Advertisement

ಸ್ವಚ್ಛತೆಗೆ ಸೈ ಎನಿಸಿಕೊಂಡ ನಗರಸಭೆ

03:16 PM Aug 22, 2020 | Suhan S |

ಗದಗ: ಕೇಂದ್ರ ಸರಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ನಡೆಸಿದ ಸ್ವಚ್ಛ ಸರ್ವೇಕ್ಷಣೆಯಲ್ಲಿ ಈ ಬಾರಿ ಗದಗ-ಬೆಟಗೇರಿ ನಗರಸಭೆ ಟಾಪ್‌-10 ಪಟ್ಟಿಯಲ್ಲಿ ಸ್ಥಾನಗಳಿಸಿದೆ. ಸ್ವತ್ಛತೆಯಲ್ಲಿ ಹಲವು ಮಹತ್ವದ ಬದಲಾವಣೆಯೊಂದಿಗೆ ಜನರಲ್ಲಿ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಿದ್ದರಿಂದ ರಾಜ್ಯ ಹಲವು ಮಹಾನಗರ ಪಾಲಿಕೆಗಳನ್ನೂ ಹಿಂದಿಕ್ಕಿರುವ ಗದಗ-ಬೆಟಗೇರಿ ನಗರಸಭೆ ರಾಜ್ಯ ಮಟ್ಟದಲ್ಲಿ 8ನೇ ಸ್ಥಾನ ಅಲಂಕರಿಸಿದೆ.

Advertisement

ಹೌದು, 1ರಿಂದ 10 ಲಕ್ಷದೊಳಗಿನ ಜನ ಸಂಖ್ಯೆಯಿರುವ ಸ್ಥಳೀಯ ಸಂಸ್ಥೆಗಳ ವಿಭಾಗದಲ್ಲಿ ಗದಗ-ಬೆಟಗೇರಿ ನಗರಸಭೆ 8ನೇ ಸ್ಥಾನ ಗಳಿಸಿದೆ. ಮಾತ್ರವಲ್ಲದೇ ರಾಷ್ಟ್ರಮಟ್ಟದಲ್ಲೂ 218ನೇ ಸ್ಥಾನ ಗಳಿಸುವ ಮೂಲಕ ಭರವಸೆ ಮೂಡಿಸಿದೆ. ಜಿಲ್ಲೆಯ ಪುರಸಭೆ ಹಾಗೂಪಟ್ಟಣ ಪಂಚಾಯತ್‌ಗಳೂ ಸ್ವತ್ಛತೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿವೆ. ಈ ಹಿಂದೆ 130 ಗಡಿಯಾಚೆಗಿದ್ದ ಪಟ್ಟಣ, ಸ್ಥಳೀಯ ಸಂಸ್ಥೆಗಳು ಈ ಬಾರಿ ಎರಡಂಕಿಗೆ ಜಿಗಿದಿವೆ. ಆಪೈಕಿ ರಾಜ್ಯಮಟ್ಟದಲ್ಲಿ 25ರಿಂದ 50 ಸಾವಿರ ಜನಸಂಖ್ಯೆಯ ಪಟ್ಟಣಗಳ ಪೈಕಿ ಲಕ್ಷ್ಮೇ ಶ್ವರ-12, ಗಜೇಂದ್ರಗಡ- 28, ನರಗುಂದ- 33ನೇ ಸ್ಥಾನ ಪಡೆದಿದೆ. 25 ಸಾವಿರಕ್ಕಿಂತ ಕಡಿಮೆ ಜನ ಸಂಖ್ಯೆ ಇರುವ ಪಟ್ಟಣಗಳ ಪೈಕಿ ಮುಳಗುಂದ- 28, ಶಿರಹಟ್ಟಿ-32, ನರೇಗಲ್‌- 34, ಮುಂಡರಗಿ-35 ಹಾಗೂ ರೋಣ 116ನೇ ರ್ಯಾಕ್‌ ಪಡೆದಿವೆ.

