ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮಹಿಳೆಯರನ್ನು ರಕ್ಷಿಸಬೇಕಾದರೆ ಪೊಲೀಸರು ಎನ್ ಕೌಂಟರ್ ಗಳನ್ನು ಮಾಡಬೇಕಾಗುತ್ತದೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ. ಅಲ್ಲದೆ ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರೀತಿಯ ವ್ಯಕ್ತಿಯಿಂದ ಮಾತ್ರ ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ನಿಭಾಯಿಸಲು ಸಾಧ್ಯ ಎಂದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಆರೋಪಿಸಿದರು.
“ಕಾಲೇಜು ದಾಟದ ಹೆಣ್ಣು ಮಕ್ಕಳು ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ. ಪಶ್ಚಿಮ ಬಂಗಾಳ ಕೊಲೆಗಾರರ ತಾಣವಾಗಿ ಮಾರ್ಪಟ್ಟಿದೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಂತಹ ಒಬ್ಬರಿಂದ ಮಾತ್ರ ಪರಿಸ್ಥಿತಿಯನ್ನು ನಿಯಂತ್ರಿಸಬಹುದು” ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ.
“ಅಗತ್ಯವಿದ್ದರೆ, ಈ ಅಪರಾಧಿಗಳನ್ನು ಎನ್ ಕೌಂಟರ್ ಮಾಡಬೇಕು. ಈ ಅಪರಾಧಿಗಳಿಗೆ ಮನುಷ್ಯರೊಂದಿಗೆ ವಾಸಿಸುವ ಯಾವುದೇ ಹಕ್ಕಿಲ್ಲ” ಎಂದು ಅವರು ಹೇಳಿದರು.
ಸುವೇಂದು ಅಧಿಕಾರಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ತಪಸ್ ರಾಯ್, ” ಬಂಗಾಳವನ್ನು ಯೋಗಿ ರಾಜ್ಯ ಆಗಿ ಪರಿವರ್ತಿಸಲು ಸುವೇಂದು ಎಷ್ಟು ಬಯಸಿದರೂ ಅದು ಎಂದಿಗೂ ಆಗುವುದಿಲ್ಲ” ಎಂದು ಹೇಳಿದರು.