Advertisement

“ಸುವರ್ಣ ತ್ರಿಭುಜ’ನಾಪತ್ತೆ ಪ್ರಕರಣಕ್ಕೆ ವರ್ಷ ಪೂರ್ಣ

10:01 AM Dec 14, 2019 | mahesh |

ಮಲ್ಪೆ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಸುವರ್ಣ ತ್ರಿಭುಜ ದೋಣಿ ಮತ್ತು ಅದರಲ್ಲಿದ್ದ 7 ಮಂದಿ ಮೀನುಗಾರರ ನಾಪತ್ತೆಗೆ ಡಿ. 13ರಂದು ಒಂದು ವರ್ಷ ತುಂಬುತ್ತದೆ. ಮುಳುಗಿದ ದೋಣಿಯ ಅವಶೇಷ ಪತ್ತೆಯಾಗಿದೆ ಎಂದು ಸರಕಾರ ಹೇಳಿದ್ದರೂ ಕಣ್ಮರೆಯಾಗಿರುವ ಮೀನುಗಾರರ ವಿಚಾರವನ್ನು ಬಹಿರಂಗ ಪಡಿಸದಿರುವುದರಿಂದ ನಮ್ಮವರು ಏನಾದರು ಎಂಬ ಕುಟುಂಬದವರ ಪ್ರಶ್ನೆಗೆ ಇನ್ನೂ ಉತ್ತರ ಲಭಿಸಿಲ್ಲ.

Advertisement

ಅಂದೇನಾಗಿತ್ತು?
ಬಡಾನಿಡಿಯೂರಿನ ಚಂದ್ರಶೇಖರ ಕೋಟ್ಯಾನರಿಗೆ ಸೇರಿದ ಸುವರ್ಣ ತ್ರಿಭುಜ ಡಿ. 13ರಂದು ಮಲ್ಪೆಯಿಂದ ಹೊರಟಿದ್ದು, ಡಿ. 15ರ ರಾತ್ರಿಯಿಂದ ನಾಪತ್ತೆಯಾಗಿತ್ತು. ಚಂದ್ರಶೇಖರ ಕೋಟ್ಯಾನ್‌, ದಾಮೋದರ ಸಾಲ್ಯಾನ್‌, ಕುಮಟಾದ ಲಕ್ಷ್ಮಣ, ಸತೀಶ್‌, ಭಟ್ಕಳದ ಹರೀಶ್‌, ರಮೇಶ್‌ ಮತ್ತು ಹೊನ್ನಾವರ ಸಮೀಪದ ಮಂಕಿಯ ರವಿ ಅದರಲ್ಲಿದ್ದರು. ಡಿ. 22ರಂದು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ರಾಷ್ಟ್ರ ಮಟ್ಟದಲ್ಲಿ ಕೋಲಾಹಲ ಸೃಷ್ಟಿಸಿತು. ಮೀನುಗಾರರ ಪತ್ತೆಗಾಗಿ ಸಾಕಷ್ಟು ಪ್ರತಿಭಟನೆಗಳು ನಡೆದವು. ಕೇಂದ್ರ ಮತ್ತು ರಾಜ್ಯ ಸರಕಾರದ ಮೇಲೆ ಒತ್ತಡ ಹೇರಲಾಯಿತು. ಕುಟುಂಬದವರು ಮಾತ್ರವಲ್ಲ ಗ್ರಾಮಸ್ಥರೆಲ್ಲರೂ ದೈವ ದೇವರ ಮೊರೆ ಹೊಕ್ಕರು. ಅಂಜನ, ಆರೂಢ ಪ್ರಶ್ನೆಗಳನ್ನು ಇರಿಸಿದಾಗ ಅವರು ಜೀವಂತ ಇದ್ದಾರೆಂಬ ಉತ್ತರವೇ ಲಭಿಸಿತ್ತು.

ರಾಜ್ಯ, ಕೇಂದ್ರ ನೆರವು
ಆಗಿನ ರಾಜ್ಯ ಮತ್ತು ಕೇಂದ್ರ ಸರಕಾರಗಳು ಮೀನುಗಾರರ ಹುಡುಕಾಟಕ್ಕೆ ಗಂಭೀರ ಪ್ರಯತ್ನ ನಡೆಸಿದವು. ನೌಕಾಪಡೆಯ ಸಹಾಯವೂ ಲಭಿಸಿತು. ಮಹಾರಾಷ್ಟ್ರದ ಮಾಲ್ವಣ್‌ ತೀರದಲ್ಲಿ ಸುವರ್ಣ ತ್ರಿಭುಜದಲ್ಲಿತ್ತೆನ್ನಲಾದ ಟ್ರೇ ಮೊದಲಾದ ಸಾಮಗ್ರಿಗಳು ತೇಲಿ ಬಂದ ಕಾರಣಕ್ಕೆ ಅಲ್ಲಿ ಆಳಸಮುದ್ರದಲ್ಲಿ ಮುಳುಗು ತಜ್ಞರು ಶೋಧ ನಡೆಸಿದ್ದರು.

