Advertisement

ಇಂದು ಬೃಹತ್‌ ಸ್ವಚ್ಛತಾ ಶ್ರಮದಾನ : ಉತ್ತಪ್ಪ ರಾಯಭಾರಿ

02:30 AM Nov 19, 2018 | Karthik A |

ಮಡಿಕೇರಿ: ಸ್ವಚ್ಛ ಪರಿಸರದ ಪರಿಕಲ್ಪನೆಯಡಿ ನ. 19ರಂದು ವಿಶ್ವ ಶೌಚಾಲಯ ದಿನ ಮತ್ತು ಆ ವಾರವನ್ನು ವಿಶ್ವ ಪಾರಂಪರಿಕ ವಾರವನ್ನಾಗಿ ಆಚರಿಸಲಾಗುತ್ತದೆ. ಇದರ ಪ್ರಯುಕ್ತ ಕೊಡಗು ಗ್ರೀನ್‌ ಸಿಟಿ ಫೋರಂ ಮತ್ತು ಪುರಾತತ್ವ ಇಲಾಖೆಯ ಸಹಯೋಗದಲ್ಲಿ ನ. 19ರಂದು ಬೃಹತ್‌ ಸ್ವಚ್ಛತಾ ಶ್ರಮದಾನ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಮಡಿಕೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೋರಂನ ಅಧ್ಯಕ್ಷ ಕುಕ್ಕೆರ ಜಯಾ ಚಿಣ್ಣಪ್ಪ ಅವರು ಜಾಥಾ ಹಾಗೂ ಶ್ರಮದಾನದ ಕುರಿತು ಮಾಹಿತಿ ನೀಡಿದರು. ಬೆಳಗ್ಗೆ 9 ಗಂಟೆಗೆ ಜನರಲ್‌ ತಿಮ್ಮಯ್ಯ ವೃತ್ತದಿಂದ ಖಾಸಗಿ ಬಸ್‌ ನಿಲ್ದಾಣದ ಮೂಲಕ ಕೋಟೆಗೆ ಜಾಗೃತಿ ಜಾಥಾ ನಡೆಯಲಿದೆ. ಈ ಸಂದರ್ಭ ಸ್ವತ್ಛತೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು. ಸುಮಾರು 600 ವಿದ್ಯಾರ್ಥಿಗಳು, ಗ್ರೀನ್‌ ಸಿಟಿ ಪೋರಂನ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಜಾಥಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜನರಲ್‌ ತಿಮ್ಮಯ್ಯ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಲಾಗುವುದು ಎಂದರು.

ನಂತರ ಬೆಳಗ್ಗೆ 11 ಗಂಟೆಯಿಂದ 11.30 ರವರೆಗೆ ಕೋಟೆಯ ಆವರಣದಲ್ಲಿ ಸ್ವಚ್ಛತಾ ಶ್ರಮದಾನ ನಡೆಯಲಿದೆ. 11.30 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ಕ್ರಿಕೆಟ್‌ ಆಟಗಾರ ರಾಬಿನ್‌ ಉತ್ತಪ್ಪ ಅವರು ಕೊಡಗು ಗ್ರೀನ್‌ ಸಿಟಿ ಪೋರಂನ ರಾಯಭಾರಿಯಾಗಿ ಭಾಗವಹಿಸಲಿದ್ದಾರೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್‌ ಸದಸ್ಯರಾದ ಸುನಿಲ್‌ ಸುಬ್ರಮಣಿ, ಜಿ.ಪಂ. ಅಧ್ಯಕ್ಷರಾದ ಬಿ.ಎ.ಹರೀಶ್‌, ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಜಿಲ್ಲಾಧಿಕಾರಿ ಶ್ರೀವಿದ್ಯಾ, ಕರ್ನಾಟಕ ರಾಜ್ಯ ಪುರಾತಣ್ತೀ ಇಲಾಖೆಯ ಮುಖ್ಯ ಆಯುಕ್ತೆ ಮೂರ್ತೇಶ್ವರಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಡಾ.ಸುಮನ್‌ ಪನ್ನೇಕರ್‌, ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮೀಪ್ರಿಯ, ನಗರಸಭಾ ಆಯುಕ್ತರಾದ ರಮೇಶ್‌ ಸೇರಿದಂತೆ ಪ್ರಮುಖರು ಉಪಸ್ಥಿತರಿರುವರು ಎಂದು ಜಯಾ ಚಿಣ್ಣಪ್ಪ ತಿಳಿಸಿದರು.

