ಸೊರಬ: ದೇಶವನ್ನು ಡಾ| ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ಆಳ್ವಿಕೆ ಮಾಡಬೇಕೇ ವಿನಃ, ಪ್ರಸ್ತುತ ಪುರೋಹಿತಶಾಹಿಗಳು ಮುನ್ನಡೆಸುತ್ತಿರುವುದು ದುರ್ದೈವ ಎಂದು ಮುಂಡರಗಿಯ ತೋಂಟದಾರ್ಯ ಹಾಗೂ ಬೈಲೂರಿನ ನಿಷ್ಕಲ ಮಂಟಪದ ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ರಂಗಮಂದಿರದಲ್ಲಿ ಸುದ್ದಿಲೋಕ ಪತ್ರಕರ್ತರ ಬಳಗದಿಂದ ಹಮ್ಮಿಕೊಂಡಿದ್ದ ಚಿಂತನ-ಮಂಥನ ಹಾಗೂ ಸಾಧರಿಗೆ ಸನ್ಮಾನ ಸಮಾರಂಭ ಉದ್ಘಾಟಸಿ ಅವರು ಉಪನ್ಯಾಸ ನೀಡಿದರು.
ಮನುಷ್ಯನಿಗೆ ಮುಖ್ಯವಾಗಿ ಅನ್ನ, ಅರಿವು, ಅರಿವೆ, ಆಶ್ರಯ, ಔಷಧ ಮೂಲ ಸೌಲಭ್ಯಗಳನ್ನು ನೀಡುವುದೇ ಧರ್ಮವಾಗಿದೆ. ಜಾತಿ-ಮತ, ಧರ್ಮಗಳ ಭೇದಗಳನ್ನು ತೊಡೆದು ಹಾಕಿ ಸಮಾನತೆಯಡೆಗೆ ಹೆಜ್ಜೆ ಹಾಕಬೇಕಿದೆ. ನಾಗರಿಕ ಸಮಾಜದಲ್ಲಿ ಅಭಿವೃದ್ಧಿ ಮತ್ತಿತರ ಕಾರ್ಯಗಳಿಗೆ ರಾಜಕಾರಣ ಅವಶ್ಯವಿದೆ. ಆದರೆ, ರಾಜಕಾರಣದಲ್ಲಿ ಧರ್ಮ ಬೆರೆಸುವುದು ಸಲ್ಲದು. ಹಿಂಸಾ ಪ್ರವೃತ್ತಿಗಳು ಮತ್ತು ದ್ವೇಷ ಅಸೂಯೆಗಳನ್ನು ತೊಡೆದು ಪ್ರತಿಯೊಬ್ಬರಲ್ಲೂ ಮಾನವೀಯತೆಯನ್ನು ಕಾಣಬೇಕು.
ಶಿವಮೊಗ್ಗ ಜಿಲ್ಲೆ ಶರಣರ ನಾಡಾಗಿದ್ದು, ತಾಲೂಕು ಹೋರಾಟದ ನೆಲೆಯಾಗಿದೆ. ಕನ್ನಡದ ಮೊದಲ ಕವಯಿತ್ರಿ ಅಕ್ಕಮಹಾದೇವಿ, ಸತ್ಯಕ್ಕ ಮೊದಲಾದ ವಚನಕಾರರನ್ನು ದೇಶಕ್ಕೆ ನೀಡಿದ ಜಿಲ್ಲೆ ಇದಾಗಿದೆ. ಜೊತೆಯಲ್ಲಿ ಚಂದ್ರಗುತ್ತಿಯ ಮೌಡ್ಯ ನಂಬಿಕೆಯಾದ ಬೆತ್ತಲೆ ಸೇವೆಯ ವಿರುದ್ಧ ಹೋರಾಟ ಮಾಡಿ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಅಂದು ಎಸ್. ಬಂಗಾರಪ್ಪ ಅವರ ಶ್ರಮವೂ ಇದೆ ಎಂದು ಸ್ಮರಿಸಿದರು.
ಇದನ್ನೂ ಓದಿ:ಪಕ್ಷನಿಷ್ಠ ಕಾರ್ಯದಿಂದ ಫಲ ಖಚಿತ: ಹಾಲಪ್ಪ
ಸಾಮಾಜಿಕ, ಕೃಷಿ, ಕಲೆ, ಸಾಹಿತ್ಯ, ಆರೋಗ್ಯ, ನಾಟಕ, ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿದ ವಿವಿಧ ಕ್ಷೇತ್ರಗಳ ಸಾಧಕರಾದ ಕೆ. ಮಂಜುನಾಥ, ಎ.ಎಸ್. ಹೇಮಚಂದ್ರ, ರೇವಣಪ್ಪ ಬಿದಿರಗೆರೆ, ಶಿಲ್ಪಾ ವಿನಾಯಕ್ ಕಾನಡೆ, ನಾಗರಾಜ ಗೌಡ ಆಲಳ್ಳಿ, ರಘುನಾಥ ಬಾಪಟ್ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತ ಜಿ.ಎಂ. ತೋಟಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಮಧು ಬಂಗಾರಪ್ಪ, ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ರಾಜು ಎಂ. ತಲ್ಲೂರು, ಜಿಪಂ ಸದಸ್ಯರಾದ ವೀರೇಶ್ ಕೊಟಗಿ, ಶಿವಲಿಂಗೇ ಗೌಡ್ರು, ತಾರಾ ಶಿವಾನಂದ, ರಾಜೇಶ್ವರಿ ಗಣಪತಿ, ನೌಕರರ ಸಂಘದ ಅಧ್ಯಕ್ಷ ಎಸ್. ಮಂಜುನಾಥ, ಡಾ| ಷಣ್ಮುಖಪ್ಪ ಹಿರೇಕಸವಿ, ಟಿ. ರಾಘವೇಂದ್ರ, ಎಸ್.ಎಂ. ನೀಲೇಶ್, ನೋಪಿಶಂಕರ್, ರವಿ ಕಲ್ಲಂಬಿ, ಎಂ.ಕೆ. ಮೋಹನ್,ನಿವೃತ್ತ ಶಿಕ್ಷಕ ಆರ್.ಬಿ. ಚಂದ್ರಪ್ಪ ಇತರರಿದ್ದರು