Advertisement

Swarnavalli Mutt; ಥಂಡಿಮನೆಗೆ ಹೊಸ್ತೋಟ, ಅತ್ತಿಮುರಡಿಗೆ‌ ದಂಟ್ಕಲ್ ಪ್ರಶಸ್ತಿ

03:52 PM Sep 17, 2023 | Team Udayavani |

ಶಿರಸಿ: ಸೋಂದಾ ಸ್ವರ್ಣವಲ್ಲೀ‌ ಮಹಾ ಸಂಸ್ಥಾನದ ಯಕ್ಷ ಶಾಲ್ಮಲಾ ಸಂಸ್ಥೆ ನೀಡುವ ರಾಜ್ಯ ಮಟ್ಟದ ಹೊಸ್ತೋಟ‌ ಮಂಜುನಾಥ ಭಾಗವತ ಪ್ರಶಸ್ತಿ ಈ ಬಾರಿ ಹಿರಿಯ ಕಲಾವಿದ ಥಂಡಿಮನೆ ಶ್ರೀಪಾದ ಭಟ್ಟ ಅವರಿಗೆ ಹಾಗೂ ದಿ.ಎಂ.ಎ.ಹೆಗಡೆ ದಂಟ್ಕಲ್ ಪ್ರಶಸ್ತಿ ಹಿರಿಯ ವಿದ್ವಾಂಸ ಅತ್ತಿಮುರಡು ವಿಶ್ವೇಶ್ವರ ಹೆಗಡೆ ಅವರಿಗೆ ಪ್ರಕಟಿಸಲಾಗಿದೆ.

Advertisement

ಸೆ.23 ಹಾಗೂ24 ರಂದು‌ ಸ್ವರ್ಣವಲ್ಲೀಯಲ್ಲಿ ‌ನಡೆಯುವ ಯಕ್ಷೋತ್ಸವದಲ್ಲಿ ಸ್ವರ್ಣವಲ್ಲೀ‌ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ಪ್ರಶಸ್ತಿ‌ ಪ್ರದಾನ ಮಾಡಲಿದ್ದಾರೆ.

ವಿಶ್ವೇಶ್ವರ ಹೆಗಡೆ ಅತ್ತೀಮುರುಡು
ಸಿದ್ದಾಪುರ ತಾಲೂಕಿನ ಹೇರೂರಿನ ಹತ್ತಿರದವರು. ಏಕಲವ್ಯನಾಗಿ, ಕೃಷಿ ಚಟುವಟಿಕೆಗಳ ಜವಾಬ್ದಾರಿಗಳ ಮಧ್ಯದಲ್ಲೇ ಸ್ವಾಧ್ಯಯನದ ಅನೇಕ ಸಾಧನೆ ಮಾಡಿದವರು. ಬೆಳ್ಳಿ ಜಾರಿದ ಮೇಲೆ, ಯುದ್ಧ ಮಂಡಲ ಮಧ್ಯದೊಳಗೆ, ಗೀತ ಭಾರತ, ಹೂವು ಕಟ್ಟಿದ ಹುತ್ತ, ಬಿಳಗಿಯ ಅರಸು ಮನೆತನ, ಶತಮಾನದ ಗತಿ ಬಿಂಬ, ಚಿಗುರು-ಚಪ್ಪರ- ಕಂಟಿ, ಹೇರೂರು ಸೀಮೆ ( ಐತಿಹಾಸಿಕ ಸಮೀಕ್ಷಾಧ್ಯಯನ) , ಇಟಗಿ ಇತಿ ವೃತ್ತ, ನಿಸರ್ಗ ಸಂದೇಶ ( ಯಕ್ಷಗಾನ), ಒಂಟಿ ಬಂಡೆ (ನಾಟಕ) ಕೃತಿಗಳು, ನಾಟ್ಯ ಶಾಸ್ತ್ರ ಪರಂಪರೆ ಮತ್ತು ಪ್ರಾಸಂಗಿಕತೆ ( ಹಿಂದಿಯಿಂದ ಕನ್ನಡಾನುವಾದ), ಲಘು ವಾಸುದೇವ ಮನನಮ್ ( ಸಂಸ್ಕೃತದಿಂದ ಕನ್ನಡ), ನಾಟ್ಯ ಶಾಸ್ತ್ರ ವಿಚಾರ ( ಇಂಗ್ಲೀಷನಿಂದ ಕನ್ನಡ) ಮುದ್ರಣಗೊಂಡಿದೆ. ನಾಟ್ಯ ಶಾಸ್ತ್ರ ವಿಶ್ವಕೋಶ ಭಾಗ 1 ಮತ್ತು 2 ( ಹಿಂದಿಯಿಂದ ಕನ್ನಡ), ರಾಜಾ ಭಾಸ್ಕರವರ್ಮ, ದ್ವಾರಕಾವತರಣ, ಶೂನ್ಯ ಸಂಪಾದನೆ( ಅಲ್ಲಮಪ್ರಭುವಿನ ಕಥೆ) ಮುದ್ರಣವಾಗಬೇಕಿದೆ. ೨೦೧೭ರಲ್ಲಿ ಸಿದ್ದಾಪುರ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೆ ಭಾಜನರಾದವರು. ಶಾಸ್ತ್ರ ತಿಲಕ, ಉಪಾಯನ, ಚಂದುಬಾಬು ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.

