Advertisement

ಸ್ವಾಮೀಜಿಗಳ ಸಿನಿಮಾಸಕ್ತಿ ದೇವಿ ಮಹಾತ್ಮೆ

12:30 AM Mar 15, 2019 | |

ಕನ್ನಡದಲ್ಲಿ ಈಗಾಗಲೇ ಅಸಂಖ್ಯಾತ ಭಕ್ತಿ ಪ್ರಧಾನ ಚಿತ್ರಗಳು, ದೇವ-ದೇವತೆಯರ ಮಹಿಮೆಯನ್ನು ಸಾರುವ ಚಿತ್ರಗಳು ಬಂದು ಹೋಗಿವೆ. ರಾಮ, ಕೃಷ್ಣ, ಶ್ರೀನಿವಾಸ, ಸಾಯಿಬಾಬಾ, ಅಯ್ಯಪ್ಪ ಸ್ವಾಮಿ, ದುರ್ಗೆ, ಕಾಳಿ, ಚಾಮುಂಡಿ ಹೀಗೆ ಹುಡುಕುತ್ತಾ ಹೋದರೆ ಇಂತಹ ನೂರಾರು ದೇವರ ಚಿತ್ರಗಳು ಸಿಗುತ್ತವೆ. ಈಗ ಇಂತಹ ಚಿತ್ರಗಳ ಸಾಲಿಗೆ “ಶ್ರೀ ಅಥರ್ವಣ ಪ್ರತ್ಯಂಗಿರಾ’ ಎನ್ನುವ ಹೊಸಚಿತ್ರ ಸೇರ್ಪಡೆಯಾಗುತ್ತಿದೆ. ನಿಮಗೆ ಅಚ್ಚರಿಯಾಗಬಹುದು. ಏಕೆಂದರೆ, ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುತ್ತಿರುವವರು ಯಾರೂ ಚಿತ್ರರಂಗಕ್ಕೆ ಸಂಬಂಧಿಸಿದವರಲ್ಲ. ಬದಲಾಗಿ ದೇವರ ಸೇವೆಯನ್ನು ಮಾಡಿಕೊಂಡು, ಧರ್ಮದರ್ಶಿಗಳಾಗಿ ಧಾರ್ಮಿಕ ಕಾರ್ಯಗಳನ್ನು ಮುನ್ನೆಡಸಿಕೊಂಡು ಹೋಗುತ್ತಿರುವ ಸ್ವಾಮೀಜಿಗಳು!  

Advertisement

ಹೌದು, ಬೆಂಗಳೂರಿನ ಬಿನ್ನಿಮಿಲ್‌ನಲ್ಲಿರುವ ಶ್ರೀ ಅಂಗಾಳ  ಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಶ್ರೀ ಸಪ್ತಗಿರಿ ಅಮ್ಮ (ಶ್ರೀ ಏಳುಮಲೈ ಸ್ವಾಮೀಜಿ) “ಶ್ರೀ ಅಥರ್ವಣ ಪ್ರತ್ಯಂಗಿರಾ’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ಮಾಣ ಮತ್ತು ನಿರ್ದೇಶನವನ್ನು ಮಾಡಿದ್ದಾರೆ. 
ಅಂದಹಾಗೆ, ಶ್ರೀಮನ್ನಾರಾಯಣನು ನರಸಿಂಹನ ಅವತಾರವನ್ನೆತ್ತಿ ಅಸುರನಾದ ಹಿರಣ್ಯಕಶ್ಯಪುವನ್ನು ಸಂಹರಿಸುತ್ತಾನೆ. ನಂತರ ಹಿರಣ್ಯಕಶ್ಯಪುವಿನಲ್ಲಿದ್ದ ಅಸುರ ಅಂಶಗಳು ನರಸಿಂಹನ ದೇಹವನ್ನು ಪ್ರವೇಶಿಸುತ್ತವೆ. ಕೊನೆಗೆ ದೇವತೆಗಳ ಶಕ್ತಿ ಸಂಗಮವಾಗಿ ಪ್ರತ್ಯಂಗಿರಾ ದೇವಿ ಅವತಾರವೆತ್ತಿ ನರಸಿಂಹನನ್ನು ವಧಿಸಿ, ಶ್ರೀಮನ್ನಾರಾಯಣನ ನರಸಿಂಹ ಅವತಾರಕ್ಕೆ ಮುಕ್ತಿ ನೀಡುತ್ತಾಳೆ. ಇಂಥ ಪ್ರತ್ಯಂಗಿರಾ ದೇವಿಯನ್ನು ಕಲಿಯುಗದಲ್ಲಿ ಆರಾಧಿಸಿದರೆ, ಸಕಲ ಕಷ್ಟ-ಕಾರ್ಪಣ್ಯಗಳು ದೂರವಾಗಿ, ಜನರು ಮುಕ್ತಿ ಮಾರ್ಗದಲ್ಲಿ ನಡೆಯುವಂತಾಗುತ್ತಾರೆ. ಪ್ರತ್ಯಂಗಿರಾ ದೇವಿಯ ಈ ಮಹಿಮೆಯನ್ನು ಈ ಚಿತ್ರದ ಮೂಲಕ ಸಾರಲಾಗಿದೆ. ಇಂದಿಗೂ ಈ ದೇವಿಯನ್ನು ಬೇಡಿ ಬಂದ ಭಕ್ತರ ಬಯಕೆಗಳು ಈಡೇರುತ್ತದೆ. ದೇವಿಯ ಪವಾಡಗಳು ನಡೆಯುತ್ತವೆ. ಅದೆಲ್ಲವನ್ನೂ ಈ ಚಿತ್ರದಲ್ಲಿ ಹೇಳಲಾಗಿದೆ’ ಎಂದು ಚಿತ್ರದ ಬಗ್ಗೆ ವಿವರಣೆ ಕೊಡುತ್ತದೆ ಚಿತ್ರತಂಡ. 

