ಪಣಜಿ: ನಾಲ್ವರು ಪ್ರಯಾಣಿಸುತ್ತಿದ್ದ ಎಸ್ ಯುವಿ ಸೇತುವೆಗೆ ಡಿಕ್ಕಿ ಹೊಡೆದು ಝುವಾರಿ ನದಿಗೆ ಬಿದ್ದ ಘಟನೆ ಗುರುವಾರ ಮಧ್ಯರಾತ್ರಿ ವೇಳೆ ದಕ್ಷಿಣ ಗೋವಾದಲ್ಲಿ ನಡೆದಿದ್ದು, ಎಲ್ಲಾ ಪ್ರಯಾಣಿಕರು ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:‘ಲಕ್ಕಿಮ್ಯಾನ್’ ಟೀಸರ್ ನಲ್ಲಿ ಪುನೀತ್ ದರ್ಶನ: ದೇವರಾಗಿ ಎಂಟ್ರಿಕೊಟ್ಟ ಅಪ್ಪು
ಮಧ್ಯರಾತ್ರಿ 1.10ಕ್ಕೆ ಈ ಘಟನೆ ನಡೆದಿದ್ದು, ವಾಹನ ಮತ್ತು ಪ್ರಯಾಣಿಕರ ಪತ್ತೆಗಾಗಿ ಭಾರತೀಯ ಕರಾವಳಿ ಪಡೆ, ನೌಕಾ ದಳ ಮತ್ತು ಅಗ್ನಿಶಾಮಕ ದಳ, ಗೋವಾ ಪೊಲೀಸರು ಜಂಟಿಯಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ವರದಿ ವಿವರಿಸಿದೆ.
ರಾಜಧಾನಿ ಪಣಜಿಯಿಂದ 15 ಕಿಲೋ ಮೀಟರ್ ದೂರದಲ್ಲಿರುವ ಕೋರ್ಟಾಲಿಮ್ ಗ್ರಾಮದ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಝುವಾರಿ ನದಿ ಸೇತುವೆಯಲ್ಲಿ ಎಸ್ ಯುವಿ ಕಾರನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.
ಅತಿಯಾದ ವೇಗದಿಂದ ಸೇತುವೆಗೆ ಡಿಕ್ಕಿ ಹೊಡೆದು ನದಿಗೆ ಬಿದ್ದಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಕಾರಿನಲ್ಲಿ ನಾಲ್ವರು ಇದ್ದು, ಯುವತಿ ಡ್ರೈವಿಂಗ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಕರಾವಳಿ ಪಡೆಯ ಹಡಗು, ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಈವರೆಗೂ ಎಸ್ ಯುವಿಯನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಇಂದೂ ಬೆಳಗ್ಗೆಯೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿರುವುದಾಗಿ ವರದಿ ಹೇಳಿದೆ.