ಅಹ್ಮದಾಬಾದ್: ಎಂಟು ಪಂದ್ಯಗಳಲ್ಲಿ ಆರನ್ನು ಸೋತು ಕೊನೆಯ ಸ್ಥಾನದ ನಂಟಿಗೆ ಫೆವಿಕಾಲ್ ಹಾಕಿಕೊಂಡಂತಿರುವ ಡೆಲ್ಲಿ ಕ್ಯಾಪಿಟಲ್ಸ್ ಮುಂದೀಗ ಅಳಿವು-ಉಳಿವಿನ ಚಿಂತೆ ತೀವ್ರಗೊಂಡಿದೆ. ಉಳಿದ ಆರೂ ಲೀಗ್ ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡ ಡೇವಿಡ್ ವಾರ್ನರ್ ಪಡೆಯದ್ದು. ಮೊದಲ ಹಂತವಾಗಿ ಮಂಗಳವಾರ ರಾತ್ರಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಸವಾಲು ಎದುರಾಗಲಿದೆ.
ಇನ್ನೊಂದೆಡೆ ಗುಜರಾತ್ ಟೈಟಾನ್ಸ್ ಈಗಾಗಲೇ ತನ್ನ ಪ್ಲೆ-ಆಫ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿದೆ. ಡೆಲ್ಲಿಗೆ ತದ್ವಿರುದ್ಧವಾಗಿ ಎಂಟರಲ್ಲಿ 6 ಪಂದ್ಯಗಳನ್ನು ಗೆದ್ದ ಹೆಗ್ಗಳಿಕೆ ಪಾಂಡ್ಯ ಪಡೆಯದ್ದು. ಇದರಲ್ಲೊಂದು ಗೆಲುವು ಡೆಲ್ಲಿ ವಿರುದ್ಧವೇ ದಾಖಲಾಗಿದೆ.
ಹೊಸದಿಲ್ಲಿಯಲ್ಲಿ ಏರ್ಪಟ್ಟ ಮೊದಲ ಸುತ್ತಿನ ಕದನದಲ್ಲಿ ಗುಜರಾತ್ 6 ವಿಕೆಟ್‌ಗಳಿಂದ ಡೆಲ್ಲಿಯನ್ನು ಮಣಿಸಿತ್ತು. ಡೆಲ್ಲಿ 8 ವಿಕೆಟಿಗೆ 162 ರನ್ ಪೇರಿಸಿದರೆ, ಗುಜರಾತ್ 18.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 163 ರನ್ ಗಳಿಸಿತ್ತು. ಇದಕ್ಕೆ ಸೇಡು ತೀರಿಸುವ ಮೂಲಕ ವಾರ್ನರ್ ಪಡೆ ಗೆಲುವಿನ ಲಯವನ್ನು ಕಂಡುಕೊಂಡೀತೇ ಎಂಬುದೊಂದು ಸಣ್ಣ ನಿರೀಕ್ಷೆ.
ಎಂದೂ ಮುಗಿಯದ ಗೋಳು
ಡೆಲ್ಲಿಯದ್ದು ಎಂದೂ ಮುಗಿಯದ ಸಮಸ್ಯೆ. ಇನ್ನೊಂದೆಡೆ ಗುಜರಾತ್‌ನದ್ದು ಗೆಲುವಿನ ಓಟ. ಅದು ಎಂಥ ಸ್ಥಿತಿಯಲ್ಲೂ ಗೆಲುವಿನಿಂದ ವಿಮುಖ ವಾಗದ ರೀತಿಯಲ್ಲಿ ಆಡುತ್ತಿದೆ.
ಪೃಥ್ವಿ ಶಾ, ಸಫìರಾಜ್ ಖಾನ್, ರಿಲೀ ರೋಸ್ಯೂ, ಅಭಿಷೇಕ್ ಪೊರೆಲ್, ಮನೀಷ್ ಪಾಂಡೆ, ಪ್ರಿಯಂ ಗರ್ಗ್ ಅವರೆಲ್ಲರ ಘೋರ ಬ್ಯಾಟಿಂಗ್ ವೈಫಲ್ಯ ಡೆಲ್ಲಿಯನ್ನು ಕಾಡುತ್ತಲೇ ಬಂದಿದೆ. ಐಪಿಎಲ್ ಅರ್ಧ ಹಾದಿ ಮುಗಿದರೂ ಇದಕ್ಕಿನ್ನೂ ಪರಿಹಾರ ಕಂಡು ಕೊಳ್ಳಲು ಡೆಲ್ಲಿಗೆ ಸಾಧ್ಯವಾಗದಿರುವುದು ವಿಪರ್ಯಾಸ.
ಸದಾ ಕ್ರೀಸ್ ಆಕ್ರಮಿಸಿಕೊಳ್ಳುತ್ತಿದ್ದ ನಾಯಕ ಡೇವಿಡ್ ವಾರ್ನರ್ ಕೂಡ ಹೈದರಾಬಾದ್ ಎದುರಿನ ಕೊನೆಯ ಪಂದ್ಯದಲ್ಲಿ ಸೊನ್ನೆ ಸುತ್ತಿ ಹೋದರು. ಆದರೆ ಶಾ ಬದಲು ಆರಂಭಿಕನಾಗಿ ಬಂದ ಫಿಲಿಪ್ ಸಾಲ್ಟ್, ಸತತ ವೈಫಲ್ಯ ಕಾಣುತ್ತಲೇ ಇದ್ದ ಮಿಚೆಲ್ ಮಾರ್ಷ್ ಮಿಂಚಿದರು. ಆದರೂ ತಂಡ ದಡ ಮುಟ್ಟಲಿಲ್ಲ. ಅಕ್ಷರ್ ಪಟೇಲ್ ಮಾತ್ರ ಸ್ಥಿರವಾಗಿ ಆಡುತ್ತ ರನ್ ಗಳಿಸುತ್ತಿದ್ದಾರೆ. ಇದರಿಂದ ಪ್ರಯೋಜನ ಮಾತ್ರ ಲಭಿಸುತ್ತಿಲ್ಲ.
ಬೌಲಿಂಗ್ ವಿಭಾಗದಲ್ಲಿ ಹಳೆ ಹುಲಿ ಇಶಾಂತ್ ಶರ್ಮ ಪರಿಣಾಮ ಬೀರುತ್ತಿದ್ದಾರೆ. ಅಕ್ಷರ್ ಪಟೇಲ್ ಕೂಡ ಓಕೆ. ಆದರೆ ಮುಕೇಶ್ ಕುಮಾರ್ ಕಳೆದ 7 ಪಂದ್ಯಗಳಲ್ಲಿ ಓವರಿಗೆ 11ರಷ್ಟು ರನ್ ನೀಡಿ ದುಬಾರಿ ಆಗುತ್ತಿದ್ದಾರೆ.