Advertisement

ಜೇನು ಕುರುಬರ ಸ್ಥಿತಿ ಅರಿಯಲು ಸಮೀಕ್ಷೆ

01:15 PM Sep 22, 2018 | |

ಬೆಂಗಳೂರು: ಮೂಲ ಆದಿವಾಸಿಗಳಾದ ಜೇನು ಕುರುಬ, ಕೊರಗ ಸಮುದಾಯವನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಅವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಕುರಿತ ಸಮೀಕ್ಷೆಯೊಂದು ಸದ್ದಿಲ್ಲದೆ ನಡೆಯುತ್ತಿದೆ. 

Advertisement

ಮೂಲ ಆದಿವಾಸಿಗಳ ಅಧ್ಯಯನ ಕೇಂದ್ರದಿಂದ ಜೇನು ಕುರುಬ ಹಾಗೂ ಕೊರಗ ಬುಡಕಟ್ಟು ಜನಾಂಗದ ಆರೋಗ್ಯ, ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಅರಿಯಲು ಸಮೀಕ್ಷೆ ನಡೆಸುತ್ತಿದ್ದು, ಕಳೆದ ಆರು ತಿಂಗಳಿನಿಂದ ಈ ಕಾರ್ಯ ನಡೆಯುತ್ತಿದೆ. ಮುಂದಿನ ಆರು ತಿಂಗಳ ವೇಳೆಗೆ ಪೂರ್ಣಗೊಂಡು ವರದಿ ಸಿದ್ಧವಾಗಲಿದೆ.

ಜೇನು ಕುರುಬ ಮತ್ತು ಕೊರಗ ಜನಾಂಗವನ್ನು ರಾಜ್ಯದಲ್ಲಿ ಮೂಲ ಆದಿವಾಸಿಗಳೆದು ಗುರುತಿಸಲಾಗಿದೆ. ಆದರೆ, ಅವರ ಜನಸಂಖ್ಯೆ ಮತ್ತು ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿ ಕುರಿತು ಬಗ್ಗೆ ನಿಖರ ಮಾಹಿತಿ ಇಲ್ಲ.  ಈ ಹಿನ್ನೆಲೆಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಸಮೀಕ್ಷೆ ನಡೆಸಿ ಅವರ ಜನಸಂಖ್ಯೆ ಸೇರಿದಂತೆ ಸಮಗ್ರ ಮಾಹಿತಿ ತಿಳಿದುಕೊಳ್ಳಲು ಆರು ತಿಂಗಳ ಹಿಂದೆ ಸಮೀಕ್ಷೆ ಆರಂಭವಾಗಿದೆ. ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಈ ಕೆಲಸದಲ್ಲಿ ತೊಡಗಿದೆ.

ಈಗಾಗಲೇ 10 ಸಾವಿರ ಜೇನುಕುರುಬ ಕುಟುಂಬಗಳು ಸಮೀಕ್ಷೆಗೆ ಒಳಪಟ್ಟಿವೆ. ಇನ್ನೂ 4-5 ಸಾವಿರ ಕುಟುಂಬಗಳ ಸಮೀಕ್ಷೆ ನಡೆಸಬೇಕಿದೆ. ಅದೇ ರೀತಿ ಕೊರಗ ಸಮುದಾಯದ 4 ಸಾವಿರ ಕುಟುಂಬಗಳ ಸಮೀಕ್ಷೆ ಆಗಿದ್ದು, ಇನ್ನೂ ಒಂದೆರಡು ಸಾವಿರ ಕುಟುಂಬಗಳಲ್ಲಿ ಸಮೀಕ್ಷೆ ನಡೆಸಬೇಕಿದೆ. ಜೇನು ಕುರುಬ ಹಾಗೂ ಕೊರಗ ಸಮುದಾಯದಲ್ಲಿ ಅನಾರೋಗ್ಯ, ಅಪೌಷ್ಠಿಕತೆ, ದುಶ್ಚಟ್ಟಗಳ ಜತೆಗೆ ಅಕಾಲ ಮರಣದ ಸಂಖ್ಯೆಯೂ ಏರುತ್ತಿರುವ ಬಗ್ಗೆಯೂ ಸಮೀಕ್ಷೆಯಲ್ಲಿ ಅಧ್ಯಯನ ನಡೆಸಲಾಗಿದೆ. 

ಕೊರಗ ಬುಡಕಟ್ಟು ಜನಾಂಗಕ್ಕೆ ಸಂಬಂಧಿಸಿದಂತೆ ಕಳೆದ 15 ದಿನಗಳ ಹಿಂದೆ ಮಂಗಳೂರು ಮತ್ತು ಉಡುಪಿಯಲ್ಲಿ ಪೌಷ್ಠಿಕತೆ ಹಾಗೂ ರಕ್ತಹೀನತೆ ಬಗ್ಗೆ ದಾಖಲಾತಿಗಳನ್ನು ಸಂಗ್ರಹಿಸುವ ಪ್ರಾಯೋಗಿಕ ಯೋಜನೆ ಪೂರ್ಣಗೊಂಡಿದೆ. 

Advertisement

ರಾಜ್ಯದ ಕೊಡಗು, ಮೈಸೂರಿನ ಎಚ್‌.ಡಿ ಕೋಟೆ, ಪಿರಿಯಾಪಟ್ಟಣ, ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಜೇನು ಕುರುಬರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅದೇ ರೀತಿ ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗದಲ್ಲಿ ಕೊರಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇವರೆಲ್ಲರ ಮಾಹಿತಿಯನ್ನೂ ಪಡೆಯಲಾಗುತ್ತಿದೆ.

2011ರ ಸಮೀಕ್ಷೆ ಅಂಕಿ-ಸಂಖ್ಯೆ: 2011ರ ಜನಸಂಖ್ಯಾ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಒಟ್ಟು 8,767 ಜೇನುಕುರುಬ ಕುಟುಂಬಗಳಿದ್ದು, ಜನಸಂಖ್ಯೆ 36,076 ಇದೆ. ಸಮುದಾಯದಲ್ಲಿ 17,948 ಪುರುಷರು ಹಾಗೂ 18,128 ಮಹಿಳೆಯರು ಇದ್ದಾರೆ. ಅದೇರೀತಿ ಕೊರಗ ಬುಡಕಟ್ಟಿಗೆ ಸೇರಿದ 3,436 ಕುಟುಂಬಗಳಲ್ಲಿ ಒಟ್ಟು 14,794 ಜನರಿದ್ದು, ಇದರಲ್ಲಿ 7,210 ಪುರುಷರು ಹಾಗೂ 7,584 ಮಹಿಳೆಯರು. ಆದರೆ, ಪ್ರಸ್ತುತ ನಡೆಯುತ್ತಿರುವ ಸಮೀಕ್ಷೆಯಲ್ಲಿ ಇವರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next