ರಾಯಬಾಗ (ಬೆಳಗಾವಿ): ವ್ಯಕ್ತಿಯೊಬ್ಬ ಸತ್ತು ಬದುಕಿದ ಆಶ್ಚರ್ಯಕರ ಘಟನೆ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಪುರಸಭೆ ಹಾಗೂ ಪಿಕೆಪಿಎಸ್ ಸದಸ್ಯ ಸಂಗಪ್ಪ ಖೇತಗೌಡರ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮಿರಜ್‌ನ ಆಸ್ಪತ್ರೆಯೊಂದರಲ್ಲಿ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಮೆದುಳಿನಲ್ಲಿ ರಕ್ತಸ್ರಾವದಿಂದ ಚೇತರಿಕೆ ಕಾಣದೆ ದೇಹದ ಸಂಚಲನ ಆಗದಿರುವುದನ್ನು ಕಂಡು ಮಂಗಳವಾರ ವೈದ್ಯರು ಮೃತಪಟ್ಟಿರುವುದಾಗಿ ಸಂಬಂಧಿಕರಿಗೆ ತಿಳಿಸಿದರು.
ವಿಷಯ ತಿಳಿದ ಸಾರ್ವಜನಿಕರು ಸಂಗಪ್ಪ ಅವರ ಮನೆ ಮುಂದೆ ಸೇರಿ ಅಂತ್ಯಕ್ರಿಯೆ ಮಾಡಲು ರುದ್ರಭೂಮಿಯಲ್ಲಿ ಗುಂಡಿ ತೋಡಿ ಮೃತದೇಹ ಬರುವಿಕೆಗಾಗಿ ಕಾದು ಕುಳಿತಿದ್ದರು. ಆದರೆ, ಮಂಗಳವಾರ ಸಂಜೆ ಸಂಗಪ್ಪ ಅವರನ್ನು ಗ್ರಾಮಕ್ಕೆ ತರುವಾಗ ದಾರಿ ಮಧ್ಯೆ ಆ್ಯಂಬುಲೆನ್ಸ್‌ನಲ್ಲಿ ಕೈ ಕಾಲು ಅಲುಗಾಡಿಸಿದರು. ನಂತರ ಅವರನ್ನು ಹಾರೂಗೇರಿ ಖಾಸಗಿ ಆಸ್ಪತ್ರೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಬಳಿಕ, ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಸಂಗಪ್ಪ ಅವರನ್ನು ಬೆಳಗಾವಿ ಕೆಎಲ್‌ಇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ರುದ್ರಭೂಮಿಯಲ್ಲಿ ತೋಡಿದ ಗುಂಡಿಗೆ ಕೋಳಿಯನ್ನು ಹಾಕಿ ಅಂತ್ಯಕ್ರಿಯೆ ಮಾಡಲಾಯಿತು.
ಸಂಗಪ್ಪ ಖೇತಗೌಡರ ಮೃತಪಟ್ಟಿದ್ದಾರೆ ಎಂದು ನಾನು ಹೇಳಿಲ್ಲ. ಮೆದುಳಿನಲ್ಲಿ ರಕ್ತಸ್ರಾವದಿಂದ ಅವರ ದೇಹ ಸಂಚಲನ ಇಲ್ಲದಿರುವುದನ್ನು ನೋಡಿ ಸಂಬಂಧಿಕರ ಆಸೆಯಂತೆ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಲಾಯಿತು. ದಾರಿಯಲ್ಲಿ ಏನು ನಡೆದಿದೆ ಎನ್ನುವುದು ನನಗೆ ಗೊತ್ತಿಲ್ಲ.
– ಡಾ.ರವೀಂದ್ರ ಪಾಟೀಲ, ವೈದ್ಯ