Advertisement

ಜೂನ್‌ ಅಂತ್ಯದೊಳಗೆ ಕೆರೆಗಳ ವಿಸ್ತೀರ್ಣ ಸರ್ವೆ ಮಾಡಿ ತಂತಿಬೇಲಿ ಹಾಕಿ

12:47 PM May 27, 2017 | Team Udayavani |

ಬೆಂಗಳೂರು: ಜೂನ್‌ ಅಂತ್ಯದೊಳಗಾಗಿ ಮಹದೇವಪುರ ವಲಯದ ನೆಲ್ಲೂರಹಳ್ಳಿ, ಸಿದ್ದಾಪುರ ಹಾಗೂ ಶೀಲವಂತ ಕೆರೆಗಳ ಸರ್ವೆ ನಡೆಸಿ ತಂತಿಬೇಲಿ ಆಳವಡಿಸುವಂತೆ ಅಧಿಕಾರಿಗಳಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಆದೇಶಿಸಿದ್ದಾರೆ. 

Advertisement

ಶುಕ್ರವಾರ ವೈಟ್‌ಫೀಲ್ಡ್‌ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲಿಸಿದ ನಂತರ ಸ್ಥಳೀಯರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಮೂರು ಕೆರೆಗಳು ಸಂಪೂರ್ಣವಾಗಿ ಕಲುಷಿತಗೊಂಡಿದ್ದು, ಹೆಚ್ಚಿನ ಪ್ರಮಾಣದ ತ್ಯಾಜ್ಯ ಸುರಿಯಲಾಗುತ್ತಿದೆ ಎಂದು ಆರೋಪಿಸಿದರು. 

ಇದಕ್ಕೆ ಸ್ಪಂದಿಸಿದ ಜಾರ್ಜ್‌ ಅವರು, ಮೂರು ಕೆರೆ ಪ್ರದೇಶಗಳಲ್ಲಿ ತ್ಯಾಜ್ಯ ಸುರಿಯುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜತೆಗೆ ಜೂನ್‌ ವೇಳೆಗೆ ಕೆರೆಯ ಅಳತೆಯನ್ನು ಸರ್ವೆ ನಡೆಸಿ ತಂತಿಬೇಲಿ ಅಳವಡಿಕೆಗೆ ಮುಂದಾಗಬೇಕು ಎಂದರು. 

ವಿಬ್‌ಗಯಾರ್‌ ರಸ್ತೆ ಮತ್ತು ನಾರಾಯಣಪುರ ರಸ್ತೆಗಳ ವಿಸ್ತರಣೆಯ ಕುರಿತು ಪಾಲಿಕೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ರಸ್ತೆ ವಿಸ್ತರಣೆಗೆ ಹೆಚ್ಚುವರಿ ಜಾಗದ ಅಗತ್ಯವಿದ್ದು, ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದೆ ಎಂದ ಅವರು, ಪಾಲಿಕೆಯ ವಿಶೇಷ ಆಯುಕ್ತರಿಗೆ, ಟಿ.ಡಿ.ಆರ್‌ಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿ ಜೂನ್‌ ಅಂತ್ಯದೊಳಗೆ ಕಾಮಗಾರಿ ಪ್ರಾರಂಭಿಸುವಂತೆ ಆದೇಶಿಸಿದರು. 

ಪಾಲಿಕೆಯಿಂದ ಹೋಪ್‌ ಫಾರ್ಮ್ ಬಳಿ ಸಿಗ್ನಲ್‌ ಫ್ರೀ ಕಾರಿಡಾರ್‌ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ವಿಳಂವಾಗುವ ಬಗ್ಗೆ ಸ್ಥಳೀಯರ ಪ್ರಶ್ನೆಗೆ ಉತ್ತರಿಸಿದ ಜಾರ್ಜ್‌, ಉಂಟಾಗಿರುವ ಸಮಸ್ಯೆಗಳನ್ನು ಅತ್ಯಂತ ಶೀಘ್ರವಾಗಿ ಬಗೆಹರಿಸಿ ಏಕಕಾಲದಲ್ಲಿ ಹೂಡಿ, ಕುಂದಲಹಳ್ಳಿ ಹಾಗೂ ಹೋಪ್‌ ಫಾರ್ಮ್ ಸ್ಥಳಗಳಲ್ಲಿ ಕಾಮಗಾರಿ ಆರಂಭಿಸಬೇಕು ಎಂದು ಆದೇಶಿಸಿದರು. 

