ತುಟಿ ಕಪ್ಪಾಗಿದೆ. ಏನು ಮಾಡಿದರೂ ಅಂದ ಗಾಣಿಸಲು ಆಗುತ್ತಿಲ್ಲ- ಇದು ಹಲವು ಹುಡುಗಿಯರ ಗೊಣಗಾಟ. ನೀನು ಸ್ಮೋಕ್ ಮಾಡ್ತೀಯಾ? ಕಾಫಿ, ಟೀ ಜಾಸ್ತಿ ಕುಡಿತೀಯ ಅನ್ಸುತ್ತೆ, ಅದಕ್ಕೇ ಹೀಗಾಗಿದೆ… ಎಂಬಿತ್ಯಾದಿ ಪ್ರಶ್ನೆ, ಸಲಹೆಗಳಿಂದ ಬೇಸತ್ತು ಹೋಗಿರುವ ಹುಡುಗಿಯರಿಗಾಗಿ ಇಲ್ಲಿ ಕೆಲವು ಸಲಹೆಗಳಿವೆ. ದುಬಾರಿ ಕ್ರೀಂ, ಜೆಲ್‌ಗಳನ್ನು ಬಳಸದೆಯೇ, ತುಟಿಯ ಬಣ್ಣವನ್ನು ತಿಳಿಯಾಗಿಸುವ ವಿಧಾನ ಗಳನ್ನು ನೀವೂ ಮಾಡಿ ನೋಡಿ.
-ಒಂದು ಚಮಚ ಅರಿಶಿಣ, ಹಾಲು, ಅರ್ಧ ಚಮಚ ಜೇನುತುಪ್ಪ, ಅರ್ಧ ಚಮಚ ಲಿಂಬೆರಸ ಮತ್ತು ಒಂದು ಚಮಚ ರೋಸ್‌ವಾಟರ್ ಅನ್ನು ಮಿಶ್ರಣ ಮಾಡಿ, ತುಟಿಗಳಿಗೆ ಲೇಪಿಸಿ, ಅರ್ಧ ಗಂಟೆ ನಂತರ ತೊಳೆಯಿರಿ.
-ಯೋಗರ್ಟ್/ ಮೊಸರು, ಜೇನುತುಪ್ಪ, ಕಡಲೆಹಿಟ್ಟು, ಲಿಂಬೆರಸವನ್ನು ಸಮಪ್ರಮಾಣದಲ್ಲಿ ಬೆರೆಸಿ ಪೇಸ್ಟ್ ತಯಾರಿಸಿ. ಅದನ್ನು ತುಟಿಗಳಿಗೆ ಹಚ್ಚಿ, ಅರ್ಧ ಗಂಟೆ ನಂತರ ತೊಳೆಯಿರಿ.
-ಚಂದನ ಮತ್ತು ಅರಿಶಿಣವನ್ನು ಸಮಪ್ರಮಾಣದಲ್ಲಿ ನೀರಿನಲ್ಲಿ ಕಲಸಿ, ತುಟಿಗಳಿಗೆ ಹಚ್ಚಿ.
-ಗ್ಲಿಸರಿನ್ ಅನ್ನು ರೋಸ್‌ವಾಟರ್ ಜೊತೆಗೆ ಮಿಶ್ರಣ ಮಾಡಿ, ತುಟಿ ಹಾಗೂ ಬಾಯಿಯ ಸುತ್ತ ಹಚ್ಚಬಹುದು.
-ಟೊಮೇಟೊ ಹೋಳನ್ನು ತುಟಿಗಳಿಗೆ ಉಜ್ಜಿದರೆ ಅಥವಾ ಟೊಮೆಟೋ ರಸವನ್ನು ಹಚ್ಚಿದರೆ, ತುಟಿಯ ರಂಗು ಹೆಚ್ಚುತ್ತದೆ.
-ಅರ್ಧ ಚಮಚ ಸಕ್ಕರೆಗೆ (ಬ್ರೌನ್‌ಶುಗರ್ ಇದ್ದರೆ ಉತ್ತಮ), ಸಮಪ್ರಮಾಣದಲ್ಲಿ ಜೇನುತುಪ್ಪ ಬೆರೆಸಿ, ತುಟಿಗೆ ಹಚ್ಚಿ ಹತ್ತು ನಿಮಿಷದ ನಂತರ ತೊಳೆದುಕೊಳ್ಳಿ.
-ಲಿಂಬೆರಸಕ್ಕೆ, ಬಾದಾಮಿ ಎಣ್ಣೆಯನ್ನು ಬೆರೆಸಿ ಹಚ್ಚಿದರೂ ಉಪಯೋಗವಾಗುತ್ತದೆ.