ಕೈಗೂಡಿದ ಜನಜಾಗೃತಿ: ಸ್ವಚ್ಛತೆ ಕಾಪಾಡುವಲ್ಲಿ ನಗರ ಸ್ಥಳೀಯ ಸಂಸ್ಥೆಗಳನ್ನು ಪ್ರೋತ್ಸಾಹಿಸಲು ಕೇಂದ್ರ ನಗರಾಭಿವೃದ್ಧಿ ಸಚಿವಾಲಯ 2016ರಿಂದ ಈ ಸಮೀಕ್ಷೆ ನಡೆಸುತ್ತಿದೆ. ಆದರೆ ಮೊದಲ ಬಾರಿಗೆ(2016) ಜಿಲ್ಲೆಯ ಸ್ಥಳೀಯ ಸಂಸ್ಥೆಗಳು ಸಮೀಕ್ಷೆಯಲ್ಲಿ ಪಾಲ್ಗೊಂಡಿರಲಿಲ್ಲ. ಆನಂತರ 2017ರಲ್ಲಿ ನಡೆದ ಸಮೀಕ್ಷೆಯಲ್ಲಿ ಗದಗ- ಬೆಟಗೇರಿ ನಗರಸಭೆ ರಾಜ್ಯದ ಟಾಪ್‌-10 ಸ್ವತ್ಛ ನಗರಗಳಲ್ಲಿ ಸ್ಥಾನ ಪಡೆದಿತ್ತು. ಬಳಿಕ 2018ರಲ್ಲಿ 17ನೇ ಸ್ಥಾನ, 2019ರಲ್ಲಿ 15ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇದೀಗ ಸ್ವಚ್ಛತೆಗೆ ಸಾಕಷ್ಟು ಒತ್ತು ನೀಡುವ ಮೂಲಕ ನಗರಸಭೆ ಮೊದಲ 10ರಲ್ಲಿ ಅವಳಿ ನಗರದಲ್ಲಿ ಪ್ಲಾಸ್ಟಿಕ್‌ ನಿಷೇಧ, ಮನೆಯಿಂದಲೇ ಹಸಿ ಕಸ-ಒಣ ಕಸ ಪ್ರತ್ಯೇಕವಾಗಿ ಸಂಗ್ರಹಿಸುವುದು, ಕಸದ ತೊಟ್ಟಿಗಳ ಬದಲಾಗಿನೇರವಾಗಿ ವಾಹನಗಳ ಮೂಲಕ ಡಂಪಿಂಗ್‌ ಯಾರ್ಡ್‌ಗೆ ರವಾನಿಸುವುದು, ಪ್ಲಾಸ್ಟಿಕ್‌ ಬಾಟಲ್‌, ಕಬ್ಬಿಣದ ತ್ಯಾಜ್ಯ ಹಾಗೂ ಕೊಳೆಯಬಹುದಾದ ತ್ಯಾಜ್ಯದ ವಿಂಗಡನೆ, ಖಾಲಿ ಜಾಗೆಗಳಲ್ಲಿ ಕಸ ಬೆಳೆಯುವುದರಿಂದ ತಮ್ಮ ಜಾಗೆಯಲ್ಲಿ ಸ್ವತ್ಛತೆ ಕಾಯ್ದುಕೊಳ್ಳುವಂತೆ ನಿವೇಶನದ ಮಾಲೀಕರಿಗೆ ನೋಟಿಸ್‌ ನೀಡಿ, ಬಿಸಿ ಮುಟ್ಟಿಸುವ ಮೂಲಕ ಅವಳಿ ನಗರದ ಸ್ವತ್ಛತೆಗೆ ಜನರು ಕೈಜೋಡಿಸುವಂತೆ ಮಾಡಿರುವುದು ನಗರಸಭೆ ಮುನ್ನಡೆಗೆ ನೆರವಾಗಿದೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ಸ್ವಚ್ಛತೆಗೆ ಶ್ರಮಿಸಿದ ಯುವಕರು: ಸಾರ್ವಜನಿಕರಲ್ಲಿ ಜಾಗೃತಿ ಕೊರತೆ ಹಾಗೂ ಖಾಲಿ ನಿವೇಶನದಾರರ ನಿರ್ಲಕ್ಷ್ಯದಿಂದಾಗಿ ನಗರದ ವಿವಿಧೆಡೆ ತ್ಯಾಜ್ಯ ವಿಲೇವಾರಿ ಸ್ಥಳಗಳಾಗಿ ಪರಿವರ್ತನೆಗೊಳ್ಳುತ್ತಿದೆ. ಇದರಿಂದ ಉಂಟಾಗುವ ನೈರ್ಮಲ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವಿವಿಧ ಸ್ವಯಂ ಸೇವಕರ ತಂಡಗಳು ಶ್ರಮಿಸುತ್ತಿವೆ. ಆ ಪೈಕಿ ಬ್ಯಾಂಕರ್ಸ್‌ ಕಾಲೋನಿಯ 15ಕ್ಕೂ ಹೆಚ್ಚು ಕಾಲೇಜು ಯುವಕರು ಎರಡು ವಾರಕ್ಕೊಮ್ಮೆ ರವಿವಾರ ಅವಳಿ ನಗರದ ಯಾವುದಾದರೊಂದು ಖಾಲಿ ನಿವೇಶನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅಲ್ಲಿ ಮಧ್ಯಾಹ್ನದವರೆಗೂ ಶ್ರಮದಾನ ಮಾಡುವ ಮೂಲಕ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ

ಸಂದೇಶ ಸಾರುತ್ತಿದ್ದಾರೆ. ಅದರಂತೆ ಸಿದ್ಧಲಿಂಗ ನಗರದಲ್ಲಿ ಬಾಬು ಸಿದ್ಲಿಂಗ್‌ ಹಾಗೂ ಗೆಳೆಯರ ಬಳಗ ಹಾಗೂ ವಿವಿಧ ಪ್ರಗತಿಪರ ಯುವಕರ ಗುಂಪುಗಳು ಅವಳಿ ನಗರದಲ್ಲಿ ಸ್ವಚ್ಛತೆಗೆ ಶ್ರಮಿಸುತ್ತಿರುವುದು ಕೂಡ ನಗರಸಭೆ ರ್‍ಯಾಂಕ್‌ ಹೆಚ್ಚಿಸುವಲ್ಲಿ ನೆರವಾಗಿದೆ ಎನ್ನಲಾಗಿದೆ.

Advertisement

ಸ್ವಚ್ಛ ಸರ್ವೇಕ್ಷಣೆ ಅಭಿಯಾನ-2020 ರ್‍ಯಾಂಕಿಂಗ್‌ ಖುಷಿ ತಂದಿದೆ. ಅವಳಿ ನಗರದ ಜನರಲ್ಲಿ ಸ್ವತ್ಛತೆಯ ಕುರಿತು ಜಾಗೃತಿ ಹೆಚ್ಚಿದೆ. ನಗರಸಭೆ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಕೂಡಾ ಸಕಾರಾತ್ಮಕವಾಗಿ ಕೈಜೋಡಿಸಿದ್ದಾರೆ. ಹೀಗಾಗಿ ಸ್ವತ್ಛ ಸರ್ವೇಕ್ಷಣೆ ಅಭಿಯಾನ-2020ರಲ್ಲಿ ರಾಜ್ಯಮಟ್ಟದ ರ್‍ಯಾಂಕಿಂಗ್‌ನಲ್ಲಿ 25 ನಗರ ಪಾಲಿಕೆಗಳ ಪೈಕಿ ಗದಗ-ಬೆಟಗೇರಿ ನಗರಸಭೆ 8ನೇ ಸ್ಥಾನ ಪಡೆದಿದೆ. ಅದರಂತೆ ಮುಂದಿನ ವರ್ಷದಲ್ಲಿ ಟಾಪ್‌-3ರಲ್ಲಿ ಬರಲು ಪ್ರಯತ್ನಿಸಲಾಗುತ್ತದೆ.  – ಮನ್ಸೂರ್‌ ಅಲಿ, ನಗರಸಭೆ ಪೌರಾಯುಕ್ತ

 

– ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next