ಕಲಬುರಗಿ: ಜಿಲ್ಲೆಯ ಪ್ರತಿ ಗ್ರಾಪಂನಲ್ಲಿ ಸ್ವತ್ಛ ಸರ್ವೇಕ್ಷಣ ಕಾರ್ಯಕ್ರಮ ಅಂಗವಾಗಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ಇದರಲ್ಲಿ ಭಾಗಿಯಾಗಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸಬೇಕು ‘ಸ್ವಚ್ಚ ಮೇವ ಜಯತೆ’ ಎಂದು ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಸಾರ್ವಜನಿಕರಿಗೆ ಕರೆ ನೀಡಿದರು.
ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018ರ ಅಂಗವಾಗಿ ಜಿಲ್ಲೆಯಲ್ಲಿ ಆ. 8 ರಿಂದ 14ರ ವರೆಗೆ ಹಮ್ಮಿಕೊಂಡಿರುವ ಸರ್ವೇಕ್ಷಣ ಸಪ್ತಾಹ ಅಂಗವಾಗಿ ಸರ್ವೇಕ್ಷಣ ಕಾರ್ಯದಲ್ಲಿ ಸಾರ್ವಜನಿಕರು ಭಾಗಿಯಾಗುವಂತೆ ಪ್ರೋತ್ಸಾಹಿಸಲು ಕಲಬುರಗಿ ಆಕಾಶವಾಣಿ ಕೇಂದ್ರದಲ್ಲಿ ರೇಡಿಯೋ ಕಾರ್ಯಕ್ರಮದ ಮುಖೇನ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವಾಲಯವು ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018ರ ಕಾರ್ಯಕ್ರಮಕ್ಕೆ ಕಳೆದ ಜು. 13 ರಂದು ಚಾಲನೆ ನೀಡಿದೆ. ದೇಶದಾದ್ಯಂತ ಆ. 1 ರಿಂದ 30ರ ವರೆಗೆ ಸರ್ವೇಕ್ಷಣ ಕಾರ್ಯಚಾಲ್ತಿಯಲ್ಲಿದೆ. ಸಾರ್ವಜನಿಕ ಸ್ಥಳಗಳಾದ ಗ್ರಾಪಂ, ಅಂಗನವಾಡಿ, ಆರೋಗ್ಯ ಕೇಂದ್ರ, ಧಾರ್ಮಿಕ ಸ್ಥಳಗಳು, ಶಾಲೆ ಆವರಣಗಳನ್ನು ಸ್ವತ್ಛಗೊಳಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಶುಚಿತ್ವ ಕಾಪಾಡಿಕೊಳ್ಳುವಂತೆ ಮನವರಿಕೆ ಮಾಡಲಾಗುತ್ತದೆ ಎಂದು ಹೇಳಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೋರ್ಲಪಾಟಿ ಮಾತನಾಡಿ, ಸ್ವತ್ಛ ಸರ್ವೇಕ್ಷಣ ಅಂಗವಾಗಿ ಜಿಲ್ಲೆಯಲ್ಲಿ ಆ. 8 ರಿಂದ 14ರ ವರೆಗೆ ಸರ್ವೇಕ್ಷಣ ಸಪ್ತಾಹ ಆಯೋಜಿಸಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಜು. 8 ರಿಂದ ಇದುವರೆಗೆ ಸುಮಾರು 2000 ಸಾರ್ವಜನಿಕ ಸ್ಥಳಗಳನ್ನು ಸ್ವತ್ಛಗೊಳಿಸಲಾಗಿದ್ದು, ಈ ಕಾರ್ಯವು ಆ. 14ರ ವರೆಗೆ ಮಿಷನ್ ರೀತಿಯಲ್ಲಿ ಸಾಗಲಿದೆ ಎಂದರು.
ಸ್ವಚ್ಛ ಭಾರತ ಮಿಷನ್ ಅಂಗವಾಗಿ ಈಗಾಗಲೇ ಜಿಲ್ಲೆಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣದಲ್ಲಿ ಶೇ.80ರಷ್ಟು ಸಾಧನೆ ಮಾಡಲಾಗಿದೆ. ಬಾಕಿಯಿರುವ ಇನ್ನು 44,000 ಶೌಚಾಲಯಗಳನ್ನು ಅಕ್ಟೋಬರ್ 2 ರೊಳಗೆ ನಿರ್ಮಿಸಿ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಮಾಡುವುದೇ ನಮ್ಮ ಮುಂದಿನ ಗುರಿಯಾಗಿದೆ. ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಯಾವುದೇ ಅನುದಾನದ ಕೊರತೆಯಿಲ್ಲ ಎಂದು ತಿಳಿಸಿದರು. ಡಿಡಿಪಿಐ ಶಾಂತಗೌಡ ಪಾಟೀಲ ಮಾತನಾಡಿ, ಸರ್ವೇಕ್ಷಣ ಸಪ್ತಾಹದ ಭಾಗವಾಗಿ ಶಾಲಾ ಕಟ್ಟಡ ಮತ್ತು ಕಂಪೌಂಡ್‌ಗಳನ್ನು ಸ್ವತ್ಛಗೊಳಿಸಿ ಅದರ ಮೇಲೆ ಸರ್ವೇಕ್ಷಣದ ಲೋಗೊ ಮತ್ತು ಸ್ವಚ್ಛತೆಯ ಅರಿವಿನ ಚಿತ್ರ ಬಿಡಿಸಲಾಗುತ್ತಿದೆ ಎಂದು ತಿಳಿಸಿದರು.
ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಶಾಲಾ ಆವರಣ, ಉದ್ಯಾನವನ, ಸರ್ಕಾರಿ ಕಚೇರಿಗಳಲ್ಲಿ ಒಂದು ಲಕ್ಷ ಸಸಿ ನೆಡುವ ಗುರಿ ಹೊಂದಲಾಗಿದೆ. ಪ್ರತಿದಿನ ಬೆಳಗ್ಗೆ ಮಕ್ಕಳಿಂದ ಗ್ರಾಮದಲ್ಲಿ ಪ್ರಭಾತ ಫೇರಿ ಮೂಲಕ ಗ್ರಾಮೀಣ ನೈರ್ಮಲ್ಯ ಹಾಗೂ ಪರಿಸರದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು. ಸ್ವಚ್ಛ ಭಾರತ ಮಿಷನ್ ಅಧಿಕಾರಿ ಪಾಪರೆಡ್ಡಿ , ಸ್ವಚ್ಛ ಭಾರತ ಮಿಷನ್ ಅಧಿಕಾರಿ ಅನ್ನಪೂರ್ಣ ಕಾರ್ಯಕ್ರಮದ ಮಾಹಿತಿ ನೀಡಿದರು. ಕಲಬುರಗಿ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕಿ ಅಂಜನಾ ಯಾತನೂರ ಕಾರ್ಯಕ್ರಮ ನಡೆಸಿಕೊಟ್ಟರು.