ಇನ್ನು “ಶ್ರೀ ಅಂಗಾಳ ಪರಮೇಶ್ವರಿ ಫಿಲಂ ಪೊ›ಡಕ್ಷನ್ಸ್‌’ ಬ್ಯಾನರ್‌ನಲ್ಲಿ ಭಕ್ತ ಸಮೂಹದ ದೇಣಿಗೆಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಅನುಕೃಷ್ಣಾ, ರೂಪಾಗೌಡ, ಮೋಹನ್‌, ಮರಿಸ್ವಾಮಿ, ಮಹಾನದಿ ಶಂಕರ್‌, ಸೀತಾ, ಗಿರೀಶ್‌ ಜತ್ತಿ, ಕಾವ್ಯ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಬಿಗ್‌ಬಾಸ್‌ ಖ್ಯಾತಿಯ ಬ್ರಹ್ಮಾಂಡ ಗುರೂಜಿ, ಪ್ರತ್ಯಂಗಿರಾ ದೇವಿಯನ್ನು ಪರಿಚಯಿಸುವುದರ ಮೂಲಕ ಚಿತ್ರದ ಕಥೆ ತೆರೆದುಕೊಳ್ಳಲಿದೆ. 
ಈ ಚಿತ್ರಕ್ಕೆ ಹರಿಕಾಂತ್‌, ಶ್ರೀಧರ್‌. ಕೆ ಛಾಯಾಗ್ರಹಣ, ಅರುಣ್‌ ಐಎಲ್‌ಸಿ ಸಂಕಲನ ಕಾರ್ಯ ನಿರ್ವ ಹಿ­ಸಿದ್ದಾರೆ. ಚಿತ್ರದ ಹಾಡುಗಳಿಗೆ ಕರುಣಾ (ಕೆಜಿಎಫ್) ಸಂಗೀತ ಸಂಯೋಜಿಸಿದ್ದಾರೆ. 

ಇತ್ತೀಚೆಗೆ “ಶ್ರೀ ಅಥರ್ವಣ ಪ್ರತ್ಯಂಗಿರಾ’ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಚಿತ್ರಕ್ಕೆ ಯಾವುದೇ ಕಟ್ಸ್‌ ನೀಡದೆ “ಯು’ ಸರ್ಟಿಫಿಕೇಟ್‌ ನೀಡಿದೆ. ಇದೇ ಖುಷಿಯಲ್ಲಿ, ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ಚಿತ್ರದ ಬಗ್ಗೆ ಕೆಲ ವಿಷಯ­ಗಳನ್ನು ಹಂಚಿಕೊಂಡಿತು. ಸದ್ಯ ಟ್ರೇಲರ್‌ ಮೂಲಕ ಹೊರಬಂದಿ­ರುವ “ಶ್ರೀ ಅಥರ್ವಣ ಪ್ರತ್ಯಂಗಿರಾ’ ಮಹಿಮೆಗಳನ್ನು, ಮುಂದಿನ ಏಪ್ರಿಲ್‌ ವೇಳೆಗೆ ಸಂಪೂರ್ಣವಾಗಿ ತೆರೆಮೇಲೆ ನೋಡಿ ಕಣ್ತುಂಬಿಕೊಳ್ಳಬಹುದು ಎನ್ನುತ್ತದೆ ಚಿತ್ರತಂಡ.

ಜಿ. ಎಸ್‌. ಕಾರ್ತಿಕ ಸುಧನ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next