ವಿಜಯಪುರ: ನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ಗರ್ಭಿಣಿಯರಿಗೆ ಮಾಡಿರುವ ಶಸ್ತ್ರಚಿಕಿತ್ಸೆ ಲೋಪದಿಂದಾಗಿ ಇದೀಗ ಸುಮಾರು 30ಕ್ಕೂ ಹೆಚ್ಚು ಬಾಣಂತಿಯರು ಪರದಾಡುವಂತಾಗಿದೆ. ಶಸ್ತ್ರಚಿಕಿತ್ಸೆ ಮಾಡಿದ ಹೊಲಿಗೆ ಬಿಚ್ಚಿ ಕೀವು ತುಂಬಿಕೊಂಡಿರುವ ಕಾರಣ ಬಡ ಬಾಣಂತಿಯರು ಅಸ್ಪತ್ರೆಯಲ್ಲಿ ನರಳುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ತನ್ನ ಸೇವೆಗಾಗಿ ಹಲವು ಬಾರಿ ಕೇಂದ್ರ-ರಾಜ್ಯ ಸರ್ಕಾರದಿಂದ ಕಾಯಕಲ್ಪ ಪ್ರಶಸ್ತಿ ಪಡೆದಿರುವ ವಿಜಯಪುರ ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ಸೇವೆ ಇದೀಗ ಟೀಕೆಗೆ ಗುರಿಯಾಗಿದೆ. ಕರ್ತವ್ಯ ಲೋಪ ಎಸಗಿರುವ ವೈದ್ಯ-ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಗಂಭೀರ ಸಮಸ್ಯೆಯನ್ನು ಹಗುರವಾಗಿ ಪರಿಗಣಿಸುತ್ತಿರುವ ಮೇಲಾಧಿಕಾರಿಗಳು ರೋಗಿಗಳಿಂದಲೇ ಲೋಪವಾಗಿದೆ ಎಂದು ಬೆರಳು ಮಾಡುತ್ತಿದ್ದಾರೆ. ಆ ಮೂಲಕ ಬಾಣಂತಿಯರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಮೂಲಕ ಪ್ರಕರಣಲ್ಲಿ ಕರ್ತವ್ಯ ಲೋಪ ಎಸಗಿದವರ ರಕ್ಷಣೆಗೆ ನಿಲ್ಲುವ ಹುನ್ನಾರ ನಡೆಸಿದ್ದಾರೆ ಎಂಬ ದೂರು ಕೇಳಿ ಬಂದಿದೆ.
ಕಳೆದ ಕೆಲವು ದಿನಗಳಿಂದ ವಿಜಯಪುರ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಬಡತನ ಕೌಟುಂಬಿಕ ಹಿನ್ನೆಲೆ ಇರುವ ಸುಮಾರು ನೂರಕ್ಕೂ ಹೆಚ್ಚು ಗರ್ಭಿಣಿಯರು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದರಲ್ಲಿ ಬಹುತೇಕ ಗರ್ಭಿಣಿಯರಿಗೆ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಲಾಗಿದೆ. ಆದರೆ ಶಸ್ತ್ರ ಚಿಕಿತ್ಸೆ ಮಾಡಿಕೊಂಡಿರುವ ಬಹುತೇಕ ಬಾಣಂತಿಯರ ಹೊಲಿಗೆ ಬಿಚ್ಚಿ, ಕೀವು ತುಂಬಿಕೊಂಡು ಅಪಾಯದ ಸ್ಥಿತಿಯಲ್ಲಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ:ಆರ್ಥಿಕ ಬಿಕ್ಕಟ್ಟು:ಅಡುಗೆ ಅನಿಲವೂ ಇಲ್ಲ,ತಿನ್ನಲಿಕ್ಕೂ ಏನಿಲ್ಲ:ಲಂಕಾದಲ್ಲಿ ಮತ್ತೆ ಪ್ರತಿಭಟನೆ
ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಣಂತಿಯರ ಪ್ರಕಾರ ತಮಗೆ ಶಸ್ತ್ರ ಚಿಕಿತ್ಸೆ ಮಾಡಿದ್ದು, ಆಸ್ಪತ್ರೆಯ ಕರ್ತವ್ಯದಲ್ಲಿದ್ದ ನುರಿತ ವೈದ್ಯರಲ್ಲ. ಬದಲಾಗಿ ಕರ್ತವ್ಯದಲ್ಲಿದ್ದ ವೈದ್ಯರು ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಂದ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ. ಇದೇ ತಮ್ಮ ಸಮಸ್ಯೆಗೆ ಕಾರಣ ಎಂದು ದೂರುತ್ತಾರೆ.
ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುವ ಬಹುತೇಕ ಮಹಿಳೆಯರಲ್ಲಿ ಹೊಲಿಗೆ ಬಿಚ್ಚಿರುವ, ಆಪರೇಶನ್ ಮಾಡಿದ ದೇಹದ ಭಾಗದಲ್ಲಿ ಕೀವು ತುಂಬಿಕೊಂಡು ಗಾಯಗಳಾಗಿವೆ. ಇದರಿಂದಾಗಿ ಬಹುತೇಕ ಬಾಣಂತಿಯರಿಗೆ ಇದೀಗ ಮರು ಹೊಲಿಗೆ ಹಾಕುವ ದುಸ್ಥಿತಿ ನಿರ್ಮಾಣವಾಗಿದೆ.
ಇದರಲ್ಲಿ ಹಲವರು ಆಸ್ಪತ್ರೆಯಿಂದ ಬಿಡುಗಡೆಯಾಗಿ ಸಮಸ್ಯೆ ಕಾಣಿಸಿಕೊಂಡ ಬಳಿಕ ಮತ್ತೆ ಆಸ್ಪತ್ರೆಗೆ ಮರಳಿದ್ದು, ಮತ್ತೆ ಕೆಲವರು ಆಸ್ಪತ್ರೆಯಿಂದ ಬಿಡುಗಡೆ ಹಂತದಲ್ಲೇ ಹೊಲಿಗೆ ಸಮಸ್ಯೆ ಕಾಣಿಸಿಕೊಂಡಿದೆ. ಮತ್ತೆ ಕೆಲವು ಬಾಣಂತಿಯರು ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷಿಂದ ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ಆರ್ಥಿಕ ಸಂಕಷ್ಟದ ಮಧ್ಯೆಯೂ ಖಾಸಗಿ ಆಸ್ಪತ್ರೆ ಮೊರೆ ಹೋಗಿದ್ದಾರೆ.
ಶಸ್ತ್ರ ಚಿಕಿತ್ಸೆಯ ಬಳಿಕ ಬಾಣಂತಿಯರು ಸಮಸ್ಯೆ ನಿವೇದಿಸಿಕೊಂಡರೂ ವೈದ್ಯರು-ಸಿಬ್ಬಂದಿ ಬೇಜವಾಬ್ದಾರಿ ಹಾಗೂ ಹಾರಿಕೆ ಉತ್ತರ ನೀಡಿದ್ದಾರೆ. ಅಲ್ಲದೇ ಸ್ಪಂದಿಸುವ ಬದಲು ನೀವೇನು ವೈದ್ಯರೇ ಎಂದು ಗದರುವ ಮೂಲಕ ತಮ್ಮಿಂದಾದ ಲೋಪವನ್ನು ಗಟ್ಟಿಧ್ವನಿ ಮಾಡಿ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ.
ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಬಾಣಂತಿಯರ ಪ್ರಕಾರ ವೈದ್ಯರ ವೈಫಲ್ಯದ ಕಾರಣಕ್ಕೆ ನರಳುತ್ತಿರುವ ಬಾಣಂತಿಯರ ಸಂಖ್ಯೆ 30-40. ಆದರೆ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ವೈದ್ಯರ ಪ್ರಕಾರ 11 ಪ್ರಕರಣದಲ್ಲಿ ಮಾತ್ರ ಸಮಸ್ಯೆ ಕಾಣಿಸಿಕೊಂಡಿದೆ.
