ಬೆಳಗಾವಿ: ಕೋವಿಡ್ 19 ವೈರಸ್ ವ್ಯಾಪಕವಾಗಿ ಹರಡುತ್ತಿರುವಾಗ ದೆಹಲಿಯ ನಿಜಾಮುದ್ದಿನ್ ತಬ್ಲಿಘಿ ಜಮಾತ್ ಮರ್ಕಜ್‌ದಿಂದ ಬಂದ ಮೂವರು ಅಪರಿಚಿತರು ತಾಲೂಕಿನ ಸುಳೇಭಾವಿ ಗ್ರಾಮದ ಗುಡ್ಡದಲ್ಲಿ ಅಡಗಿ ಕುಳಿತಿದ್ದಾರೆ ಎಂಬ ಮಾಹಿತಿ ಮೇರೆಗೆ ಗ್ರಾಮದ ಯುವಕರ ಗುಂಪು ಸೋಮವಾರ ದಾಳಿ ನಡೆಸಿದಾಗ ಬ್ಯಾಗ್ ಬಿಟ್ಟು ಅಪರಿಚಿತರು ಪರಾರಿಯಾಗಿದ್ದಾರೆ.
ಕೆಲವು ದಿನಗಳಿಂದ ಗ್ರಾಮದ ಗೌಪ್ಯ ಸ್ಥಳಗಳಲ್ಲಿ ಕೆಲವರು ಅಡಗಿ ಕುಳಿತಿದ್ದಾರೆ ಎಂಬ ಮಾತು ಕೇಳಿ ಬರುತ್ತಿತ್ತು. ಈ ಬಗ್ಗೆ ಪೊಲೀಸ್ ಠಾಣೆಗೂ ಗ್ರಾಮಸ್ಥರು ಮಾಹಿತಿ ನೀಡಿದ್ದರು. ಅದರಂತೆ ಗ್ರಾಮದ ಗುಡ್ಡದ ಮೇಲೆ ಯುವಕರು ಹೋದಾಗ ಮೂರು ಜನ ತಮ್ಮ ಕಡೆ ಇದ್ದ ಬ್ಯಾಗ್ ಬಿಟ್ಟು ಓಡಿ ಹೋಗಿದ್ದಾರೆ. ಗುಡ್ಡದಲ್ಲಿ ಕೆಲ ಹೊತ್ತು ಹುಡುಕಾಡಿದರೂ ಅಲ್ಲಿ ಯಾರೂ ಇರಲಿಲ್ಲ ಎಂದು ಯುವಕರು ತಿಳಿಸಿದ್ದಾರೆ.
ಸ್ಥಳದಲ್ಲಿ ಸಿಕ್ಕಿದ ಬ್ಯಾಗನ್ನು ಪರಿಶೀಲಿಸಿದಾಗ ಕೆಲವು ಜೀವನಾವಶ್ಯಕ ವಸ್ತುಗಳು ಹಾಗೂ ಬಟ್ಟೆಗಳು ಇದ್ದವು. ಈ ಬ್ಯಾಗ್ ಅನ್ನು ಪೊಲೀಸರು ಪರಿಶೀಲನೆ ನಡೆಸಿ ನಂತರ ಸುಟ್ಟು ಹಾಕಿದ್ದಾರೆ.
ಈ ಭಾಗದಲ್ಲಿರುವ ಮಸೀದಿಯಲ್ಲಿ ಇನ್ನೂ ಕೆಲವರು ಅಡಗಿ ಕುಳಿತಿದ್ದಾರೆ ಹಾಗೂ ರಾತ್ರಿ ಹೊತ್ತಿನಲ್ಲಿ ಇಲ್ಲಿ ಕೆಲವು ಶಂಕಾಸ್ಪದ ಚಟುವಟಿಕೆಗಳು ನಡೆಯುತ್ತಿರುತ್ತವೆ ಹಾಗಾಗಿ ಕೂಡಲೇ ಪೊಲೀಸರು ಮಸೀದಿಯೊಳಗೆ ಹೋಗಿ ಪರಿಶೀಲನೆ ನಡೆಸಬೇಕು, ಅಡಗಿ ಕುಳಿತವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜತೆಗೆ ಓಡಿ ಹೋದವರ ಬಳಿ ಇದ್ದ ಬ್ಯಾಗ್ ಅನ್ನು ಪೊಲೀಸರು ಸುಟ್ಟು ಹಾಕುವ ಮೂಲಕ ಸಾಕ್ಷ್ಯ ನಾಶ ಮಾಡಿದ್ದಾರೆ ಎಂದು ಗ್ರಾಮಸ್ಥರು ಇದೇ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವಕರ ಗುಂಪು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು. ಸ್ಥಳದಲ್ಲಿ ಮಾರೀಹಾಳ ಠಾಣೆ ಪೊಲೀಸರು ಬಿಗಿ ಬಂದೋಬಸ್ತ್ ನಿಯೋಜಿಸಿದ್ದಾರೆ.