ಮಹಾನಗರ: ರಾಮಕೃಷ್ಣ ಮಿಷನ್ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಸ್ವಚ್ಛ ಗ್ರಾಮದ ಕುರಿತು ವಿಶೇಷ ಸಭೆಯನ್ನು ರಾಮಕೃಷ್ಣ ಮಠದಲ್ಲಿ ರವಿವಾರ ಆಯೋಜಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಂ.ಆರ್. ರವಿ ಮಾತನಾಡಿ,
ಕಳೆದ ವರ್ಷದಿಂದ ರಾಮಕೃಷ್ಣ ಮಿಷನ್ ಸಹಯೋಗದಲ್ಲಿ ನಡೆಸುತ್ತಿರುವ ಸಚ್ಛ ಗ್ರಾಮ ಅಭಿಯಾನ ಮಾದರಿ ಯೋಜನೆಯಾಗಿದೆ. ಸಂಘ ಸಂಸ್ಥೆಗಳ ಹಾಗೂ ಜನರ ಸಹಭಾಗಿತ್ವದಲ್ಲಿ ಸರಕಾರ ಹೇಗೆ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಬಹುದು ಎನ್ನುವುದಕ್ಕೆ ನಿದರ್ಶನವಾಗಿದೆ ಎಂದರು.
ನಾವು ಬದುಕಲು ಯೋಗ್ಯವಾದ ವಾತಾವರಣ ನಿರ್ಮಾಣ ಮಾಡುವುದು ಪ್ರತಿ ಪ್ರಜೆಯ ಕರ್ತವ್ಯ. ಈ ಮೂಲಕ ಮುಂದಿನ ಜನಾಂಗಕ್ಕೂ ಪರಿಸರವನ್ನು ಬಿಟ್ಟು ಹೋಗಬೇಕಿರುವುದು ಸಾಮಾಜಿಕ ಹೊಣೆಗಾರಿಕೆ. ಇದರ ಅರಿವು ಉಂಟಾದಾಗ ಸಮುದಾಯದ ಸಬಲೀಕರಣವಾಗಬಲ್ಲದು. ಈ ಹಿನ್ನೆಲೆಯಲ್ಲಿ ಈ ಅಭಿಯಾನ ಪ್ರತಿ ಗ್ರಾಮದಲ್ಲೂ ಅತ್ಯಂತ ಅವಶ್ಯವಾಗಿದೆ ಎಂದು ತಿಳಿಸಿದರು.
ಸ್ವಾಮಿ ಜಿತಕಾಮಾನಂದಜಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಹಾಗೂ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಚ್ಛ ಭಾರತ್ ಮಿಷನ್ ಜಿಲ್ಲಾ ಸಂಯೋಜಕಿ ಮಂಜುಳಾ ಪ್ರಸ್ತಾವನೆಗೈದರು. ಉಮಾನಾಥ್ ಕೋಟೆಕಾರ್ ಸ್ವಾಗತಿಸಿದರು. ಸ್ವಾಮಿ ಏಕಗಮ್ಯಾನಂದಜಿ ವಂದಿಸಿದರು. ನವೀನ್ ಕೊಣಾಜೆ ಕಾರ್ಯಕ್ರಮವನ್ನು ನಿರೂಪಿಸಿದರು. ಸುಮಾರು ನೂರೈವತ್ತಕ್ಕೂ ಅಧಿಕ ಜನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಸಂವಾದ ಗೋಷ್ಠಿ ಹಾಗೂ ಮಡಿಕೆಗೊಬ್ಬರ ಪ್ರಾತ್ಯಕ್ಷಿಕೆಗಳು ನಡೆದವು.