ಕಳೆದ ವರ್ಷ ಸ್ವಚ್ಛತಾ ಶ್ರಮದಾನ ನಡೆಸಿದಾಗ ನಗರದ ಸುಮಾರು 15 ಸಾವಿರ ಮಂದಿ ಸ್ವಯಂ ಸೇವಕರಾಗಿ ಶ್ರಮಿಸಿದ್ದಾರೆ ಎಂದು ಅವರು ಇದೇ ಸಂದರ್ಭ ತಿಳಿಸಿದರು. ಫೋರಂ ನ ನಿರ್ದೇಶಕಿ ಮೋಂತಿ ಗಣೇಶ್‌ ಅವರು ಮಾತನಾಡಿ ನಗರದಲ್ಲಿನ ಕಸ ವಿಲೇವಾರಿ ವೈಜ್ಞಾನಿಕವಾಗಿ ನಡೆಯಬೇಕಾಗಿದ್ದು, ಕಸದ ಪುನರ್‌ ಬಳಕೆ ವಿಧಾನದ ಯೋಜನೆಗೆ ನಗರಸಭೆ ಜಾಗ ನೀಡಿ ನಿರ್ವಹಣೆಯ ಹೊಣೆಯನ್ನು ಫೋರಂ ಗೆ ವಹಿಸಿದರೆ ಅದನ್ನು ನಿಭಾಯಿಸಲು ಸಿದ್ಧ ಇರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಬಾಟಲ್‌ ಸಂಗ್ರಹ ತೊಟ್ಟಿಗಳನ್ನು ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳಲ್ಲಿ ಅಳವಡಿಸುವ ಅಗತ್ಯವಿದ್ದು, ಈ ಬಗ್ಗೆ ಫೋರಂ ಚಿಂತನೆ ನಡೆಸಿದೆ. ಆದರೆ ಸರಕಾರದ ಸಹಕಾರದ ಅಗತ್ಯವಿದೆ ಎಂದು ಮೋಂತಿ ಗಣೇಶ್‌ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸ್ಥಾಪಕಾಧ್ಯಕ್ಷ ಚೆಯ್ಯಂಡ ಸತ್ಯ, ಪ್ರಧಾನ ಕಾರ್ಯದರ್ಶಿ ಪೂಳಕಂಡ ರಾಜೇಶ್‌, ಖಜಾಂಚಿ ಕನ್ನಂಡ ಕವಿತಾ ಹಾಗೂ ನಿರ್ದೇಶಕ‌ ಅಂಬೆಕಲ್‌ ನವೀನ್‌ ಕುಶಾಲಪ್ಪ ಉಪಸ್ಥಿತರಿದ್ದರು.

Advertisement

ಬಾಟಲ್‌ ಸಂಗ್ರಹ ತೊಟ್ಟಿ 
ನಗರದ ಹೆಸರುವಾಸಿ ಪ್ರವಾಸಿತಾಣ ರಾಜಾಸೀಟು ಉದ್ಯಾನವನದಲ್ಲಿ ಪ್ರವಾಸಿಗರು ಪ್ಲಾಸ್ಟಿಕ್‌ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಇದನ್ನು ತಪ್ಪಿಸಲು ನಗರಸಭೆ ಸೂಚಿಸಿರುವ ಜಾಗದಲ್ಲಿ ಫೋರಂ ವತಿಯಿಂದ ಬಾಟಲ್‌ ಸಂಗ್ರಹ ತೊಟ್ಟಿಯನ್ನು ಇಡಲಾಗಿದೆ. ಇದರ ಉದ್ಘಾಟನಾ ಕಾರ್ಯಕ್ರಮ ಜಾಥಾದ ಸಂದರ್ಭ ನಡೆಯಲಿದೆ. ಇದಕ್ಕಾಗಿ ಫೋರಂ ಸುಮಾರು 10 ಸಾವಿರ ರೂ.ಗಳನ್ನು ಖರ್ಚು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next