ಇಷ್ಟಕ್ಕೂ ಈ ಸಮಸ್ಯೆಗೆ ಬಾಣಂತಿಯರು ಹಾಗೂ ಅವರ ಸಹಾಯಕರ ಲೋಪವೇ ಪ್ರಮುಖ ಕಾರಣ. ಶಸ್ತ್ರ ಚಿಕಿತ್ಸೆಗೆ ಒಳಗಾದ ರೋಗಿಗಳಿರುವ ವಾರ್ಡ್‍ಗಳಲ್ಲಿ ಅಸುರಕ್ಷಿತ ರೀತಿಯಲ್ಲಿ ಓಡಾಡಿದ್ದರಿಂದ ಶಸ್ತ್ರ ಚಿಕಿತ್ಸಾ ಘಟಕದಲ್ಲಿ ಸೋಂಕು ಕಾಣಿಸಿಕೊಂಡು, ಸಮಸ್ಯೆಗೆ ಕಾರಣವಾಗಿದೆ. 11 ಪ್ರಕರಣದಲ್ಲಿ ಮಾತ್ರ ಹೀಗಾಗಿದೆ ಎಂದು ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ಎಸ್.ಎಂ.ಲಕ್ಕಣವಣವರ ಸಮಜಾಯಿಶಿ ನೀಡುತ್ತಾರೆ.
ಇದನ್ನೂ ಓದಿ:ಬಿಎಸ್ವೈ ಪುತ್ರ ವಿಜಯೇಂದ್ರ ಪರಿಷತ್ ಪ್ರವೇಶ ಪಕ್ಕಾ; ಕೋರ್ ಕಮಿಟಿ ಸಭೆಯಲ್ಲಿ ಮಹತ್ವದ ತೀರ್ಮಾನ
ಹೆರಿಗೆಗಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಬಾಣಂತಿಯರಲ್ಲಿ ಸಮಸ್ಯೆ ಕಾಣಿಕೊಂಡ ಕೂಡಲೇ ಮೇ 3 ರಂದು ತುರ್ತಾಗಿ ಸಂದಬಂಧಿಸಿದ ವೈದ್ಯರ ಹಾಗೂ ಸಿಬ್ಬಂದಿ ಸಭೆ ಕರೆದು ಮಾಹಿತಿ ಪಡೆಯಲಾಗಿದೆ. ಸೋಂಕು ಕಾಣಿಸಿಕೊಂಡಿರುವ ಶಸ್ತ್ರ ಚಿಕಿತ್ಸಾ ಘಟಕವನ್ನು ಸೋಂಕು ನಿವಾರಣೆಗೆ ಕ್ರಮ ಕೈಗೊಂಡರೂ, ಘಟಕವನ್ನು ಸ್ಥಗಿತಗೊಳಿಸಿದ್ದೇವೆ. ಪರ್ಯಾಯ ಘಟಕದಲ್ಲಿ ಇದೀಗ ಶಸ್ತ್ರ ಚಿಕಿತ್ಸೆ ನಡೆಯುತ್ತಿದೆ ಎಂದು ವಿವರಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು-ಸಿಬ್ಬಂದಿಯಿಂದ ಲೋಪವಾಗಿದ್ದರೂ ಆಸ್ಪತ್ರೆಯ ಮುಖ್ಯಸ್ಥರು ರೋಗಿಗಳಿಂದಲೇ ಲೋಪವಾಗಿದೆ, ವೈದ್ಯರ ಸಭೆ ಮಾಡಿದ್ದೇವೆ, ಮರು ಚಿಕಿತ್ಸೆ ನೀಡುತ್ತಿದ್ದೇವೆ ಎಂಬ ಸಬೂಬು ಹೇಳುತ್ತಿದ್ದಾರೆ.
ಆದರೆ ಇಡೀ ಪ್ರಕರಣದಲ್ಲಿ ಕರ್ತವ್ಯ ಲೋಪ ಆಗಿರುವ ಬಗ್ಗೆ ಚಕಾರ ಎತ್ತುತ್ತಿಲ್ಲ. ಅಲ್ಲದೇ ಯಾರೊಬ್ಬರ ವಿರುದ್ಧವೂ ಕ್ರಮ ಕೈಗೊಂಡ ಮಾತನಾಡುತ್ತಿಲ್ಲ. ಬದಲಾಗಿ ಬಡವರ ಜೀವದೊಂದೊಂದಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಚೆಲ್ಲಾಟವಾಡುತ್ತಿದ್ದಾರೆ ಎಂದು ಶಸ್ತ್ರ ಚಿಕಿತ್ಸೆಯಿಂದ ಸಮಸ್ಯೆ ಎದುರಿಸುತ್ತಿರುವ ಬಾಣಂತಿಯರು ಹಾಗೂ ಅವರ ಕುಟುಂಬ ಸದಸ್ಯರ ಅಳಲು. ಸರ್ಕಾರ ಕೂಡಲೇ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತಾರೆ.