Advertisement

ಭೈರನಹಟ್ಟಿ ಶಾಂತಲಿಂಗ ಶ್ರೀ ಮೌನ ಲಿಂಗಾನುಷ್ಠಾನ ಮಂಗಲೋತ್ಸವ

06:50 PM Aug 11, 2021 | Team Udayavani |

ನರಗುಂದ: ಕನ್ನಡ ಎಂದಾಕ್ಷಣ ನಮಗೆಲ್ಲ ನೆನಪಾಗುವುದು ಕನ್ನಡ ನಾಡು-ನುಡಿ, ನೆಲ-ಜಲಕ್ಕೆ ಧಕ್ಕೆ ಬಂದಾಗಲೆಲ್ಲ ಅದರ ರಕ್ಷಣೆಗೆ
ಸದಾ ಸಿದ್ಧವಾಗಿರುವ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ. ಇದು ಈ ಭಾಗದಲ್ಲಿ ಕನ್ನಡ ಮಠವೆಂದೇ ಪ್ರಖ್ಯಾತಿ ಪಡೆದಿದ್ದು ಹೆಮ್ಮೆಯ ಸಂಗತಿ.
ಅಂತಹ ದೊರೆಸ್ವಾಮಿ ವಿರಕ್ತಮಠದ ಪೀಠಾಧಿಪತಿ ಪೂಜ್ಯ ಶ್ರೀ ಶಾಂತಲಿಂಗ ಸ್ವಾಮೀಜಿ ಸುಮಾರು ಒಂದೂವರೆ ದಶಕಗಳ ಕಾಲ ಶ್ವೇತ
ವಸ್ತ್ರದಾರಿಯಾಗಿಯೇ ಸಮಾಜಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟವರು.

Advertisement

ಕನ್ನಡದ ಕೈಂಕರ್ಯ: 2007ರಲ್ಲಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಆಗ್ರಹಿಸಿ ತ್ರಿವಿಧ ದಾಸೋಹಿ ಜಗದ್ಗುರು ಡಾ|ತೋಂಟದ ಸಿದ್ಧಲಿಂಗ ಯತಿಗಳ ಸಾನ್ನಿಧ್ಯದಲ್ಲಿ ಭೈರನಹಟ್ಟಿಯಿಂದ ನರಗುಂದದವರೆಗೆ ಪಾದಯಾತ್ರೆ ಮೂಲಕ ತೆರಳಿ ಮನವಿ ಸಲ್ಲಿಸಿದ್ದು ಅವಿಸ್ಮರಣೀಯ. ನಿತ್ಯವೂ ಜನರ ಒಳಿತಿಗಾಗಿ, ಮಳೆ, ಬೆಳೆ ಸಮೃದ್ಧಿಗಾಗಿ, ಜಪ-ತಪ, ಅನುಷ್ಠಾನಗಳ ಮೂಲಕ ಭಕ್ತರ ಏಳಿಗೆ ಬಯಸುವ ಸುಕ್ಷೇತ್ರ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಶಿವಯೋಗ ಸಾಧಕರಲ್ಲಿ ಒಬ್ಬರಾಗಿದ್ದಾರೆ.

ಇದನ್ನೂ ಓದಿ:ವರ್ಷಕ್ಕೊಬ್ಬ ರೈತರಿಗೆ ರೇಷ್ಮೆ ಇಲಾಖೆಯಿಂದ ಸಬ್ಸಿಡಿ!

