ಬೆಳ್ತಂಗಡಿ: ಧಾರ್ಮಿಕ ಶ್ರದ್ಧಾ ಕೇಂದ್ರ ಸ್ವತ್ಛತಾ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರಲಿ. ಇಲ್ಲಿಗೇ ನಿಲ್ಲಬಾರದು. ಕ್ಷೇತ್ರದವರೆಗೆ ಪೂಜ್ಯ ಭಾವನೆಯಿಂದ ಆಗಮಿಸಿದರೂ ಕ್ಷೇತ್ರದ ಆವರಣದಲ್ಲಿ ಗಲೀಜು ಮಾಡಿ ಹೋಗುವ ಯಾತ್ರಿಗಳಿದ್ದಾರೆ. ಆದ್ದರಿಂದ ಯಾತ್ರಿಕರಲ್ಲೂ ಜಾಗೃತಿ ಮೂಡಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಊರಿನ ಸ್ವಯಂ ಸೇವಕರಿಂದ ನಡೆದ ಧಾರ್ಮಿಕ ಶ್ರದ್ಧಾ ಕೇಂದ್ರ ಸ್ವತ್ಛತಾ ಅಭಿಯಾನ ಸ್ವತ್ಛತಾ ಕಾರ್ಯವನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು.
ತಾವು ದೇವರ ದರ್ಶನ ಮಾಡಿದ ಬಳಿಕ ಬರುವ ಇತರ ಭಕ್ತರಿಗೂ ದೇವರ ದರ್ಶನಕ್ಕೆ ಅನುಕೂಲವಾಗುವ ವಾತಾವರಣ ನಿರ್ಮಿಸುವ ಜವಾಬ್ದಾರಿ ಪ್ರತಿಯೊಬ್ಬ ಯಾತ್ರಿಕನಿಗೂ ಇದೆ. ಈ ನಿಟ್ಟಿನಲ್ಲಿ ಸ್ವತ್ಛ ಧಾರ್ಮಿಕ ಶ್ರದ್ಧಾ ಕೇಂದ್ರ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ಆವರಣ, ಸ್ವರ್ಣಗೋಪುರ ಮೊದಲಾದೆಡೆಗಳಲ್ಲಿ ಶುಚಿಗೊಳಿಸಲಾಯಿತು. ಡಿ. ಹಷೇìಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ಡಾ| ಎಲ್. ಎಚ್. ಮಂಜುನಾಥ್ ಉದಯವಾಣಿಗೆ ಮಾಹಿತಿ ನೀಡಿ, ರಾಜ್ಯದ 5,600 ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಈವರೆಗೆ ಶುಚಿಗೊಳಿಸುವ ಕಾರ್ಯ ನಡೆದಿದೆ. ಇನ್ನೂ ಎರಡು ದಿನಗಳ ಕಾಲ ಈ ಕಾರ್ಯ ನಡೆಯಲಿದೆ. ಮಸೀದಿ, ಚರ್ಚ್, ಗದ್ದಿಗೆ, ದೇವಾಲಯ, ಮಠ, ಜಿನಾಲಯಗಳ ಸ್ವತ್ಛತೆ ನಡೆದಿದ್ದು ರಾಜ್ಯದಲ್ಲಿ ಡಾ| ಹೆಗ್ಗಡೆ ಅವರ ಸ್ವತ್ಛತಾ ಕರೆ ಸಂಚಲನ ಮೂಡಿಸಿದೆ ಎಂದರು.
ಮಠಾಧಿಪತಿಗಳು, ದೇವಾಲಯದ ಆಡಳಿತ ಮಂಡಳಿ ಹಾಗೂ ಅನೇಕ ಸಂಘ ಸಂಸ್ಥೆಗಳ ಪ್ರತಿಕ್ರಿಯೆಯಿಂದ ಈ ಕಾರ್ಯ ಸಾಧ್ಯವಾಗಿದ್ದು ಡಾ| ಹೆಗ್ಗಡೆಯವರ ಸಂದೇಶ ರಾಜ್ಯದ ಮೂಲೆ ಮೂಲೆ ತಲುಪಿ ಸ್ಪಂದನೆ ದೊರೆತಿದೆ. ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಕಳೆದ 4 ವರ್ಷಗಳಿಂದ ನಾಗರಿಕ ಸ್ವತ್ಛತಾ ಅಭಿಯಾನ ನಡೆಸಲಾಗುತ್ತಿದ್ದು ಅದರ ಮುಂದುವರಿದ ಭಾಗದ ಮಾದರಿಯಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರ ಸ್ವತ್ಛತಾ ಅಭಿಯಾನ ನಡೆದಿದೆ. ನಾಗರಿಕ ಸ್ವತ್ಛತಾ ಅಭಿಯಾನವೂ ನಡೆಯುತ್ತಿದ್ದು ಧಾರ್ಮಿಕ ಕೇಂದ್ರ ಸ್ವತ್ಛತಾ ಅಭಿಯಾನವನ್ನು ಮುಂದುವರಿಸುವ ನಿಟ್ಟಿನಲ್ಲಿ ಫೆಬ್ರವರಿಯಲ್ಲಿ ಡಾ| ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ ಎಂದು ತಿಳಿಸಿದರು.