಿ. ಹಿಟ್ಟು ಸ್ವಲ್ಪ ಕೆಂಬಣ್ಣಕ್ಕೆ ಬಂದ ಮೇಲೆ ಕೆಳಗಿಳಿಸಿ. ಹಿಟ್ಟು ಸಂಪೂರ್ಣ ತಣ್ಣಗಾದ ಮೇಲೆ, ಅದಕ್ಕೆ ಸಣ್ಣಗೆ ಪುಡಿ ಮಾಡಿದ ಬೆಲ್ಲ ಅಥವಾ ಸಕ್ಕರೆ, ಒಣದ್ರಾಕ್ಷಿ, ಏಲಕ್ಕಿ ಪುಡಿ, ಗೋಡಂಬಿ ತುಣುಕು ಹಾಕಿ, ಚೆನ್ನಾಗಿ ಕೈಯಿಂದ ಕಲಸಿ. (ಬೇಕಿದ್ದರೆ ಬಿಸಿ ತುಪ್ಪ ಸೇರಿಸಬಹುದು) ನಂತರ, ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಉಂಡೆ ಕಟ್ಟಿ.

ಶೇಂಗಾ- ಎಳ್ಳಿನ ಉಂಡೆ
ಬೇಕಾಗುವ ಸಾಮಗ್ರಿ: ಶೇಂಗಾ- ಕಾಲು ಕಪ್‌, ಎಳ್ಳು- ಕಾಲು ಕಪ್‌, ಬೆಲ್ಲದ ಪುಡಿ- ಕಾಲು ಕಪ್‌, ತುಪ್ಪ- 2 ಚಮಚ, ಏಲಕ್ಕಿ ಪುಡಿ, ಗೋಡಂಬಿ, ದ್ರಾಕ್ಷಿ, ಸ್ವಲ್ಪ ನೀರು
ಮಾಡುವ ವಿಧಾನ: ಶೇಂಗಾವನ್ನು ಹುರಿದು ಸಿಪ್ಪೆ ತೆಗೆಯಿರಿ. ಎಳ್ಳನ್ನು ಕೂಡ ಸ್ವಲ್ಪ ಹುರಿಯಿರಿ. ಎರಡನ್ನೂ ಪ್ರತ್ಯೇಕವಾಗಿ, ತರಿ ತರಿಯಾಗಿ ಪುಡಿ ಮಾಡಿ. ಬೆಲ್ಲಕ್ಕೆ ಸ್ವಲ್ಪ ನೀರು ಹಾಕಿ, ಪಾಕ ಮಾಡಿಕೊಳ್ಳಿ. ನಂತರ, ಶೇಂಗಾ ಮತ್ತು ಎಳ್ಳಿನ ಪುಡಿ, ಏಲಕ್ಕಿ ಪುಡಿ, ಗೋಡಂಬಿ ತುಣುಕು, ದ್ರಾಕ್ಷಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ಆರಿದ ನಂತರ, ಉಂಡೆ ಕಟ್ಟಿ.

ಸಿಂಪಲ್‌ ಲಡ್ಡು
ಬೇಕಾಗುವ ಸಾಮಗ್ರಿ: ಕೆಂಪು ಅಕ್ಕಿ – 1 ಕಪ್‌, ಕೊಬ್ಬರಿ ತುರಿ- 1 ಕಪ್‌, ಬೆಲ್ಲ -3/4 ಕಪ್‌, ಏಲಕ್ಕಿ, ಗೋಡಂಬಿ, ಒಣ ದ್ರಾಕ್ಷಿ
ಮಾಡುವ ವಿಧಾನ: ಕೆಂಪಕ್ಕಿಯನ್ನು ನೀರಿನಲ್ಲಿ ತೊಳೆದು, ಒಣಗಿಸಿ. ನಂತರ, ಅಕ್ಕಿಯನ್ನು ಹೊಂಬಣ್ಣ ಬರುವವರೆಗೆ ಹುರಿದು, ಏಲಕ್ಕಿ ಜೊತೆ ಸೇರಿಸಿ ಮಿಕ್ಸಿಯಲ್ಲಿ ಪುಡಿಮಾಡಿಕೊಳ್ಳಿ. ಅದಕ್ಕೆ ತುರಿದ ಬೆಲ್ಲ, ಕೊಬ್ಬರಿ ತುರಿ, ದ್ರಾಕ್ಷಿ, ಗೋಡಂಬಿ ತುಣುಕು ಬೆರೆಸಿ, ಚೆನ್ನಾಗಿ ಮಿಶ್ರಣ ಮಾಡಿ, ಉಂಡೆ ಕಟ್ಟಿ (ಉಂಡೆ ಸರಿಯಾಗಿ ಬರದಿದ್ದರೆ 2-3 ಚಮಚ ಬಿಸಿ ತುಪ್ಪ ಬಳಸಬಹುದು)

Advertisement

Udayavani is now on Telegram. Click here to join our channel and stay updated with the latest news.

Next