Advertisement

50 ವರ್ಷ ಹಳೆಯ ಶಾಲಾ ಕಟ್ಟಡ ಪುನಃಶ್ಚೆತನಕ್ಕೆ ಬಜೆಟ್‌ನಲ್ಲಿ ವಿಶೇಷ ಅನುದಾನ  

06:04 PM Feb 09, 2021 | Team Udayavani |

ಬೆಳಗಾವಿ: 50 ವರ್ಷಕ್ಕಿಂತ ಹಳೆಯ ಶಾಲಾ ಕಟ್ಟಡಗಳ ಪುನಃಶ್ಚೇತನಕ್ಕೆ ಈ ಬಾರಿ ಬಜೆಟ್‌ ನಲ್ಲಿ ವಿಶೇಷ ಅನುದಾನ ಮೀಸಲಿಡಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶಕುಮಾರ್‌ ತಿಳಿಸಿದರು.

Advertisement

ಖಾನಾಪುರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಹೊಸದಾಗಿ ನಿರ್ಮಿಸಿರುವ ವಿಜ್ಞಾನ ಉದ್ಯಾನ ವೀಕ್ಷಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಲು ಮನವಿ ಮಾಡಲಾಗುವುದು. ಇನ್ನುಳಿದಂತೆ ಶಿಥಿಲಾವಸ್ಥೆಯಲ್ಲಿರುವ ಶಾಲೆಗಳ ಕಟ್ಟಡ ನಿರ್ಮಾಣ, ಹಣಕಾಸಿನ ಲಭ್ಯತೆ ಮೇರೆಗೆ ಆದ್ಯತೆ ನೀಡಲಾಗುವುದು. ಬೆಂಗಳೂರಿನಿಂದ ಹಿಡಿದು ರಾಜ್ಯದ ಕೊನೆಯ ಶಾಲೆಯಲ್ಲಿಯೂ ಕನ್ನಡವನ್ನು ಭಾಷೆಯಾಗಿ ಕಲಿಸಬೇಕು. ಈ ನೆಲದ ಕಾನೂನು ಅನ್ವಯ ಭಾಷೆ ಕಲಿಸಲು ಅಗತ್ಯ ಕ್ರಮ ಕೈಗೊಂಡು ಕನ್ನಡ ಕಲಿಸುವ ಶಿಕ್ಷಕರನ್ನು ಕಳುಹಿಸಲಾಗುವುದು. ಎಲ್ಲ ಕಡೆ ಸಂಖ್ಯೆ ಪಡೆದು ಕೊರತೆ ಇರುವ ಶಾಲೆಗೆ ಶಿಕ್ಷಕರನ್ನು ಕಳುಹಿಸಲಾಗುವುದು ಎಂದರು.

ಜನವರಿಯಿಂದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭಿಸಿದ್ದೇವೆ. ಅಲ್ಲಿಯ ಹಾಜರಾತಿ ಪಡೆದು ಮುಂದೆ ಹಂತ ಹಂತವಾಗಿ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಮುಖ್ಯವಾಗಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಮಕ್ಕಳು ಕಲಿಕೆಯಿಂದ ದೂರ ಉಳಿಯುತ್ತಿದ್ದಾರೆ. ಮತ್ತೆ ಅವರನ್ನು ಮುಖ್ಯವಾಹಿನಿಗೆ ಕರೆ ತರುವುದು ಕಷ್ಟಕರ.

   ಇದನ್ನೂ ಓದಿ :ಮರಾಠಿ ಶಾಲಾ ಮಕ್ಕಳಿಂದ ನಾಡಗೀತೆ ಹಾಡಿಸಿದ ಶಿಕ್ಷಣ ಸಚಿವ ಸುರೇಶ ಕುಮಾರ

ಕಳೆದ ವರ್ಷ ತರಗತಿ ಆರಂಭಿಸದ್ದಕ್ಕೆ ಗ್ರಾಮೀಣ, ನಗರ ಪ್ರದೇಶದಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಜತೆಗೆ ಇನ್ನು ತಾಲೂಕಿನಲ್ಲಿ ಬಾಲ್ಯ ವಿವಾಹ ಸಂಖ್ಯೆ ಅಧಿಕವಾಗಿದೆ. ಇದೊಂದು ಸಾಮಾಜಿಕ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಜಾಗೃತಿ ಮೂಡಿಸಲಾಗುವುದು. ಅರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿ ಜತೆ ಚರ್ಚಿಸಿ ಇನ್ನುಳಿದ ತರಗತಿ ಆರಂಭಿಸಲು ಕ್ರಮ ವಹಿಸಲಾಗುವುದು. 8, 9, 10 ಹಾಗೂ 11ನೇ ತರಗತಿಯನ್ನು ಇನ್ನು ಮುಂದಿನ ದಿನಗಳಲ್ಲಿ ಪೂರ್ಣಾವಧಿ  ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಈ ಸಮಿತಿಯ ಸಲಹೆ ಪಡೆಯಲಾಗುವುದು ಎಂದರು.

Advertisement

ಪ್ರತಿಯೊಬ್ಬ ಶಿಕ್ಷಕರು ತಯಾರಾಗಿ ನೋಟ್ಸ್‌ ಮಾಡಿಕೊಂಡು ಹೋದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿದೆ. ಮಕ್ಕಳು ಯಾವ ವಿಷಯದಲ್ಲಿ ದುರ್ಬಲ ಎನ್ನುವ ಮಾಹಿತಿ ಪಡೆದು ಆ ವಿಷಯಕ್ಕೆ ಒತ್ತು ನೀಡಿ ಕಲಿಸಬೇಕಿದೆ. ಬರುವ ಶೈಕ್ಷಣಿಕ ವರ್ಷದಿಂದ ಯಾವ ಮಕ್ಕಳೂ ಯಾವ ವಿಷಯದಲ್ಲಿಯೂ ಕಲಿಕೆಯಲ್ಲಿ ಹಿಂದೆ ಬೀಳಬಾರದು ಎಂಬುದಕ್ಕೆ ಹೆಚ್ಚು ಆದ್ಯತೆ ನೀಡಲಾಗುವುದು. ನಮ್ಮ ಶಾಲೆಯಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಎರಡೂ ಇದೆ. ಈ ಕ್ರಮ ಇಡೀ ದೇಶದಲ್ಲಿ ಮೆಚ್ಚುಗೆಗೆ ಕಾರಣವಾಗಿದೆಎಂದರು.

Advertisement

Udayavani is now on Telegram. Click here to join our channel and stay updated with the latest news.

Next