ಚಿಕ್ಕಬಳ್ಳಾಪುರ: ಇತ್ತೀಚೆಗೆ ಆಲಿಕಲ್ಲು ಸಮೇತ ಬಿದ್ದ ಬಿರುಗಾಳಿ ಮಳೆಗೆ ಅಪಾರ ಪ್ರಮಾಣದ ದ್ರಾಕ್ಷಿ ನೆಲಕಚ್ಚಿದ್ದರ ಜೊತೆಗೆ ಲಾಕ್‌ಡೌನ್ ಪರಿಣಾಮ ಮಾರುಕಟ್ಟೆ ಇಲ್ಲದೇ ಬೆಲೆ ಕುಸಿತದಿಂದ ಕಂಗಾಲಾಗಿದ್ದ ಜಿಲ್ಲೆಯ ದ್ರಾಕ್ಷಿ ಬೆಳೆಗಾರರಿಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಕೈ ಹಿಡಿದಿದ್ದು, ತಾಲೂಕಿನ ಹರಿಸ್ಥಳದ ರೈತರಿಂದ ಟನ್‌ಗಟ್ಟಲೇ ದ್ರಾಕ್ಷಿ ಖರೀದಿ ಮಾಡಿದರು. ಕೊರೊನಾ ಹರಡುವುದನ್ನು ತಪ್ಪಿಸಲು ಲಾಕ್‌ಡೌನ್ ಜಾರಿಯಲ್ಲಿದ್ದು, ತಾಲೂಕಿನ ದ್ರಾಕ್ಷಿ ಬೆಳೆಗಾರರಿಗೆ ಮಾರುಕಟ್ಟೆ ಇಲ್ಲದೇ ಬೆಳೆದ ಅಪಾರ ಪ್ರಮಾಣದ ದ್ರಾಕ್ಷಿ ತಿಪ್ಪೆಗೆ ಸುರಿಯುವಂತಾಗಿದೆ. ಇದನ್ನರಿತ ಸಂಸದ ಸುರೇಶ್, ಹರಿಸ್ಥಳದ ಚೌಡರೆಡ್ಡಿ ಎಂಬುವರು 5 ಎಕರೆಯಲ್ಲಿ ಬೆಳೆದಿದ್ದ ಸುಮಾರು 40 ಟನ್ ದ್ರಾಕ್ಷಿಯನ್ನು ಖರೀದಿ ಮಾಡಿದರು.
ಸರ್ಕಾರದಲ್ಲಿ ಗೊಂದಲ: ಈ ವೇಳೆ ಮಾತನಾಡಿದ ಸಂಸದ ಸುರೇಶ್, ಕೋವಿಡ್ -19 ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅಧಿಕಾರಿ ಮಂತ್ರಿಗಳಲ್ಲೇ ಗೊಂದಲ ಇದೆ. ಸರ್ಕಾರಕ್ಕೆ ಅರ್ಜೆಂಟಾಗಿ ಖಜಾನೆಗೆ ದುಡ್ಡು ಬರಬೇಕಿದೆ. ಮದ್ಯ ಮಾರಾಟಕ್ಕೆ ಅವಕಾಶ ಕೊಡುವಂತೆ ಪ್ರಧಾನಿಗೆ ಸರ್ಕಾರವೇ ಪತ್ರ ಬರೆದಿದೆ. ಆದ್ರೆ ಪಿಎಂ ಎರಡು ಬಾರಿ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ ಎಂದರು.
ಸರ್ಕಾರ ರೈತರಿಗೆ, ಸಾರ್ವಜನಿಕರಿಗೆ ಆತ್ಮಸ್ಥೈರ್ಯ ಮೂಡಿಸಿಲ್ಲ. ಬೆಳೆಗಳನ್ನು ಸರ್ಕಾರವೇ ಖರೀದಿ ಮಾಡಿ ಗ್ರಾಹಕರಿಗೆ ಬಡವರಿಗೆ, ನಿರ್ಗತಿಕರಿಗೆ ಹಂಚಬಹುದಿತ್ತು. ಆದರೆ ಸರ್ಕಾರಕ್ಕೆ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ವಾಗ್ಧಾಳಿ ನಡೆಸಿದರು. ದ್ರಾಕ್ಷಿ, ಹೂವು, ಹಣ್ಣು, ತರಕಾರಿ ಬೆಳೆಯುವ ಬೆಳೆಗಾರರು ತೀವ್ರ ಸಂಕಷ್ಟದಲ್ಲಿರುವುದರಿಂದ ನಾವು ರೈತರ ತೋಟಗಳಿಗೆ ತೆರಳಿ ಖರೀದಿ ಮಾಡಿ ಜನರಿಗೆ ಉಚಿತವಾಗಿ ವಿತರಿಸುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಮುಖಂಡರಾದ ನಂದಿ ಅಂಜಿನಪ್ಪ, ಜರಾಮರೆಡ್ಡಿ, ಕೆ.ವಿ.ನವೀನ್ ಕುಮಾರ್, ಅಡ್ಡಗಲ್ ಶ್ರೀಧರ್, ಜಿಪಂ ಮಾಜಿ ಅಧ್ಯಕ್ಷ ಮುನೇಗೌಡ, ಕುಂದಲಗುರ್ಕಿ ಮುನೀಂದ್ರ, ಪಟ್ರೇನಹಳ್ಳಿ ಕೃಷ್ಣ ಸೇರಿದಂತೆ ಮತ್ತಿತರರು ಇದ್ದರು.
ಉಚಿತವಾಗಿ ಮಾಸ್ಕ್, ಸ್ಯಾನಿಟೈಸರ್ ಕೊಡಲು ಸಾಧ್ಯವಾಗಿಲ್ಲ. ಆದರೆ ಹೊರಗಡೆ ಬಂದ್ರೆ ದಂಡ ಹಾಕ್ತೀವಿ ಅಂತಾರೆ. ಜನ ಎಲ್ಲಿಂ ದ ದುಡ್ಡು ತರಬೇಕು ದಂಡ ಕಟ್ಟೋಕೆ. ಕೋವಿಡ್ 19 ವಿಚಾರದಲ್ಲಿ ಅಕ್ಕಿ ಕೊಟ್ಟಿದ್ದು ಬಿಟ್ಟರೆ ಸರ್ಕಾರ ಜನರಿಗೆ ಬೇರೇನೂ ಮಾಡಿಲ್ಲ .
ಡಿ.ಕೆ.ಸುರೇಶ್, ಸಂಸದರು