ಹೊಸದಿಲ್ಲಿ : ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರು ಉನ್ನತ ಅಧಿಕಾರಿಗಳ ಭಾರತೀಯ ನಿಯೋಗದೊಂದಿಗೆ ವಿಶ್ವ ಸಂಸ್ಥೆಯ ಮಹಾಧಿವೇಶನದಲ್ಲಿ ಭಾರತವನ್ನು ಪ್ರತಿನಿಧಿಸುವ ಸಲುವಾಗಿ ಇಂದು ನ್ಯೂಯಾರ್ಕ್ ಗೆ ಆಗಮಿಸಿದ್ದಾರೆ.
ಸ್ವರಾಜ್ ಅವರು ಮುಂದಿನ ಏಳು ದಿನಗಳ ಅತ್ಯಂತ ನಿಬಿಡ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ವಿಶ್ವ ನಾಯಕರೊಂದಿಗೆ ಏರ್ಪಡುವ ಸುಮಾರು 20 ದ್ವಿಪಕ್ಷೀಯ ಮತ್ತು ತ್ರಿಪಕ್ಷೀಯ ಮಾತುಕತೆಗಳಲ್ಲಿ ಭಾಗಿಯಾಗಲಿದ್ದಾರೆ.
ಇವುಗಳಲ್ಲಿ ಅತೀ ಮುಖ್ಯವಾಗಿ ಸ್ವರಾಜ್ ಅವರು ಜಪಾನ್ ಮತ್ತು ಅಮೆರಿಕದ ವಿದೇಶಾಂಗ ಸಚಿವರಾದ ಟ್ಯಾರೋ ಕೋನೋ ಮತ್ತು ರೆಕ್ಸ್ ಟಿಲ್ಲರ್‌ಸನ್ ಅವರೊಂದಿಗೆ ದ್ವಿಪಕ್ಷೀಯ ಮತ್ತು ತ್ರಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಉತ್ತರ ಕೊರಿಯದಿಂದ ಹೆಚ್ಚುತ್ತಿರುವ ಅಣ್ವಸ್ತ್ರ ಬೆದರಿಕೆಗಳ ನಡುವೆಯೇ ಈ ಮಾತುಕತೆಗಳು ನಡೆಯುವುದು ಮಹತ್ವದ್ದಾಗಿದೆ. ಉತ್ತರ ಕೊರಿಯ ಸೆಪ್ಟಂಬರ 15ರಂದು, ಒಂದೇ ತಿಂಗಳ ಅವಧಿಯೊಳಗೆ, ಜಪಾನ್ ಆಗಸದ ಮೇಲ್ಭಾಗದಿಂದ ಖಂಡಾಂತರ ಕ್ಷಿಪಣಿಯನ್ನು ಎರಡನೇ ಬಾರಿ ಹಾರಿಸಿರುವುದು ಜಾಗತಿಕ ಕಳವಳದ ವಿಷಯವಾಗಿದೆ.
72ನೇ ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಪಾಲ್ಗೊಳ್ಳಲು ನ್ಯೂಯಾರ್ಕ್ ಗೆ ಆಗಮಿಸಿರುವ ಸುಶ್ಮಾ ಸ್ವರಾಜ್ ಅವರು ಭಯೋತ್ಪಾದನೆ, ಜನ ಕೇಂದ್ರೀಕೃತ ವಲಸೆ, ಜೈಶ್ ಎ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್, ವಿಶ್ವಸಂಸ್ಥೆಯ ಸುಧಾರಣೆಗಳು, ಹವಾಮಾನ ಬದಲಾವಣೆ ಮತ್ತು ಇತರ ಶಾಂತಿ ಪಾಲನಾ ವಿಷಯಗಳನ್ನು ಮುಖ್ಯವಾಗಿ ಚರ್ಚಿಸಲಿದ್ದಾರೆ.
ಈ ಮಹಾಧಿವೇಶನದ ಪಾರ್ಶ್ವದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಸ್ವರಾಜ್ ಪಾಲ್ಗೊಂಡು ಭಯೋತ್ಪಾದನೆ ಪಿಡುಗನ್ನು ಚರ್ಚಿಸುವರು.