ಅರಂತೋಡು: ಇವರೊಬ್ಬ ಸ್ವಚ್ಛತಾ ರಾಯಭಾರಿ. ಇದು ಸರಕಾರವಾಗಲೀ ಯಾವುದೇ ಸಂಸ್ಥೆಯಾಗಲೀ ನೀಡಿದ ಹುದ್ದೆಯಲ್ಲ. ಸ್ವಯಂಪ್ರೇರಣೆಯಿಂದ ಸ್ವಚ್ಛ ಭಾರತ ಪರಿಕಲ್ಪನೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿರುವವರು ಇವರು.
ಸಂಪಾಜೆ ಗ್ರಾಮದ ಗೂನಡ್ಕ ಮುಖ್ಯರಸ್ತೆಯ ಬಳಿ ನೆಲೆಸಿರುವ ಅಬ್ದುಲ್ ಖಾದರ್ ಎಳೆಯ ವಯಸ್ಸಿನಲ್ಲಿಯೇ ಅಪಘಾತದಿಂದ ಕಾಲು ಕಳೆದುಕೊಂಡು ಶಿಕ್ಷಣ ವಂಚಿತರಾದರು. ಬಳಿಕ ಹೊಟ್ಟೆಪಾಡಿಗಾಗಿ ಬೀದಿಬದಿ ವ್ಯಾಪಾರ ಆರಂಭಿಸಿದರು. ಸರಕಾರದಿಂದ ತ್ರಿಚಕ್ರ ವಾಹನ ಸಿಕ್ಕಿದ ಮೇಲೆ ಸುಳ್ಯದಿಂದ ಸಂಪಾಜೆ ವರೆಗೆ ಹಸಿ ಮೀನು ಹಾಗೂ ಬಟ್ಟೆ ವ್ಯಾಪಾರ ನಡೆಸಿದರು.
ಪ್ರತಿದಿನ ಊರು ಸುತ್ತುವ ಸಂದರ್ಭ ಕಂಡುಬರುತ್ತಿದ್ದ ಎಲ್ಲೆಂದರಲ್ಲಿ ಕಸ ಎಸೆಯುವ ಜನರ ಪ್ರವೃತ್ತಿಯಿಂದ ರೋಸಿಹೋದ ಅವರಲ್ಲಿ ಪರಿಸರ ರಕ್ಷಣೆಗೆ ಏನಾದರೂ ಕೊಡುಗೆ ನೀಡಬೇಕೆಂಬ ತುಡಿತ ಉಂಟಾಯಿತು. ಆ ನಿಟ್ಟಿನಲ್ಲಿ ಬಿಡುವಿನ ವೇಳೆಯಲ್ಲಿ ರಸ್ತೆ ಬದಿ ಫಲಕ ನೆಟ್ಟು, ಸ್ವಚ್ಛ ಭಾರತ ಯೋಜನೆಯ ಲಾಂಛನ ಅಳವಡಿಸಿ ಸ್ವತ್ಛತೆಯ ಪಾಠ ಹೇಳಿಕೊಟ್ಟಿದ್ದಾರೆ.
ಪರಿಸರದಲ್ಲಿ ಜಾಗೃತಿಯ ಬ್ಯಾನರ್ ಅಳವಡಿಸಿದ್ದಲ್ಲದೆ ಕಸದ ಬುಟ್ಟಿಗಳನ್ನು ಇರಿಸಿ ಎಲ್ಲೆಂದರಲ್ಲಿ ಕಸ ಎಸೆಯುವ ಜನರಿಗೆ ಶುಚಿತ್ವದ ಪಾಠ ಮಾಡಿದ್ದಾರೆ.ಸ್ವತ್ಛ ಭಾರತ ಕಲ್ಪನೆಯ ಗಾಂಧೀಜಿಯ ಕನ್ನಡಕದ ಮಾದರಿಯನ್ನು ಗೂನಡ್ಕದಲ್ಲಿ ಅಳವಡಿಸಿ ಪ್ರವಾಸಿಗರು ಒಮ್ಮೆ ನಿಂತು ನೋಡುವಂತೆ ಮಾಡಿದ್ದಾರೆ.
ಇಲ್ಲಿ ಪ್ರವಾಸಿಗರು ಎಸೆದು ಹೋಗುವ ಪ್ಲಾಸ್ಟಿಕ್ ಹಾಗೂ ಕಸಗಳನ್ನು ಕಂಡು ಅದಕ್ಕೆ ಏನಾದರೂ ಪರಿಹಾರ ಮಾಡಬೇಕೆಂದು ಆಲೋಚಿಸುತ್ತಿದ್ದೆ. ಆಗ ಈ ಯೋಚನೆ ಬಂದಿದ್ದು ಅನುಷ್ಠಾನ ಮಾಡಿದ್ದೇನೆ. ಪರಿಸರಕ್ಕೆ ನನ್ನದೊಂದು ಚಿಕ್ಕ ಕೊಡುಗೆ ಇದು.
– ಅಬ್ದುಲ್ ಖಾದರ್