ಯಳಂದೂರು: ಪಟ್ಟಣದಲ್ಲಿರುವ ಐತಿಹಾಸಿಕ ಬಳೇಮಂಟಪ, ಗೌರೇಶ್ವರ ದೇಗುಲ ಹಾಗೂ ದಿವಾನ್ ಪೂರ್ಣಯ್ಯ ವಸ್ತು ಸಂಗ್ರಹಾಲಯಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಶುಕ್ರವಾರ ಭೇಟಿ ನೀಡಿ ಇದರ ಸುತ್ತಲೂ ಇರುವ ಸ್ಥಳವನ್ನು ಸರ್ವೆ ನಡೆಸಿ, ವರದಿ ನೀಡಬೇಕು ಎಂದು ತಹಶೀಲ್ದಾರ್‌ಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪ್ರಾಚ್ಯ ಇಲಾಖೆಯ ವ್ಯಾಪ್ತಿಯಲ್ಲಿರುವ ದಿವಾನ್ ಪೂರ್ಣಯ್ಯ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿ, ಇಲ್ಲಿ ಸಂಗ್ರಹಿಸಿರುವ ವಸ್ತುಗಳನ್ನು ವೀಕ್ಷಿಸಿ ಮಾಹಿತಿ ಪಡೆದರು. ಇದರ ಮುಂಭಾಗ ದಲ್ಲಿರುವ ಖಾಲಿ ಸ್ಥಳವು ನ್ಯಾಯಾಲಯದಲ್ಲಿದೆ. ಪಕ್ಕದಲ್ಲಿರುವ ಖಾಲಿ ನಿವೇಶನದ ತೀರ್ಪು ಸರ್ಕಾರದ ಪರವಾಗಿದೆ ಎಂದು ಪ್ರಾಚ್ಯ ಇಲಾಖೆಯ ಸುನೀಲ್ ಕುಮಾರ್ ಮಾಹಿತಿ ನೀಡಿದರು.
ನಂತರ ಪಕ್ಕದಲ್ಲಿರುವ ಗೌರೇಶ್ವರ ದೇಗುಲ ಹಾಗೂ ಬಳೇಮಂಪಟವನ್ನು ವೀಕ್ಷಿಸಿ ಮಾಹಿತಿ ಪಡೆದರು. ಇಲ್ಲಿನ ಅರ್ಚಕ ಮಹೇಶ್ ಚಂದ್ರಮೌಳಿ ದೀಕ್ಷೀತ್, ಇದರ ಮುಂಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ 209 ಎತ್ತರಿಸಿದ ಬಳಿಕೆ ದೇಗುಲ ಕೆಳಕ್ಕೆ ಇದೆ. ಇದನ್ನು ವೀಕ್ಷಿಸಲು ಬರುವ ವೃದ್ಧರು ಹಾಗೂ ಮಹಿಳೆಯರು, ಮಕ್ಕಳು ಕಷ್ಟ ಪಡುವ ಸ್ಥಿತಿ ಇದೆ. ಹೀಗಾಗಿ ಇದಕ್ಕೆ ಮೆಟ್ಟಿಲುಗಳನ್ನು ನಿರ್ಮಿಸಿಕೊಡಬೇಕೆಂದು ಕೋರಿದರು.
ಕೂಡಲೇ ನಗರೋತ್ಥಾನ ಇಲಾಖೆಯ ಯೋಜನಾ ನಿರ್ದೇಶಕ ಸುರೇಶ್ ಅವರಿಗೆ ಈ ಬಗ್ಗೆ ಪಪಂ ಎಂಜಿನಿಯರ್ ಬಳಿ ಚರ್ಚಿಸಿ ಇದಕ್ಕೆ ಮೆಟ್ಟಿಲು ನಿರ್ಮಿಸಲು ಕೂಡಲೇ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಪಟ್ಟಣದ ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ 209ರ ನಡುವೆ ಇರುವ ಖಾಸಗಿವ್ಯಕ್ತಿಯೊಬ್ಬರ ಕಟ್ಟಡವನ್ನು ತೆರವುಗೊಳಿಸಿಲ್ಲ. ಇದರ ಬಗ್ಗೆ ನ್ಯಾಯಾಲಯವೂ ಆದೇಶಿಸಿದ್ದರೂ ಕ್ರಮವಹಿಸಿಲ್ಲ. ಇದರಿಂದ ಈ ಭಾಗದಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದ್ದು ಕೂಡಲೇ ಈ ಬಗ್ಗೆ ಕ್ರಮವಹಿಸಬೇಕು ಎಂದು ಮೀರೆಸಿದ್ದರಾಜು ಸೇರಿದಂತೆ ಕೆಲವು ಮನವಿ ಮಾಡಿದರು. ಈ ಬಗ್ಗೆ ಪರಿಶೀಲಿಸಿಕ್ರಮ ವಹಿಸುವ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿದರು.
ಈ ವೇಳೆ ತಹಶೀಲ್ದಾರ್ ಆನಂದಪ್ಪ ನಾಯಕ್, ಪಪಂ ರಾಜಸ್ವ ನಿರೀಕ್ಷಕ ನಂಜುಂಡಶೆಟ್ಟಿ,ಆರೋಗ್ಯಾಧಿಕಾರಿ ಮಹೇಶ್‌ಕುಮಾರ್,ಪರಶಿವಮೂರ್ತಿ, ಮಲ್ಲಿಕಾರ್ಜುನ, ಮುಖಂಡರಾದ ನಿಂಗರಾಜು ಸೇರಿಂದತೆ ಮತ್ತಿತರರು ಹಾಜರಿದ್ದರು.