Advertisement
ಈ ಹೊತ್ತಿನ ಪರಿಭಾಷೆಯಲ್ಲಿ ಹೇಳುವುದಾದರೆ ಮಂಜುನಾಥ್ “24ಗಿ7′ ಕವಿ. ಸದಾ ಕವಿತೆಯ ಗುಂಗಿನಲ್ಲಿ ಇರುತ್ತಿದ್ದ ಅವರು ಪ್ರತಿಬಾರಿ ನಮ್ಮ ಮನೆಗೆ ಬರುವಾಗ ಜತೆಯಲ್ಲಿ ಪಂಪ-ಕುಮಾರವ್ಯಾಸನನ್ನೋ, ಅಲ್ಲಮಪ್ರಭು-ಲಾವೋತ್ಸೆಯನ್ನೋ ಬೇಂದ್ರೆ ಪ್ರತಿದಿನ ಅವರನ್ನೋ ಕರೆತರುತ್ತಿದ್ದರು! ಕಾವ್ಯದ ಬಗೆಗಿನ ಅವರ ಏಕಾಗ್ರತೆ, ಪ್ರೀತಿ, ಅಧ್ಯಯನ ನಾಗಭೂಷಣ ಅವರೊಂದಿಗೆ ಅವರು ನಡೆಸುವ ಕಾವ್ಯ ಚರ್ಚೆ ನನಗೆ ಅಸೂಯೆ ಹುಟ್ಟಿಸುತ್ತಿತ್ತು. ಅವರನ್ನು ಕಾವ್ಯ ದೇವತೆಯ ತೆಕ್ಕೆಯಿಂದ ಬಿಡುಗಡೆಗೊಳಿಸಲು ವಿಫಲರಾಗಿ ಅವರಿಗೆ ಮದುವೆ ಮಾಡಲು ಪ್ರಯತ್ನಿಸಿ ಹುಡುಗಿಯರ ಅನ್ವೇಷಣೆಗೆ ತೊಡಗಿದೆವು. ಅವರದ್ದು ಚಿಕ್ಕಿ-ಅಕ್ಕ-ತಂಗಿ, ಅಣ್ಣ-ತಮ್ಮಂದಿರ ತುಂಬು ಸಂಸಾರ. ಕೊನೆಗೆ ಅವರೇ ಇಷ್ಟಪಟ್ಟು ಮದುವೆಯಾದ ಹುಡುಗಿ-ಆಕೆಯ ಹೆಸರೂ “ಸವಿತಾ’ ಮಂಜುನಾಥ್ ಅವರ ಕಾವ್ಯದ ಹುಚ್ಚನ್ನು ಮತ್ತಷ್ಟು ಹೆಚ್ಚಿಸಿ ಮತ್ತಷ್ಟು ಒಳ್ಳೆಯ ಕವನಗಳನ್ನು ಬರೆಯುವುದಕ್ಕೆ ಒತ್ತಾಸೆಯಾದಳು.
Related Articles
Advertisement
ಕವಿತೆ ಎಂದರೆ ಏನು ಎಂದು ದಿನಗಟ್ಟಲೆ ಚರ್ಚಿಸಬಹುದು, ಪುಟಗಟ್ಟಲೆ ಬರೆಯಬಹುದು. ಆದರೆ, ಕವಿ ಅದನ್ನು ತನ್ನ ಕವಿತೆಯಲ್ಲಿ ಸಾಧಿಸುವುದು ಸವಾಲೇ ಸರಿ. ಆದಾಗ್ಯೂ ಮಂಜುನಾಥ್ ಅವರು ಅವರ ಹತ್ತುಹಲವು ಕವಿತೆಗಳಲ್ಲಿ ಸಾಧಿಸುವುದಕ್ಕೆ ಒಂದೆರಡು ಪುಟ್ಟ ಕವಿತೆಗಳನ್ನು ಉದಾಹರಿಸುವುದಾದರೆ:
ರಾಟವಾಳಇಡೀ ದಿನ ಸುತ್ತಿದ ಚಕ್ರ ಇರುಳಲ್ಲಿ ನಿಂದಿದೆ
ಬೆಳಕ ಸುರಿಯುತ್ತಿದೆ ದೀಪಗಳು ಮಣ್ಣಿಗೆ
ತುಸುವೇ ತುಯ್ದಂತೆ ರಾಟವಾಳ
ರಾಟವಾಳ ಈಗ ತನಗಾಗಿ ತುಸುವೇ
(ನಂದಬಟ್ಟಲು)
ಜಿಂಕೆ
ಯಾಕಷ್ಟು ವೇಗ ಜಿಂಕೆಗೆ
ಅದಕ್ಕೆ ಪ್ರಕೃತಿ ಕಾರಣ
ಜಿಂಕೆಯನು ಹುಲಿಯ ಆಹಾರ ಮಾಡಿದೆ
ಓಡಲು ನೀಳ ಕಾಲುಗಳ ನೀಡಿದೆ
ಕಂಗಳ ಒದ್ದೆ ಹೊಳಪು ಕೋಡು ತೊಗಲಿನ ಚೆಲುವು?
