Advertisement

ವಿದ್ಯಾಗಮ ಕಾರ್ಯಕ್ರಮ ನಿಲ್ಲಿಸಲು ಆಗ್ರಹ: ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ

02:50 PM Oct 10, 2020 | keerthan |

ಬೆಂಗಳೂರು: ಕೋವಿಡ್ ಕಾಲದಲ್ಲಿ ಅನುಷ್ಠಾನಕ್ಕೆ ಬಂದ ವಿದ್ಯಾಗಮ ಯೋಜನೆಯ ಕಾರಣದಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನಲೆಯಲ್ಲಿ ವಿದ್ಯಾಗಮ ಕಾರ್ಯಕ್ರಮ ನಿಲ್ಲಿಸಲು ಆಗ್ರಹಗಳು ಕೇಳಿ ಬರುತ್ತಿದೆ. ಈ ಹಿನ್ನಲೆಯಲ್ಲಿ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

Advertisement

ವಿಶೇಷವಾಗಿ ಸಾಮಾಜಿಕ, ಆರ್ಥಿಕವಾಗಿ ದುರ್ಬಲರಾದ ಮಕ್ಕಳ ಶೈಕ್ಷಣಿಕ‌‌ ಅಗತ್ಯತೆಗಳನ್ನು ಪೂರೈಸುತ್ತಿರುವ ವಿದ್ಯಾಗಮ ಕಾರ್ಯಕ್ರಮವನ್ನು ನಿಲ್ಲಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ. ಇಂದು ಬಹುಪಾಲು ನಮ್ಮ ಸರ್ಕಾರಿ ಶಾಲೆಗಳಿಗೆ ಸೇರಿದ 47 ಲಕ್ಷ ಮಕ್ಕಳು ಈ ಕಾರ್ಯಕ್ರಮದ ಪ್ರಯೋಜನ ಪಡೆಯುತ್ತಿದ್ದಾರೆ. ಎಲ್ಲಿಯೂ ಕಾರ್ಯಕ್ರಮದ ಕಾರಣದಿಂದಲೇ ಸೋಂಕು ಹರಡಿದೆಯೆನ್ನುವುದು ಅಧಿಕೃತವಾಗಿ ದೃಢಪಟ್ಟಿಲ್ಲ ಎಂದಿದ್ದಾರೆ.

ವೈಜ್ಞಾನಿಕವಾಗಿ ರೂಪಿತವಾಗಿರುವ ಈ‌ ಕಾರ್ಯಕ್ರಮ ನಮ್ಮ ಸಮಾಜದ ದುರ್ಬಲ ಮಕ್ಕಳ‌ ಕಲಿಕೆಯನ್ನು ಮುಂದುವರೆಸಲು, ಶಿಕ್ಷಕ-ವಿದ್ಯಾರ್ಥಿಗಳ‌ ನಡುವಿನ ಸ್ನೇಹ ಸಂಬಂಧ ಗಟ್ಟಿಗೊಳ್ಳುವ ಮೂಲಕ ವಿದ್ಯಾರ್ಥಿಯ ಸಮಗ್ರ‌ ಬೆಳವಣಿಗೆಗೆ ಪೂರಕವಾಗಿದೆ. ಅಷ್ಟೇ ಅಲ್ಲ, ಅವರ ಮಾನಸಿಕ, ದೈಹಿಕ ಸ್ಥಿತಿಗತಿಗಳನ್ನು ಸುಸ್ಥಿತಿಯಲ್ಲಿಡಲು ಅದು ಪೂರಕವಾಗಿದೆ. ಇಡೀ ದೇಶದಲ್ಲಿಯೇ ವಿದ್ಯಾಗಮ ಮಾದರಿಯ ಉಪಕ್ರಮವಾಗಿ‌‌ ಗುರುತಿಸಿಕೊಂಡಿದೆ ಎಂದು ಸಚಿವರು ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ:Covid19 ದೇಶದಲ್ಲಿ ಇಳಿಕೆ, ರಾಜ್ಯದಲ್ಲಿ ಏರಿಕೆ: ಮುಚ್ಚಿಟ್ಟಿದ್ದೇ ಇಂದು ನಮಗೆ ಮುಳುವಾಯಿತೇ?

ಯೋಜನೆಯ ಉಪಯುಕ್ತತೆ, ಅಲ್ಲಿ ಅಳವಡಿಸಿಕೊಳ್ಳಲಾಗಿರುವ ಸುರಕ್ಷತಾ ಕ್ರಮಗಳ ಬಗ್ಗೆ ಯಾರಲ್ಲಿಯೂ ಸಂಶಯ ಬೇಡ. ಆದರೂ ಶಿಕ್ಷಕರ‌ ಕಾರಣಕ್ಕೆ‌ ಮಕ್ಕಳು ಕೋವಿಡ್ ಸೋಂಕಿತರಾಗಿದ್ದಾರೆಯೇ, ಮಕ್ಕಳಿಂದ ಶಿಕ್ಷಕರಿಗೆ ಅದು ಹರಡಿದೆಯೇ ಎಂಬ ಬಗ್ಗೆ ರಾಜ್ಯಾದ್ಯಂತ ಮಾಹಿತಿ ಸಂಗ್ರಹಣೆಗೆ ಇಂದಿನಿಂದಲೇ ನಾವು ಮುಂದಾಗಿದ್ದೇವೆ. ಪ್ರತಿ ಜಿಲ್ಲೆಯಿಂದ, ಸಂಬಂಧಪಟ್ಟವರಿಂದ ಈ ಸಂಪೂರ್ಣ ಮಾಹಿತಿ ಈ ಕೂಡಲೇ ಸಂಗ್ರಹಿಸಲಾಗುವುದು.‌ ಸಂಪೂರ್ಣ ಮಾಹಿತಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

Advertisement

ಮಕ್ಕಳ-ಶಿಕ್ಷಕರ ಆರೋಗ್ಯಕ್ಕಿಂತ ಇನ್ನಾವ ಕಾರ್ಯಕ್ರಮವೂ ಮುಖ್ಯವಲ್ಲ ಎಂದು ಸುರೇಶ್ ಕುಮಾರ್  ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next