ದಾವಣಗೆರೆ: ಒಂದೇ ತಿಂಗಳಲ್ಲಿ 2 ಬಾರಿ ತೈಲಬೆಲೆ ಏರಿಸಿರುವುದನ್ನು ಖಂಡಿಸಿ, ಎಸ್‌ಯುಸಿಐ ಕಾರ್ಯಕರ್ತರು ನಗರದಲ್ಲಿ ಸೋಮವಾರ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿದರು. ಗಾಂಧಿ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಜನಸಾಮಾನ್ಯರು ಮೊದಲೇ ಕರೆನ್ಸಿ ಕೊರತೆಯಿಂದ ಸಂಕಷ್ಟಕ್ಕೆ ಈಡಾಗಿದ್ದಾರೆ.
ಈ ಮಧ್ಯೆ ಪದೇ ಪದೇ ತೈಲಬೆಲೆ ಏರಿಕೆ ಮಾಡುವುದರಿಂದ ಗಾಯದ ಮೇಲೆ ಉಪ್ಪು ಸುರಿದಂತಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಮಂಜುನಾಥ ಕೈದಾಳೆ, ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮುಂದೆ ಒಳ್ಳೆಯ ದಿನಗಳು ಬರುತ್ತವೆ ಎಂಬುದಾಗಿ ಹೇಳುತ್ತಿದೆಯೇ ಹೊರತು, ಇದುವರೆಗೆ ಅಂತಹ ಯಾವುದೇ ದಿನ ಬರಲೇ ಇಲ್ಲ.
ಇದೀಗ ಜನರ ಪಾಲಿಗೆ ಕೆಟ್ಟ ದಿನಗಳು ಆರಂಭವಾಗಿದೆ. ಒಂದು ಕಡೆ ಗರಿಷ್ಠ ಮುಖಬೆಲೆ ನೋಟು ಬ್ಯಾನ್ ಕ್ರಮವನ್ನು ಸಮರ್ಥವಾಗಿ ನಿಬಾಯಿಸದ ಕೇಂದ್ರ ಸರ್ಕಾರ ಜನರನ್ನು ಪೇಚಿಗೆ ತಳ್ಳಿದೆ. ಈಗ ತೈಲಬೆಲೆ ಏರಿಕೆ ಮೂಲಕ ಮತ್ತಷ್ಟು ಕಷ್ಟ ನೀಡುತ್ತಿದೆ ಎಂದರು. ಕೆಲ ದಿನಗಳ ಹಿಂದಷ್ಟೇ ಪೆಟ್ರೋಲ್ ಬೆಲೆ ಏರಿಕೆ ಮಾಡಲಾಗಿತ್ತು.
ಇದೀಗ ಹೊಸ ವರ್ಷದ ಕೊಡುಗೆಯಾಗಿ ಮತ್ತೆ ತೈಲ ಬೆಲೆ ಏರಿಕೆ ಮಾಡಲಾಗಿದೆ. ಜನರಿಗೆ ನಿತ್ಯ ಬಳಕೆ ವಸ್ತುಗಳಲ್ಲಿ ತೈಲವೂ ಸೇರಿದೆ. ಬೆಲೆ ಏರಿಕೆ ಮೂಲಕ ಸರ್ಕಾರ ತಾನು ಜನವಿರೋಧಿ ಎಂಬುದನ್ನು ಸಾಬೀತುಮಾಡಿದೆ ಎಂದು ಆರೋಪಿಸಿದರು. ಈ ಹಿಂದಿನ ಸರ್ಕಾರ ಇದ್ದಾಗ ಬಿಜೆಪಿಯವರು ತೈಲಬೆಲೆ ಏರಿಕೆಗೆ ತೀವ್ರ ಪ್ರತಿರೋಧ ಒಡ್ಡುತ್ತಿದ್ದರು. ಇದೀಗ ಅವರದ್ದೇ ಸರ್ಕಾರ ಆಡಳಿತ ನಡೆಸುತ್ತಿದೆ.
ಆದರೂ ಪದೇ ಪದೇ ತೈಲ ಬೆಲೆ ಏರಿಕೆ ಮಾಡಲಾಗುತ್ತಿದೆ. ಕಾರ್ಪೋರೇಟ್ ಕಂಪನಿ, ಆಯಿಲ್ ಕಂಪನಿ ಮಾಲೀಕರ ಓಲೈಕೆಗೆ ಕೇಂದ್ರ ಜಾಣ ಮೌನ ಪ್ರದರ್ಶನ ಮಾಡುತ್ತಿದೆ ಎಂದು ಅವರು ಹೇಳಿದರು. ಸಂಘಟನೆಯ ಬನಶೀ, ತಿಪ್ಪೇಸ್ವಾಮಿ, ಜ್ಯೋತಿ, ಸೌಮ್ಯ, ಭಾರತಿ, ಪರಶುರಾಮ್, ಲೋಕೇಶ್, ಶಶಿ, ನಾಗಜ್ಯೋತಿ, ಪ್ರಹ್ಲಾದ್, ಮಂಜುನಾಥ್ ಕುಕ್ಕವಾಡ, ಸಂಜು, ಕಾವ್ಯ, ಪೂಜಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.