ಅದು ದೇವರ ಉದ್ದೇಶ
ಹುಲಿ ಜಿಂಕೆಯನು ಹಿಡಿವಾಗ
ಕರಗಲೆಂದು ಮನುಜ ಹೃದಯ
(ನಂದಬಟ್ಟಲು) ರಕ್ತ-ಮಾಂಸ ತುಂಬಿದ ಜೀವಿಯಾಗಿ ನಮ್ಮೊಂದಿಗೆ ಕವಿತೆಯನ್ನು ಚರ್ಚಿಸುತ್ತಿದ್ದ. ಈ ಹೊತ್ತೂ ಕಣ್ಣೆದುರಲ್ಲಿ ಇರುವಂತೆ ತೋರುತ್ತಿರುವ ಮಂಜುನಾಥ್ ಬಗ್ಗೆ ಹೀಗೆಲ್ಲ ಬರೆಯಲು ವೇದನೆಯಾಗುತ್ತಿದೆ. ಸಣ್ಣಪುಟ್ಟ ಆಸೆ-ಆಮಿಷ-ಅವಕಾಶಗಳಿಗೆ ತಮ್ಮ ಆತ್ಮದ ತುಣುಕೇ ಆಗಿರುವ ಕವಿತೆಯನ್ನು ಬಲಿಗೊಡದೆ ಸದಾ ಕವಿತೆಯನ್ನೇ ಉಸಿರಾಡಿದ ಮಂಜುನಾಥ್ ನನ್ನ ಮಟ್ಟಿಗಾದರೋ ಘನತೆವೆತ್ತ ಕವಿಜೀವ! ಎಂಟು ಕವನ ಸಂಕಲನಗಳಲ್ಲಿನ ಮುನ್ನೂರಕ್ಕೂ ಹೆಚ್ಚು ಕವಿತೆಗಳು ಅವರು ಕನ್ನಡ ಕಾವ್ಯಪ್ರೇಮಿಗಳಿಗೆ ನೀಡಿರುವ ಬೆಲೆಬಾಳುವ ಉಡುಗೊರೆ. ದೊಡ್ಡ ದೊಡ್ಡ ಸರಕಾರಿ ಉತ್ಸವ-ಕವಿಗೋಷ್ಠಿ-ಜಾತ್ರೆಗಳಲ್ಲಿ ನಾನವರನ್ನು ಕಂಡಿಲ್ಲ! ಹೊಟೇಲಿನ ಮಾಣಿಯ ಮುಂದೆಯೋ, ಪಾನ್‌ಬೀಡಾವಾಲನ ಮುಂದೆಯೋ, ಸಂತೆಯಲ್ಲಿ ತರಕಾರಿ ಮಾರುವ ಹೆಂಗಸಿನ ಮುಂದೆಯೋ ಕವನ ಓದಿದ್ದು… ಅದು ಅವರ ರೀತಿ… ಅಪೂರ್ವ ಕಾವ್ಯಪ್ರೀತಿ! – ಸವಿತಾ ನಾಗಭೂಷಣ