ಕೊನೆಗೂ ಅವಶೇಷ ಪತ್ತೆ ?
ಎ. 28ರಂದು ಕಾರವಾರದ ನೌಕಾನೆಲೆಯಿಂದ ಐಎನ್‌ಎಸ್‌ ನಿರೀಕ್ಷಕ್‌ ಹಡಗಿನಲ್ಲಿ ಶಾಸಕ ರಘುಪತಿ ಭಟ್‌ ಅವರೊಂದಿಗೆ ಹೊರಟ ನೌಕಾಪಡೆಯ ತಂತ್ರಜ್ಞರು, ಮುಳುಗು ತಜ್ಞರು ಮಾಲ್ವಣ್‌ನಲ್ಲಿ ಶೋಧ ನಡೆಸಿದರು. ಮೇ 1ರಂದು ಮಾಲ್ವಣ್‌ ತೀರದಿಂದ 33 ಕಿ.ಮೀ. ದೂರ, 64 ಮೀ. ಆಳದಲ್ಲಿ ಬೋಟಿನ ಅವಶೇಷ ಪತ್ತೆಯಾಯಿತಾದರೂ ಒಳಗಿದ್ದ ಮೀನುಗಾರರು ಎಲ್ಲಿ ಹೋದರು ಎಂಬ ಪ್ರಶ್ನೆಗೆ ಈಗಲೂ ಉತ್ತರ ಸಿಕ್ಕಿಲ್ಲ.

ಲಭಿಸದ ಕೇಂದ್ರದ ಪರಿಹಾರ
ರಾಜ್ಯ ಸರಕಾರವು ಮೀನುಗಾರರ ಕುಟುಂಬಕ್ಕೆ ಎರಡು ಹಂತಗಳಲ್ಲಿ ಒಟ್ಟು ತಲಾ 11 ಲಕ್ಷ ರೂ. ನೀಡಿದೆ. ಆಗಿನ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೇಂದ್ರದಿಂದ ಸೂಕ್ತ ಪರಿಹಾರದ ಭರವಸೆ ನೀಡಿದ್ದರೂ ಈ ವರೆಗೂ ಸಿಕ್ಕಿಲ್ಲ.

Advertisement

ಬಂದೇ ಬರುವರೆಂಬ ನಿರೀಕ್ಷೆ
ದಾಮೋದರ ಅವರ ತಂದೆ ಸುವರ್ಣ ತಿಂಗಳಾಯ ಪುತ್ರನನ್ನು ನೆನೆ ನೆನೆದು ಕೊರಗಿ ನ. 7ರಂದು ನಿಧನ ಹೊಂದಿದ್ದಾರೆ. ತಾಯಿ ಸೀತಾ ಸಾಲ್ಯಾನ್‌ ಇನ್ನೂ ಪುತ್ರನ ನಿರೀಕ್ಷೆಯಲ್ಲಿದ್ದಾರೆ. ಪತ್ನಿ ಮೋಹಿನಿಗೂ ಪತಿ ಜೀವಂತವಾಗಿರುವರೆಂಬ ನಂಬಿಕೆ.

ಚಂದ್ರಶೇಖರ ಅವರ ಮನೆಯಲ್ಲಿ ಯೂ ಬದುಕು ಕಷ್ಟವಾಗಿದೆ. ಪತ್ನಿ ಶಾಂಭವಿಗೆ ಪ್ರಕರಣದ ಪೂರ್ಣ ವಿವರ ಇನ್ನೂ ತಿಳಿದಿಲ್ಲ. ಕುಮಟಾದ ಮೀನುಗಾರ ಸತೀಶ್‌ ಹರಿಕಂತ್ರ ಅವರ ಮನೆಯಲ್ಲಿ ವೃದ್ಧ ತಂದೆ ತಾಯಿ ಇದ್ದಾರೆ. 6 ವರ್ಷಗಳ ಹಿಂದೆ ಅಣ್ಣ ಅಪಘಾತದಲ್ಲಿ ಮೃತಪಟ್ಟಿದ್ದರು. ಈಗ ಒಪ್ಪೊತ್ತಿನ ಊಟಕ್ಕೂ ತತ್ವಾರವಾಗಿದ್ದು, ಪತ್ನಿ ಪ್ರಮೀಳಾ ನಿತ್ಯ ಕಣ್ಣೀರಿಡುತ್ತಿದ್ದಾರೆ. ಇನ್ನುಳಿದವರ ಕುಟುಂಬಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

ಡಿ. 18: ದಿಲ್ಲಿಗೆ ನಿಯೋಗ
ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ಜನಪ್ರತಿನಿಧಿಗಳು, ಮೀನುಗಾರ ಕುಟುಂಬ ಸದಸ್ಯರೊಡನೆ ನಿಯೋಗವು ಡಿ. 18ರಂದು ದಿಲ್ಲಿಗೆ ತೆರಳಲಿದ್ದು, ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿಯಾಗಿ ಕುಟುಂಬಕ್ಕೆ ಗರಿಷ್ಠ ಪರಿಹಾರ ನೀಡುವಂತೆ ಆಗ್ರಹಿಸಲಿದೆ.

– ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next