Advertisement

ಹಳ್ಳಿಗಳಿಂದ ಹಿಂದೂ ಸಂಸ್ಕೃತಿ ಉಳಿವು; ಜಸ್ಟೀಸ್‌ ಕುಮಾರ್‌

05:58 PM Jun 03, 2022 | Team Udayavani |

ಮುಳಬಾಗಿಲು: ರಾಜಕೀಯ ಹಿತಾಸಕ್ತಿಗಳಿಗೆ ಬಲಿಯಾಗುತ್ತಿರುವ ಹಿಂದೂ ಧರ್ಮ, ನಮ್ಮ ಸಂಸ್ಕೃತಿ, ಆಚಾರ – ವಿಚಾರಗಳು ಇನ್ನೂ ಉಳಿದಿರುವುದು ಗ್ರಾಮೀಣ ಜನರಿಂದ ಎಂದು ಜಸ್ಟೀಸ್‌ ಕುಮಾರ್‌ ಹೇಳಿದರು.

Advertisement

ತಾಲೂಕಿನ ಆವಣಿ ಗ್ರಾಮದ ಶೃಂಗೇರಿ ಮಠದಲ್ಲಿ ನಡೆದ ನೂತನ ಮಠಾಧಿಪತಿ ಶಾಂತಾನಂದಭಾರತೀ ಸ್ವಾಮಿಗಳ ಪೀಠಾರೋಹಣ, ಪಟ್ಟಾಭಿಷೇಕ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಸಮಾಜ ಎಷ್ಟೇ ಆಧುನಿಕವಾಗಿ ಅಭಿವೃದ್ಧಿ ಹೊಂದಿದ್ದರೂ ಶತಮಾನಗಳಿಂದಲೂ ನಮ್ಮ ರಾಷ್ಟ್ರದಲ್ಲಿ ಹಿಂದೂ ಧರ್ಮಕ್ಕೆ ಸಾಕಷ್ಟು ಪ್ರಾಧಾನ್ಯತೆ ನೀಡಲಾಗಿದೆ. ಅದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ವಿವರಿಸಿದರು.

ನನಗೆ ಆ ಅವಕಾಶ ಒದಗಿಬಂದಿದೆ: ಈ ನಿಟ್ಟಿನಲ್ಲಿಯೇ ತಾವು ಹಲವು ಕಾರ್ಯಕ್ರಮಗಳ ಜವಾಬ್ದಾರಿ ವಹಿಸಿಕೊಂಡಿದ್ದರೂ, ಇದು ವಿಭಿನ್ನ ಮತ್ತು ತುಂಬಾ ವಿಶೇಷವಾಗಿದೆ. ದೈವ ಕಾರ್ಯಕ್ಕೆ ಎಲ್ಲರಿಗೂ ಅವಕಾಶ ಸಿಗುವುದಿಲ್ಲ, ಆದರೆ, ನನಗೆ ಆ ಅವಕಾಶ ಒದಗಿಬಂದಿದ್ದು, ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ ಎಂದು ಹೇಳಿದರು.

ಎಲ್ಲರೂ ದೈವ ಕಾರ್ಯದಲ್ಲಿ ಪಾಲ್ಗೊಳ್ಳಲಿ: ಇತ್ತೀಚಿನ ದಿನಗಳಲ್ಲಿ ತಮ್ಮ ಸ್ವಹಿತಾಸಕ್ತಿಗಳಿಗಾಗಿ, ರಾಜಕೀಯಕ್ಕಾಗಿ ನಮ್ಮ ಧರ್ಮ, ಸಂಸ್ಕೃತಿ ಜೊತೆಗೆ ಜೀವನದ ಪದ್ಧತಿಯೂ ಬದಲಾಗತೊಡಗಿದೆ. ಅದರ ಪ್ರಭಾವ ಹಳ್ಳಿಗಳಲ್ಲಿ ಕಡಿಮೆ ಇದೆ. ಗ್ರಾಮೀಣ ಜನರಿಂದಲೇ ಇವೆಲ್ಲ ಉಳಿಯುತ್ತಿವೆ. ಆದ್ದರಿಂದ ಎಲ್ಲರೂ ತಮ್ಮ ಮಕ್ಕಳಿಗೆ ಈಗಿನಿಂದಲೇ ಸಂಸ್ಕಾರ ಹೇಳಿ ಕೊಡಬೇಕಿದೆ ಎಂದ ಅವರು, ಕಾರ್ಯಕ್ರಮದ ರೂಪು ರೇಷೆಗಳನ್ನು ತಿಳಿಸಿದರು. ಅಲ್ಲದೇ, ಎಲ್ಲರೂ ಈ ದೈವ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಜನರಲ್ಲಿ ಮನವಿ ಮಾಡಿದರು.

ಮನೆ ಹಬ್ಬದಂತೆ ಆಚರಿಸಿ: ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಮಾತನಾಡಿ, ಜೂ.8, 9ರಂದು ಗುರುವಾರ ಶೃಂಗೇರಿ ಮಠದ ಜಗದ್ಗುರುಗಳಿಂದ ಶಾಂತಾನಂದ ಭಾರತೀ ಸ್ವಾಮಿಗಳಿಗೆ ಆವಣಿ ಶೃಂಗೇರಿ ಮಠದ ಸ್ವಾಮೀಜಿಯಾಗಿ ಪೀಠಾರೋಹಣ ಮತ್ತು ಪಟ್ಟಾಭಿಷೇಕ ನಡೆಯಲಿದೆ. ಗ್ರಾಮಸ್ಥರೆಲ್ಲರೂ ಪಾಲ್ಗೊಂಡು ತಮ್ಮ ಮನೆ ಹಬ್ಬದಂತೆ ಆಚರಿಸಬೇಕೆಂದು ಮನವಿ ಮಾಡಿದರು. ನಂತರ ಕಾರ್ಯಕ್ರಮದ ರೂಪುರೇಷೆಗಳು, ಸಿದ್ಧತೆ, ಪ್ರಚಾರ ಸೇರಿ ಇನ್ನಿತರ ವಿಷಯಗಳ ಕುರಿತು ಚರ್ಚೆ ನಡೆಸಿ, ನಿರ್ಣಯ ಕೈಗೊಂಡು ಕಾರ್ಯಕ್ರಮ ಅದ್ಧೂರಿಯಾಗಿ ಮಾಡಲು ತಿಳಿಸಿದರು.

Advertisement

ವಿಶೇಷ ಅಧಿಕಾರಿ ಪ್ರಸನ್ನ, ಜಿಪಂ ಮಾಜಿ ಸದಸ್ಯ ಕೃಷ್ಣಪ್ಪ, ಪಿಡಿಒ ನಾರಾಯಣಸ್ವಾಮಿ, ಸದಸ್ಯರಾದ ಲಕ್ಷ್ಮೀಪ್ರಿಯ, ಆವಣಿ ಶೃಂಗೇರಿ ಮಠದ ಸಮಿತಿ ಸದಸ್ಯರಾದ ಮಲ್ಲನಾಯಕನಹಳ್ಳಿ ಶ್ರೀನಿವಾಸ, ಹೊಳಲಿ ಪ್ರಕಾಶ್‌, ಶಿಳ್ಳೆಂಗೆರೆ ಮಹೇಶ್‌, ಗ್ರಾಮದ ಮುಖಂಡರು, ಹಿಂದೂಪರ ಸಂಘಟನೆಗಳ ಮುಖಂಡರು ಸಭೆಯಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next