ಶಿರಸಿ: ಇಲ್ಲಿನ ಶ್ರೀ ಯಕ್ಷಗಾನ ಕಲಾಮೇಳ ವತಿಯಿಂದ ನಗರದ ಲಯನ್ಸ್ ಶಾಲೆಯ ಲಯನ್ಸ್ ಸಭಾಂಗಣದಲ್ಲಿ ಭಾನುವಾರ ತೀರ್ಥಹಳ್ಳಿ ರಮೇಶ ಆಚಾರ್ ಅವರು ರಚಿಸಿದ ಮಾಳವಿಕಾ ಪರಿಣಯ ಯಕ್ಷಗಾನ ರಂಗ ಕೃತಿಯನ್ನು ಸ್ವರ್ಣವಲ್ಲಿ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಬಿಡುಗಡೆಗೊಳಿಸಿದರು.
ಬಳಿಕ ಆಶೀರ್ವಚನ ನುಡಿದ ಶ್ರೀಗಳು, ಜನ ಸಾಮಾನ್ಯರಿಗೆ ಕಾಳಿದಾಸನ ಪರಿಚಯ ಇಲ್ಲ, ಅದನ್ನು ಯಕ್ಷಗಾನಕ್ಕೆ ರಮೇಶ ಆಚಾರ್ ಪರಿಚಯ ಮಾಡಿದ್ದಾರೆ ಎಂದರು.
ಯಕ್ಷಗಾನ ಕವಿಯ ಉಲ್ಲೇಖ ಆಗಬೇಕು, ಅದನ್ನು ಉಲ್ಲೇಖಿಸುವ ಕಾರ್ಯ ಆಗಬೇಕು, ಕವಿ ಮೂಲ, ಯಕ್ಷಗಾನ ಪದ್ಯದೊಂದಿಗೆ ಕವಿಯ ಹೆಸರು ಉಳಿಯಬೇಕು ಎಂದರು.
ಜನಮಾಧ್ಯಮ ದಿನಪತ್ರಿಕೆ ಸಂಪಾದಕ ಅಶೋಕ ಹಾಸ್ಯಗಾರ ಅಧ್ಯಕ್ಷತೆ ವಹಿಸಿ, ಈ ಕಥೆ ನಾಟಕವಾಗಿದೆ, ಆದರೆ ಯಕ್ಷಗಾನಕ್ಕೆ ಬಂದಿರಲಿಲ್ಲ ಎಂದರು.
ಕೃತಿಕಾರ, ಕಲಾವಿದ ಎಂ.ಕೆ.ರಮೇಶ ಆಚಾರ್, ಇದೊಂದು ಅಪರೂಪದ ಅವಕಾಶ ಎಂದರು. ಲಯನ್ಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ವಿ.ಜಿ. ಭಟ್, ಯಕ್ಷಗಾನ ಬೆಳಗಲಿ ಎಂದರು. ಯಕ್ಷಗಾನ ಅಕಾಡೆಮಿ ಸದಸ್ಯೆ ನಿರ್ಮಲಾ ಗೋಳಿಕೊಪ್ಪ ಯಕ್ಷಗಾನದಲ್ಲಿ ತಪ್ಪಾಗುತ್ತದೆ. ಆದರೆ ಅದನ್ನು ತಿದ್ದಿಕೊಂಡು ನಡೆಯಬೇಕು ಎಂದರು.
ಶ್ರೀಗಳು ಎಮ್.ಕೆ.ರಮೇಶ ಆಚಾರ್ಯ ತೀರ್ಥಹಳ್ಳಿ ಅವರನ್ನು ಗೌರವಿಸಿದರು. ಕೇಶವ ಹೆಗಡೆ ಮಂಗಳೂರು ಕಲಾ ಮೇಳ ಹಾಗೂ ಹೊಸಪ್ರಯೋಗದ ಕುರಿತು ಪ್ರಸ್ತಾವಿಕ ಮಾತನಾಡಿದರು. ಸುಜಯ್ ಹೆಗಡೆ ಸಮ್ಮಾನ ಪತ್ರ ವಾಚಿಸಿದರು. ರೋಹಿಣಿ ಹೆಗಡೆ ನಿರ್ವಹಿಸಿದರು.