Advertisement

ವಿಶ್ವಕ್ಕೆ ಭಾರತೀಯ ಸಂಸ್ಕೃತಿ ಪ್ರತಿಬಿಂಬಿಸಿದ್ದೇ ಸ್ವಾಮಿ ವಿವೇಕಾನಂದ

06:36 PM Sep 16, 2021 | Team Udayavani |

ವಿಜಯಪುರ: ಸ್ವಾಮಿ ವಿವೇಕಾನಂದರು ಚಿಕಾಗೋ ಉಪನ್ಯಾಸದಿಂದ ಭಾರತದ ದೃಷ್ಠಿಕೋನವನ್ನು ವಿಶ್ವದ ಮುಂದೆ ವಿಶಿಷ್ಟ ರೀತಿಯಲ್ಲಿ ಪ್ರದರ್ಶಿಸಿದ್ದು, ನಮ್ಮ ದೇಶದ ಸಂಸ್ಕೃತಿ ಅನಾವರಣಗೊಳಿಸಿದ ಹಿರಿಮೆಯ ಭಾಷಣವಾಗಿತ್ತು ಎಂದು ಭಾರತೀಯ ಶಿಕ್ಷಣ ಮಂಡಳಿ ಕರ್ನಾಟಕ ಉತ್ತರ ಪ್ರಾಂತದ ರಾಜ್ಯಾಧ್ಯಕ್ಷ ಡಾ| ಸತೀಶ ಜಿಗಜಿನ್ನಿ ಹೇಳಿದರು.

Advertisement

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕನ್ನಡ ಸಭಾ ಭವನದಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣದಿಂದಾದ ಭಾರತದ ಮರು ನಿರ್ಮಾಣದ ಕುರಿತು ಹಮ್ಮಿಕೊಂಡಿದ್ದ ಭಾರತ ದಿಗ್ವಿಜಯ ದಿನಾಚರಣೆಗೆ ಚಾಲನೆ ನೀಡಿ ಮಾನಾಡಿದ ಅವರು, ವಿವೇಕಾನಂದರ ಭಾಷಣದಿಂದಲೇ ಭಾರತೀಯರ ಕುರಿತು ವಿಶ್ವಕ್ಕೆ ಮಾದರಿಯಾದ ಧರ್ಮ, ಸಂಸ್ಕೃತಿ ಸಮಾಜ ನೀಡಿರುವ ದೇಶ ಎಂಬುದನ್ನು ಸಾರಿತು ಎಂದು ಬಣ್ಣಿಸಿದರು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಭಾರತ ಶಿಕ್ಷಣ ಮಂಡಲದ ಅಖೀಲ ಭಾರತ ಸಹ ಕಾರ್ಯದರ್ಶಿ ಪ್ರೊ| ಮೀನಾ ಚಂದಾವರಕರ್‌ ಮಾತನಾಡಿ, ವಿವೇಕಾನಂದರ ಚಿಕಾಗೋ ಭಾಷಣದಲ್ಲಿ ಭಾರತದ ಮಹಿಳಾ ಶಕ್ತಿ, ಮಾತೃ ಶಕ್ತಿ, ಗುರು ಶಕ್ತಿ ಸಾರಿದೆ. ಭಾರತೀಯರಲ್ಲಿರುವ ವಸುದೈವ ಕುಟುಂಬಕಂ, ಜಗತ್ತು ಒಂದು ಕುಟುಂಬ ಎಂಬ ಸತ್ಯ ಜಗತ್ತಿಗೆ ಮನವರಿಕೆ ಮಾಡಿಕೊಡುವ ಐತಿಹಾಸಿಕ ದಿನವಾಗಿತ್ತು
ಎಂದು ವಿಶ್ಲೇಷಿಸಿದರು.

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ| ಕೆ. ರಮೇಶ ಮಾತನಾಡಿ, ವಿಶ್ವ ಮಟ್ಟದಲ್ಲಿ ಭಾರತ ಹಾಗೂ ಭಾರತೀಯರ ಬಗ್ಗೆ ವಿಶಿಷ್ಟ ಗೌರವ ಮೂಡಿಸುವ ಕೆಲಸ ಸ್ವಾಮಿ ವಿವೇಕಾನಂದರಿಂದ ಆಗಿದೆ. ಇದು ಭಾರತೀಯರಾದ ನಮಗೆಲ್ಲ ಹೆಮ್ಮೆ ಹಾಗೂ ಗೌರವ ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹೀಗಾಗಿ ಭಾರತೀಯರಾದ ನಮಗೆಲ್ಲ ಸ್ವಾಮಿ ವಿವೇಕಾನಂದರ ಬದುಕು ಆದರ್ಶಮಯವಾಗಿದ್ದು, ನಿತ್ಯ ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯವೂ ಹೌದು ಎಂದರು.

ಕುಲಪತಿ ಪ್ರೊ| ಬಿ.ಕೆ. ತುಳಿಸಿಮಾಲಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ವಿಶ್ವಗುರು ಆಗುವ ನಿಟ್ಟಿನಲ್ಲಿ ಸಾಗುತ್ತಿದೆ. ಇದಕ್ಕೆ ಭದ್ರ ಬುನಾದಿ ಹಾಕಿದ್ದೇ ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಭಾಷಣ. ಪ್ರಸ್ತುತ ಭಾರತವು ಅಭಿವೃದ್ಧಿಯತ್ತ ಹೆಚ್ಚಿನ ಗಮನ ನೀಡಿ ಆರ್ಥಿಕ ಸಬಲೀಕರಣ ಹೊಂದುತ್ತಿದೆ. ಹೀಗಾಗಿ ಇಂದಿನ ಪೀಳಿಗೆ ಅದರಲ್ಲೂ ವಿದ್ಯಾರ್ಥಿಗಳು ಅನೇಕ ಸಂದೇಶ ಅರಿಯುವ ಹಾಗೂ ಆಚರಿಸುವ ಕೆಲಸ ಮಾಡಬೇಕು ಎಂದು ಹೇಳಿದರು. ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ| ರಾಜಕುಮಾರ ಮಾಲಿಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಡಾ| ದೀಪಕ ಶಿಂಧೆ ಪರಿಚಯಿಸಿದರು. ದೈಹಿಕ ಶಿಕ್ಷಣ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ| ಹನುಮಂತಯ್ಯ ಪೂಜಾರಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next