Advertisement

ಸುವರ್ಣಾವತಿ ಡ್ಯಾಂನಿಂದ ಬೇಸಿಗೆ ಬೆಳೆಗೆ ನೀರು ಹರಿಸಲು ನಿರ್ಧಾರ

02:03 PM Feb 09, 2021 | Team Udayavani |

ಚಾಮರಾಜನಗರ: ತಾಲೂಕಿನ ಸುವರ್ಣಾವತಿ ಜಲಾಶಯದಿಂದ ಬಲದಂಡೆ ಮತ್ತು ಎಡದಂಡೆ ನಾಲೆಗಳಿಗೆ 2020-21ನೇ ಸಾಲಿನ ಬೇಸಿಗೆ ಬೆಳೆಗಳಿಗೆ ನೀರು ಹರಿಸಲು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆದು ಸುವರ್ಣಾವತಿ ಜಲಾಶಯದಿಂದ ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ ತಕ್ಷಣದಿಂದಲೇ ನೀರು ಬಿಡಲು ನಿರ್ಧಾರ ಕೈಗೊಳ್ಳಲಾಯಿತು. ನೀರಿನ ಲಭ್ಯತೆ ಪ್ರಮಾಣವನ್ನು ಆಧರಿಸಿ ಪೂರ್ಣ ಪ್ರಮಾಣದ ಅಚ್ಚುಕಟ್ಟು ಪ್ರದೇಶಕ್ಕೆ ನೀರನ್ನು ಒದಗಿಸಲು ಸಾಧ್ಯವಿಲ್ಲದ ಕಾರಣ ಒಟ್ಟಾರೆ ಉಪಯೋಗಕ್ಕೆ ಬರುವ ನೀರಿನಲ್ಲಿ 384.10 ಎಂಸಿಎಫ್ಟಿ ನೀರನ್ನು 3306.65 ಎಕರೆ ಪ್ರದೇಶಕ್ಕೆ ಅರೆ ನೀರಾವರಿ ಬೆಳೆಗಳಿಗೆ (ಅರೆಖಷ್ಕಿ) ಕಟ್ಟು ನೀರಿನ ಪದ್ಧತಿ ಅನ್ವಯ ನೀರು ಹರಿಸಲು ಉಸ್ತುವಾರಿ ಸಚಿವರ ನೇತೃತ್ವದ ಸಲಹಾ ಸಮಿತಿಯು ಒಮ್ಮತದ ತೀರ್ಮಾನ ಕೈಗೊಂಡಿತು.

ಇದೇ ವೇಳೆ ಹಾಜರಿದ್ದ ನೀರು ಬಳಕೆದಾರರ ಸಂಘಗಳ ಪ್ರತಿನಿಧಿಗಳು, ರೈತ ಮುಖಂಡರು ನೀರು ಬಿಡುವ ಸಂಬಂಧ ಹಲವು ಮನವಿ ಹಾಗೂ ಬೆಳೆಗಾರರು, ರೈತರು ಎದರಿಸುತ್ತಿರುವ ಹಲವು ಸಮಸ್ಯೆಗಳನ್ನು ಗಮನಕ್ಕೆ ತಂದರು. ಕಳೆದ ಎರಡು ವರ್ಷಗಳಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ನಾಲೆ ಸೇರಿದಂತೆ ಇತರೆ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ ಎಂಬ ಬಗ್ಗೆ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನೀರಿನ ಲಭ್ಯತೆ ಆಧರಿಸಿ ನೀರು ಬಿಡಲು ತೀರ್ಮಾನಿಸಲಾಗಿದೆ.  ಜಿಲ್ಲಾಧಿಕಾರಿ ಮುಂದಿನ ವಾರದಲ್ಲೇ ನೀರು ಬಳಕೆದಾರರ ಸಭೆಯನ್ನು ಸುವರ್ಣಾವತಿ ಜಲಾಶಯ ಭಾಗದಲ್ಲೇ ನಡೆಸಲಿದ್ದಾರೆ ಎಂದು ತಿಳಿಸಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ನೀರಿನ ಲಭ್ಯತೆಯನ್ನು ಆಧರಿಸಿ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಮುಂದಾಬೇಕಿದೆ ಎಂದು ಹೇಳಿದರು. ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ಮಾತನಾಡಿ, ತಾವು ಶೀಘ್ರವೇ ಜಲಾಶಯ ಭಾಗದಲ್ಲಿ ನೀರು ಬಳಕೆದಾರರ ಮುಖಂಡರ ಸಭೆ ನಡೆಸುವುದಾಗಿ ಭರವಸೆ ನೀಡಿದರು.

Advertisement

 ಇದನ್ನೂ ಓದಿ :ಹಿಂಬದಿಯಿಂದ ಕಾರು ಡಿಕ್ಕಿ: ಬೈಕ್‌ ಸವಾರ ಸಾವು

ಕಾಡಾ ಅಧ್ಯಕ್ಷ ಎಂ. ಶಿವಲಿಂಗಯ್ಯ, ಕಾಡಾ ಆಡಳಿತಾಧಿಕಾರಿ ಬಾಲಕೃಷ್ಣ, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಎಂ.ಬಿ. ಪಾಟೀಲ್‌, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಮಂಜುನಾಥ್‌, ಸಹಾಯಕ ಎಂಜಿನಿಯರ್‌ ಮಹದೇವಸ್ವಾಮಿ, ರತೀಶ್‌, ಮಹೇಶ್‌, ನೀರು ಬಳಕೆದಾರರ ಸಂಘಗಳ  ಮುಖ್ಯಸ್ಥರು, ಪ್ರತಿನಿಧಿಗಳು, ರೈತ ಮುಖಂಡರಾದ ಶಿವಕುಮಾರ್‌, ಆರ್‌. ಮಹದೇವು, ಎಂ.ಮಹೇಶ್‌ ಪ್ರಭು, ದಡದಹಳ್ಳಿ ಗೋವಿಂದರಾಜು, ದಡದಹಳ್ಳಿ ರಮೇಶ್‌, ಸಿದ್ದಯ್ಯನಪುರದ ಗೋವಿಂದರಾಜು, ಚಂದ್ರಶೇಖರ್‌, ಆಲೂರು  ಮಲ್ಲು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next