ಕಾವಿ ಧಾರಣೆ: ನಡೆದಾಡುವ ಪುಸ್ತಕ ವಿಶ್ವವಿದ್ಯಾಲಯ ಎಂದೇ ಗುರುತಿಸಿಕೊಂಡ ಡಾ|ತೋಂಟದ ಸಿದ್ಧಲಿಂಗ ಯತಿಗಳ ಮಾರ್ಗದರ್ಶನದಲ್ಲಿ ಕನ್ನಡದ ಕೈಂಕರ್ಯಕ್ಕೆ ಬದ್ಧರಾಗಿ ಅವರ ಸಾನ್ನಿಧ್ಯದಲ್ಲಿ 11-02-2009ರಂದು ಕಾವಿ ವಸ್ತ್ರ ಧರಿಸಿ ಸಮಾಜ ಸೇವೆಗೆ ಕಂಕಣ ತೊಟ್ಟರು. 24-04-2011ರಂದು ಕನ್ನಡ ವಚನಗಳ ಮೂಲಕ ಪಟ್ಟಾಧಿಕಾರ ನೆರವೇರಿಸಿಕೊಂಡು ದೊರೆಸ್ವಾಮಿ ವಿರಕ್ತಮಠ ಪೀಠಾಧಿಪತಿಗಳಾದರು.
ತೋಂಟದ ಸಿದ್ಧಲಿಂಗ ಶ್ರೀಗಳ ಕರಕಮಲ ಸಂಜಾತರಾದ ಶ್ರೀಗಳು ಅವರ ಆಶಯದಂತೆ ಜಂಗಮಲಿಂಗ ಕ್ಷೇತ್ರ ಯಡೆಯೂರು
ಸಿದ್ಧಲಿಂಗೇಶ್ವರ ಸನ್ನಿಧಿಯಲ್ಲಿ 12-03-2010ರಿಂದ 101 ದಿನಗಳ ಕಾಲ ಮೌನ ಲಿಂಗಾನುಷ್ಠಾನ ಪೂರೈಸಿದರು. ಅಂದಿನಿಂದ ಪ್ರತಿವರ್ಷ
ಲಿಂಗಾನುಷ್ಠಾನ ಆರಂಭಿಸಿದ ಶ್ರೀಗಳು ಭೈರನಹಟ್ಟಿಯಲ್ಲಿ 6 ವರ್ಷ, ಬದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ 4 ವರ್ಷ
ಮೌನಲಿಂಗಾನುಷ್ಠಾನ ಪೂರೈಸಿದರು.

ಸಾಹಿತ್ಯ ಆರಾಧಕರು: ಕನ್ನಡ ಕೈಂಕರ್ಯದ ಜೊತೆಗೆ ಮೌನ ಲಿಂಗಾನುಷ್ಠಾನ ಗಳಿಗೆಯಲ್ಲಿ ಪ್ರಥಮ ಬಾರಿಗೆ ನಮ್ಮೂರು ಭೈರನಹಟ್ಟಿ (ನಮ್ಮೂರುನಮ್ಮ ಮಠ) ಎಂಬ ಚೊಚ್ಚಲ ಕೃತಿ ಪ್ರಕಟಿಸಿದರು. ನಂತರ ಗೋವನಕೊಪ್ಪ ಗ್ರಾಮದ ಇತಿಹಾಸ ಸಾರುವ ಗೋವನಕೊಪ್ಪ ಎಂಬ ಕೃತಿ ಹಾಗೂ ನಾದಬ್ರಹ್ಮಾನಂದ ಸ್ವಾಮಿಗಳ ಜೀವನ ಚರಿತ್ರೆ(ಅಪ್ರಕಟಿತ ಕೃತಿ)ಪ್ರಕಟಿಸಿದ್ದಾರೆ. ಸದ್ಯ ಯಡೆಯೂರು ಕ್ಷೇತ್ರದಲ್ಲಿ ಪೂರೈಸಿದ 12ನೇ ವರ್ಷದ ಮೌನ ಲಿಂಗಾನುಷ್ಠಾನ ಸಂದರ್ಭದಲ್ಲಿ ಪೂಜ್ಯರು ಯಡಿಯೂರು ಸಿದ್ಧಲಿಂಗೇಶ್ವರರ ಕುರಿತು ಜಾನಪದ ತ್ರಿಪದಿ ರಚನೆಯಲ್ಲಿ
ತೊಡಗಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ನೂರಾರು ಕವನಗಳನ್ನು ರಚಿಸಿ ಸಮಾಜ ಸೇವೆಯೊಂದಿಗೆ ಕನ್ನಡ ತಾಯಿಗೆ ಸಾಹಿತ್ಯಾರಾಧನೆ ಮಾಡುತ್ತಿರುವುದು ಅವರ ಸಾಹಿತ್ಯ ಕೃಷಿಗೆ ನಿದರ್ಶನವಾಗಿದೆ.

Advertisement

-ಸಿದ್ಧಲಿಂಗಯ್ಯ ಮಣ್ಣೂರಮಠ

Advertisement

Udayavani is now on Telegram. Click here to join our channel and stay updated with the latest news.

Next