Advertisement

ಪಾಲಿಕೆಯಿಂದ ಹೊಸದಾಗಿ ಚಾಲನೆ ನೀಡಿರುವ ಸ್ವಯಂ ಚಾಲಿತ ರಸ್ತೆ ಗುಡಿಯುವ ಯಂತ್ರಗಳಲ್ಲಿ ಒಂದು ಯಂತ್ರವನ್ನು ಮಹದೇವಪುರ ಭಾಗದಲ್ಲಿನ ಸ್ವತ್ಛತಾ ಕಾರ್ಯಕ್ಕೆ ನಿಯೋಜನೆ ಮಾಡಬೇಕು ಎಂದು ಮನವಿ ಮಾಡಿದರು. ಅದಕ್ಕೆ ಸ್ಪಂದಿಸಿದ ಸಚಿವರು, ಕೆಲವೇ ದಿನಗಳಲ್ಲಿ ಯಂತ್ರ ಕಾರ್ಯಾರಂಭ ಮಾಡಲಿದ್ದು, ವಾಹನ ನಿಲುಗಡೆ ಸ್ಥಳ ನಿಯೋಜನೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 

ಇದೇ ವೇಳೆ ಮಾತನಾಡಿದ ಅವರು, ಸಂವಾದ ಸಭೆಯಲ್ಲಿ ಕೈಗೊಂಡಿರುವ ನಿರ್ಣಯಗಳು ಹಾಗೂ ಅಧಿಕಾರಿಗಳಿಗೆ ನೀಡಲಾಗಿರುವ ಆದೇಶಗಳ ಕುರಿತು 45 ದಿನಗಳ ನಂತರ ಮತ್ತೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.  ಸಂವಾದದಲ್ಲಿ ವಿಧಾನ ಪರಿಷತ್‌ ಸದಸ್ಯ ರಿಜ್ವಾನ್‌ ಆರ್ಷದ್‌, ಪಾಲಿಕೆ ವಿಶೇಷ ಆಯುಕ್ತ (ಹಣಕಾಸು) ಮನೋಜ್‌ ಕುಮಾರ್‌ ಸೇರಿದಂತೆ ಪ್ರಮುಖರು ಹಾಜರಿದ್ದರು. 

ಬೆಳ್ಳಂದೂರು ಬಳಿ ನಿರ್ಮಾಣವಾಗುತ್ತಿರುವ ತ್ಯಾಜ್ಯ ನೀರು ಶುದ್ದೀಕರಣ ಘಟಕ ಜುಲೈನಿಂದಲೇ ಕಾರ್ಯಾರಂಭವಾಗಲಿದ್ದು, ಕೆರೆಯಲ್ಲಿನ ಜೊಂಡು ತೆರವುಗೊಳಿಸುವ ಕಾರ್ಯಾಚರಣೆ ವೇಗ ಪಡೆದುಕೊಂಡಿದೆ. ಬೆಳ್ಳಂದೂರು ಕೆರೆ ಸ್ವತ್ಛಗೊಳಿಸುವ ಕಾರ್ಯ ಮುಗಿದ ನಂತರ ವರ್ತೂರು ಕೆರೆಯನ್ನು ಸ್ವತ್ಛಗೊಳಿಸಲಾಗುವುದು. 
-ರಾಕೇಶ್‌ ಸಿಂಗ್‌, ಬಿಡಿಎ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next