Advertisement

“ಸೂರ್ಯ ಟೀಮ್‌ ಇಂಡಿಯಾದಲ್ಲಿ ಇರಬೇಕಿತ್ತು’

11:35 PM Oct 29, 2020 | mahesh |

ಅಬುಧಾಬಿ: ಆಸ್ಟ್ರೇಲಿಯ ಪ್ರವಾಸಗೈಯುವ ಭಾರತದ ಯಾವುದೇ ತಂಡದಲ್ಲಿ ಸ್ಥಾನ ಪಡೆಯದ ಸೂರ್ಯ ಕುಮಾರ್‌ ಯಾದವ್‌ ಬುಧವಾರದ ಆರ್‌ಸಿಬಿ ಎದುರಿನ ಪಂದ್ಯದಲ್ಲಿ ತನ್ನ ತಾಕತ್ತು ಪ್ರದರ್ಶಿಸಿ ಆಯ್ಕೆಗಾರರಿಗೆ ಸವಾಲೆಸೆದಿದ್ದಾರೆ. ಜತೆಗೆ ಯಾದವ್‌ ಭಾರತ ತಂಡದಲ್ಲಿ ಇರಬೇಕಿತ್ತು ಎಂಬುದಾಗಿ ಮುಂಬೈ ತಂಡದ ಉಸ್ತುವಾರಿ ನಾಯಕ ಕೈರನ್‌ ಪೊಲಾರ್ಡ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

“ಎರಡು ವಿಕೆಟ್‌ ಬೇಗನೇ ಬಿದ್ದಾಗ ಅಮೋಘ ಸ್ಟ್ರೈಕ್‌ರೇಟ್‌ ಮೂಲಕ ತಂಡವನ್ನು ಆಧರಿಸಿ ನಿಲ್ಲುವುದು ಸುಲಭವಲ್ಲ. ಆದರೆ ಸೂರ್ಯಕುಮಾರ್‌ ಇದನ್ನು ಸಾಧಿಸಿ ತೋರಿದ್ದಾರೆ. ಅವರು ಈಗಾಗಲೇ ಭಾರತ ತಂಡದಲ್ಲಿರಬೇಕಿತ್ತು’ ಎಂಬುದಾಗಿ ಪೊಲಾರ್ಡ್‌ ಹೇಳಿದರು.

ಫಿನಿಶಿಂಗ್‌ಗಾಗಿ ಕಾಯುತ್ತಿದ್ದೆ
ಇದೇ ವೇಳೆ ಪ್ರಕ್ರಿಯಿಸಿದ ಸೂರ್ಯಕುಮಾರ್‌ ಯಾದವ್‌, “ನಾನು ಪರಿಪೂರ್ಣ ಫಿನಿಶಿಂಗ್‌ಗಾಗಿ ಕಾಯುತ್ತಿದ್ದೆ. ಇದು ಹೇಗೆ ಸಾಧ್ಯವಾಗಲಿದೆ ಎಂಬ ಬಗ್ಗೆ ಯೋಚಿಸುತ್ತಿದ್ದೆ. ನನ್ನ ಆಟದ ಬಗ್ಗೆಯೇ ನಾನು ಪರಿಪೂರ್ಣವಾಗಿ ತಿಳಿದುಕೊಳ್ಳಬೇಕಿತ್ತು. ಮೆಡಿಟೇಶನ್‌, ನನ್ನೊಂದಿಗೇ ಸಮಯ ಕಳೆದುದರಿಂದ ಕ್ರೀಸ್‌ನಲ್ಲಿ ಬಹಳ ಹೊತ್ತು ನಿಲ್ಲುವಂತಾಯಿತು’ ಎಂದರು.

ಚಹಲ್‌ ಎಸೆತಗಳನ್ನು ಕವರ್‌ ವಿಭಾಗದ ಮೇಲಿನಿಂದ ಬಾರಿಸಿದ್ದು, ಸ್ಟೇನ್‌ ಎಸೆತಗಳಿಗೆ ಬ್ಯಾಕ್‌-ಫ‌ುಟ್‌ ಡ್ರೈವ್‌ ಟಚ್‌ ನೀಡಿದ್ದೆಲ್ಲ ಸೂರ್ಯಕುಮಾರ್‌ ಅವರ ಆಕರ್ಷಕ ಬ್ಯಾಟಿಂಗಿಗೆ ಸಾಕ್ಷಿಯಾಗಿತ್ತು. ಕೇವಲ 43 ಎಸೆತ ಎದುರಿಸಿದ ಯಾದವ್‌, ಅಜೇಯ 79 ರನ್‌ ಬಾರಿಸಿ ಮುಂಬೈ ಗೆಲುವಿನ ರೂವಾರಿಯಾದರು. ಈ ಪಂದ್ಯಶ್ರೇಷ್ಠ ಆಟದಲ್ಲಿ 10 ಬೌಂಡರಿ, 3 ಸಿಕ್ಸರ್‌ ಒಳಗೊಂಡಿತ್ತು.

ಇಂಥ ಸ್ಟೈಲಿಶ್‌ ಬ್ಯಾಟ್ಸ್‌ಮನ್‌ ಟೀಮ್‌ ಇಂಡಿಯಾಕ್ಕೆ ಆಯ್ಕೆಯಾಗದಿರುವ ಬಗ್ಗೆ ಎಲ್ಲ ದಿಕ್ಕುಗಳಿಂದಲೂ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಆದರೆ ಯಾದವ್‌ ವಯಸ್ಸೇ ಇದಕ್ಕೆ ಅಡ್ಡಿಯಾಗಿರುವ ಸಾಧ್ಯತೆ ಇಲ್ಲದಿಲ್ಲ. ಈಗಾಗಲೇ ಅವರಿಗೆ 30 ವರ್ಷ ಪೂರ್ತಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next