Advertisement

ಬೋಟ್‌ ನಾಪತ್ತೆ: ಅಪಹರಣ ದಿಕ್ಕಿನ ತನಿಖೆ ಮುಕ್ತಾಯ

12:30 AM Jan 19, 2019 | Team Udayavani |

ಉಡುಪಿ: ಸುವರ್ಣ ತ್ರಿಭುಜ ಬೋಟ್‌ ಅಪಹರಣ ಆಗಿರಬಹುದು ಎಂಬ ದಿಕ್ಕಿನ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಸುಳಿವು ಸಿಕ್ಕಿಲ್ಲ. ಈಗ ಅವಘಡ ಸಾಧ್ಯತೆಗಳ ಕಡೆಗೆ ತನಿಖೆ ಕೇಂದ್ರೀಕರಿಸಲಾಗಿದೆ ಎಂದು ತಿಳಿದುಬಂದಿದೆ. ನೌಕಾದಳ, ಕೋಸ್ಟ್‌ಗಾರ್ಡ್‌, ಉಡುಪಿ ಪೊಲೀಸರು ಮತ್ತು ಸ್ಥಳೀಯ ಮೀನುಗಾರರನ್ನು ಒಳಗೊಂಡಿದ್ದ 6 ತಂಡ ಮಹಾರಾಷ್ಟ್ರ ಮತ್ತು ಗೋವಾದ ವಿವಿಧೆಡೆ ತನಿಖೆ ನಡೆಸಿ ವಾಪಸಾಗಿದೆ. ಬೋಟ್‌ನಲ್ಲಿದ್ದ ಎರಡು ಬಾಕ್ಸ್‌ ಗಳು ಮಹಾರಾಷ್ಟ್ರದ ಮೀನುಗಾರರಿಗೆ ದೊರೆತಿರುವ ಮಾಹಿತಿ ವಿನಾ ಬೇರೆ ಯಾವುದೇ ಮಹತ್ವದ ಮಾಹಿತಿ ದೊರೆತಿಲ್ಲ ಎಂದು ಮೂಲಗಳು ತಿಳಿಸಿವೆ.

Advertisement

ಸೋನಾರ್‌ ಶೋಧ ಅಂತಿಮ?
ಬೋಟ್‌ ಮುಳುಗಿದ್ದರೆ ಪತ್ತೆ ಮಾಡುವುದಕ್ಕಾಗಿ ಮಹಾರಾಷ್ಟ್ರದ ಮಾಲ್ವಣ್‌ ಪ್ರದೇಶದಲ್ಲಿ ತೀರದಿಂದ ಸುಮಾರು 25-30 ನಾಟಿಕಲ್‌ ಮೈಲು ದೂರದಲ್ಲಿ ಸೋನಾರ್‌  ಅಳವಡಿಸಿದ ಹಡಗು ಶೋಧವನ್ನು ಜ.13ರಿಂದ ಆರಂಭಿಸಿದ್ದು, ಮುಂದುವರಿದಿದೆ.

ನೌಕಾದಳ ಹಡಗು ಹಾನಿಗೆ ಕಾರಣವೇನು? 
ಕೊಚ್ಚಿನ್‌ನಿಂದ ಮಹಾರಾಷ್ಟ್ರ ಮೂಲಕ ಹಾದು ಹೋಗಿರುವ ನೌಕಾಪಡೆ ಹಡಗಿಗೆ ಹಾನಿಯಾಗಿರುವ ಕುರಿತು ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಆದೇಶ ನೀಡಿದ್ದಾರೆ. ನೌಕಾಪಡೆಯ ಹಡಗಿನ ತಳಭಾಗಕ್ಕೆ ಹಾನಿ ಯಾಗಲು ನೀರೊಳಗೆ ಇದ್ದಿರಬಹುದಾದ ಬೋಟು ಸ್ಪರ್ಶಿಸಿರುವುದು ಕಾರಣವೇ ಅಥವಾ ಬೇರೆ ಕಾರಣದಿಂದ ಹಾನಿ ಆಗಿದೆಯೇ ಎಂಬುದು ಸದ್ಯದ ಶೋಧ- ತನಿಖೆಯ ಪ್ರಮುಖ ಆಯಾಮ ಎನ್ನಲಾಗಿದೆ. 