ಥಂಡಿಮನೆ

ಶ್ರೀಪಾದ ಭಟ್ಟ ಅವರು ಶಿರಸಿಯ ಸಾಲಕಣಿ ಕೋಳಿಗಾರ ಥಂಡಿಮನೆಯವರು. ಹೊಸ್ತೋಟ ಮಂಜುನಾಥ ಭಾಗವತರ ಶಿಷ್ಯರು. 60 ರ ಸಂಭ್ರಮದಲ್ಲಿ ಇರುವ ಇವರು ನಿರಂತರವಾಗಿ 40 ವರ್ಷದಿಂದ ವೃತ್ತಿ ಮೇಳದ ಕಲಾವಿದರಾಗಿ ಕೆಲಸ ಮಾಡುತ್ತಿದ್ದಾರೆ.

Advertisement

ಪಂಚಲಿಂಗೇಶ್ವರ ಯಕ್ಷಗಾನ ಮಂಡಳಿಯಲ್ಲಿ ಪ್ರಪ್ರಥಮವಾಗಿ ಒಡ್ಡೋಲಗದ ವೇಷಧಾರಿಯಾಗಿ ಪ್ರವೇಶಿಸಿದ ಶ್ರೀಪಾದ ಥಂಡಿಮನೆ ಅವರು ಈಗ ಪೆರ್ಡೂರು ಮೇಳದ ಪ್ರಧಾನ ವೇಷಧಾರಿಯಾಗಿ ವಿಜ್ರಂಭಿಸುತ್ತಿರುವುದು ಅವರ ಸಾಧನೆಯ ಮಜಲುಗಳನ್ನು ತೋರಿಸುತ್ತದೆ.
ರಂಗದಲ್ಲಿ ತಮ್ಮ ಗತ್ತು ಗಾಂಭೀರ್ಯಗಳಿಂದ ಪ್ರೇಕ್ಷಕರ ಮನಸ್ಸಿನಲ್ಲಿ ಅಭಿಮಾನದ ವಾತಾವರಣ ಸೃಷ್ಟಿಸುವ ಭಟ್ಟರು ಖಳ ನಾಯಕ, ಕಥಾ ನಾಯಕನ ಪಾತ್ರಕ್ಕೆ ಹೆಸರಾಗಿದ್ದಾರೆ.

ಅವರ ಪ್ರಾಮಾಣಿಕ ಸಾಧನೆಯನ್ನು ಗುರುತಿಸಿ ಅನೇಕ ಬಿರುದುಗಳು, ಸಮ್ಮಾನಗಳು ಅವರನ್ನು ಅರಸಿಕೊಂಡು ಬಂದಿದೆ. ಮುಂಬಯಿ, ಹೈದರಾಬಾದ್ ಕನ್ನಡ ಸಂಘ ಇವರನ್ನು ಗೌರವಿಸಿ ಸಮ್ಮಾನಿಸಿದೆ. ಬೆಂಗಳೂರಿನ ಯಕ್ಷಗಾನ ಯೋಗಕ್ಷೇಮ ಅಭಿಯಾನದ ಥಂಡಿಮನೆ ಯಕ್ಷ ಗೌರವ ನೀಡಿ ಗೌರವಿಸಿತ್ತು. ಸ್ವರ ಸಿಂಹ, ಗತ್ತಿನ ಗಂಡುಗಲಿ, ಯಕ್ಷ ಕೇಸರಿ, ಸ್ವರ ಸಾಮ್ರಾಟ, ಯಕ್ಷ ಭೂಷಣ ಇನ್ನೂ ಅನೇಕ ಬಿರುದುಗಳು ಇವರಿಗೆ ದಕ್ಕಿದೆ‌ ಎಂಬುದು ಉಲ್ಲೇಖನೀಯ ಎಂದು ಯಕ್ಷ ಶಾಲ್ಮಲಾದ ಕಾರ್ಯದರ್ಶಿ ನಾಗರಾಜ ಜೋಶಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next