ಬೋಟ್‌ ಅಪಘಾತಕ್ಕೀಡಾಗಿ ಮುಳುಗಿದ್ದರೆ ಕಾರಣವೇನು, ಪ್ರವಾಸಿ ಹಡಗು ಢಿಕ್ಕಿಯಾಗಿರ ಬಹುದೇ ಅಥವಾ ತಾಂತ್ರಿಕ ದೋಷ ಉಂಟಾಗಿರ ಬಹುದೇ ಎಂಬ ಪ್ರಶ್ನೆಗಳೆದ್ದಿವೆ. ಡಿ.13ರಂದು ಇತರ 6 ಬೋಟ್‌ಗಳ ಜತೆಗೆ ಹೊರಟಿದ್ದ ಸುವರ್ಣ ತ್ರಿಭುಜ ಬೋಟ್‌ ತಾಂತ್ರಿಕ ಸಮಸ್ಯೆಯಿಂದ ಕೆಲವೇ ಗಂಟೆಗಳಲ್ಲಿ ವಾಪಸಾಗಿ ಸಮಸ್ಯೆ ಸರಿಪಡಿಸಿಕೊಂಡು ಹೋಗಿರುವುದು ಖಚಿತವಾಗಿದೆ. ದುರಸ್ತಿಯಾಗಿ ವಾಪಸಾದ ಅದು ಇತರ ಬೋಟ್‌ಗಳನ್ನು ಸೇರಿದ್ದಲ್ಲದೆ ಅವುಗಳನ್ನು ದಾಟಿ ಮುಂದೆ ಸಾಗಿತ್ತು. ಒಂದೇ ಸಮನೆ ಸಂಚರಿಸಿದ್ದರಿಂದ ತಾಂತ್ರಿಕ ದೋಷ ಉಂಟಾಗಿರಬಹುದೇ ಎಂಬ ಸಂದೇಹವೂ ಇದೆ ಎಂದು ಮೂಲಗಳು ತಿಳಿಸಿವೆ.

 ನಿಖರ ಮಾಹಿತಿ ಇಲ್ಲ: ಎಸ್‌ಪಿ
ಸೋನಾರ್‌ ಶೋಧ ನಡೆಯುತ್ತಿದೆ. ಬೋಟ್‌ ಏನಾಗಿದೆ ಎಂಬುದನ್ನು ನಿಖರವಾಗಿ ಹೇಳಲು ಅಸಾಧ್ಯ. ತೇಲುವುದನ್ನು ಮಾತ್ರ ಹೆಲಿಕಾಪ್ಟರ್‌ ಪತ್ತೆಹಚ್ಚ ಬಹುದು. ಹಾಗಾಗಿ ಈಗ ಹೆಲಿಕಾಪ್ಟರ್‌ ಶೋಧ ನಡೆಯುತ್ತಿಲ್ಲ. ಈ ಹಂತದಲ್ಲಿ ಖಚಿತ ಮಾಹಿತಿ ನೀಡಲಾಗದು ಎಂದು ಎಸ್‌ಪಿ ಹೇಳಿದ್ದಾರೆ. 

Advertisement

ನೌಕಾಪಡೆ ನೀಡಿದ ವರದಿಯಲ್ಲಿ ಪೂರ್ಣ ಮಾಹಿತಿ ಇಲ್ಲ. ಹಡಗು ಹಾನಿಗೀಡಾದ ಸ್ಥಳ ಯಾವುದೆಂದು ಗೊತ್ತಾದಲ್ಲಿ ಆ ಪ್ರದೇಶದಲ್ಲಿ ದೋಣಿ ಮುಳುಗಿದ್ದರೆ ಸೋನಾರ್‌ ಮೂಲಕ ಪತ್ತೆ ಹಚ್ಚಲು ಸಾಧ್ಯ. ಈ ಬಗ್ಗೆ ತನಿಖೆ ನಡೆಸಲು ಶಾಸಕ ರಘುಪತಿ ಭಟ್‌ ಮತ್ತು ಸಚಿವ ಸದಾನಂದ ಗೌಡ ಅವರು ಶುಕ್ರವಾರ ದಿಲ್ಲಿಯಲ್ಲಿ ರಕ್ಷಣಾ ಸಚಿವರನ್ನು ಭೇಟಿಯಾಗಿ ಒತ್ತಡ ಹೇರಲಿದ್ದಾರೆ.
 ಸತೀಶ್‌ ಕುಂದರ್‌
ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next