ಮುಂಬಯಿ: ನಗರದ ಹೊಟೇಲ್ ಉದ್ಯಮಿ, ಮೊಗವೀರ ಬ್ಯಾಂಕಿನ ನಿರ್ದೇಶಕ, ಕ್ಲಾಸಿಕ್ ಗ್ರೂಪ್ ಆಫ್ ಹೊಟೇಲ್‌ನ ಸಿಎಂಡಿ ಸುರೇಶ್ ಕಾಂಚನ್ ಅವರ ವತಿಯಿಂದ 11 ನೇ ವಾರ್ಷಿಕ ಉಪ್ಪಿನಕುದ್ರು ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಆರ್ಥಿಕವಾಗಿ ಹಿಂದುಳಿದ ಗ್ರಾಮದ ಸಮಸ್ತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಪುಸ್ತಕ ವಿತರಣೆಯು ಮೇ 28 ರಂದು ಉಪ್ಪಿನಕುದ್ರು ಸರಕಾರಿ ಶಾಲೆಯ ಆವರಣದಲ್ಲಿ ಸ್ಥಳೀಯ ಯುವಕ ಮಂಡಳದ ಆಶ್ರಯದಲ್ಲಿ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಉಡುಪಿಯ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ನಾಡೋಜ ಜಿ. ಶಂಕರ್ ಮಾತನಾಡಿ, ಶಿಕ್ಷಣವು ಮನುಷ್ಯನ ಉನ್ನತಿಗೆ ಕಾರಣವಾಗುತ್ತದೆ. ಸುರೇಶ್ ಕಾಂಚನ್ ಅವರು ಶಿಕ್ಷಣಕ್ಕಾಗಿ ಮಾಡುವ ಸೇವೆಯಿಂದ ಸಮಾಜದಲ್ಲಿ ವಿದ್ಯಾರ್ಥಿಗಳು ಪರಿವರ್ತನೆ ಕಾರಣಲು ಸಾಧ್ಯ ಎಂಬುವುದನ್ನು ಅರಿತು ಈ ಸೇವೆಯಲ್ಲಿ ತೊಡಗಿದ್ದಾರೆ. ಅವರ ಶೈಕ್ಷಣಿಕ ಸೇವೆ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಬೈಂದೂರು ಶಾಸಕ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಕೆ. ಗೋಪಾಲ್ ಪೂಜಾರಿ ಅವರು ಮಾತನಾಡಿ, ಬಹುತೇಕ ಜನರು ಉದ್ಯಮದಲ್ಲಿ ಯಶಸ್ವಿಯಾದಾಗ ತನ್ನ ಊರು ಮತ್ತು ಕಲಿತ ಶಾಲೆಗಳನ್ನು ಮರೆಯುತ್ತಾರೆ. ಆದರೆ ಸುರೇಶ್ ಕಾಂಚನ್ ಅವರು ತಮ್ಮ ಉದ್ಯಮದಲ್ಲಿ ಪಡೆದ ಲಾಭಾಂಶದ ಹೆಚ್ಚಿನ ಪಾಲನ್ನು ಊರಿನ ಅಭಿವೃದ್ಧಿಗಾಗಿ, ಬಡ ಮಕ್ಕಳ ಶಿಕ್ಷಣಕ್ಕಾಗಿ ವ್ಯಯಿಸುತ್ತಿದ್ದು, ಕಾಂಚನ್ ಅವರಂತಹ ಸಮಾಜ ಸೇವಕರು ಮತ್ತಷ್ಟು ಬೆಳೆಯಲಿ ಎಂದರು.
ವೇದಿಕೆಯಲ್ಲಿ ಪುರುಷೋತ್ತಮ ಪಿ. ಕೆ., ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಆನಂದ ಬಿಲ್ಲವ, ಉಪ್ಪಿನಕುದ್ರು ಗೋಪಾಲಕೃಷ್ಣ ದೇವಸ್ಥಾನದ ಧರ್ಮದರ್ಶಿ ರಮೇಶ್ ಕಾರಂತ, ಕೊಲ್ಲೂರು ಶ್ರೀ ಮೂಕಾಂಬಿಕಾ ಮಂದಿರದ ಧರ್ಮದರ್ಶಿ ರಾಜೇಶ್ ಕಾರಂತ್, ಪೊಲೀಸ್ ಅಧಿಕಾರಿ ಮಂಜಪ್ಪ ಡಿ. ಆರ್., ಉಪ್ಪಿನಕುದ್ರು ಯುವಕ ಮಂಡಳದ ಗೌರವಾಧ್ಯಕ್ಷ ಸದಾನಂದ ಶೇರಿಗಾರ್, ಪತ್ರಕರ್ತರುಗಳಾದ ಕೆ. ಸಿ. ರಾಧೇಶ್, ಜಾನ್ ಡಿಸೋಜಾ, ಉಪ್ಪಿನಕುದ್ರು ಪ್ರೌಢಶಾಲಾ ಮುಖ್ಯ ಶಿಕ್ಷಕಿ ಮಾಲತಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಚ್. ಗೋಪಾಲಕೃಷ್ಣ ಅವರು ಉಪಸ್ಥಿತರಿದ್ದು ಸುರೇಶ್ ಕಾಂಚನ್ ಅವರ ಶೈಕ್ಷಣಿಕ, ಸಮಾಜ ಸೇವೆಯನ್ನು ಪ್ರಶಂಸಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುರೇಶ್ ಕಾಂಚನ್ ಅವರು ಮಾತನಾಡಿ, ನನ್ನ ಪ್ರಗತಿಯಲ್ಲಿ ಉಪ್ಪಿನಕುದ್ರುವಿನ ಸಮಸ್ತ ಗ್ರಾಮಸ್ಥರ ಆಶೀರ್ವಾದವಿದೆ ಎನ್ನುವ ನಂಬಿಕೆಯಲ್ಲಿ ಬೆಳೆದವ ನಾನು. ಶಾಲಾ ದಿನಗಳಲ್ಲಿ ಕಷ್ಟದ ಕ್ಷಣಗಳು ನನ್ನ ಬದುಕಿನಲ್ಲಿ ಪದೇ ಪದೇ ನೆನಪಾಗುತ್ತದೆ. ತಾಯಿಯ ಮಾರ್ಗದರ್ಶನದಂತೆ ಹುಟ್ಟೂರಿನ ಅಭಿವೃದ್ಧಿಯ ಅಭಿಲಾಷೆಯನ್ನು ಇಟ್ಟುಕೊಂಡವ. ಇದಕ್ಕೆ ಗ್ರಾಮಸ್ಥರೆಲ್ಲರೂ ಒಮ್ಮನಸ್ಸಿನಿಂದ ಸಹಕರಿಸಿದ್ದಾರೆ. ಜಿ. ಶಂಕರ್ ಹಾಗೂ ಇಲ್ಲಿಯ ಶಾಸಕರು, ಸಂಸದರು, ರಾಜಕೀಯ ಮುಖಂಡರು ನಮಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಉಪ್ಪಿನಕುದ್ರು ಆದರ್ಶ ಗ್ರಾಮವಾಗಬೇಕಾಗಿದೆ. ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಇತರ ವಿದ್ಯಾರ್ಥಿಗಳಿಗೂ ಆದರ್ಶರಾಗಬೇಕು ಎಂದರು.
ಗಣ್ಯರಿಂದ ಪರಿಸರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ತುಳುವೆರೆ ತುಡರ್ ಸುರತ್ಕಲ್ ಕಲಾವಿದರಿಂದ ತುಳು ಹಾಸ್ಯ ನಾಟಕ ಪ್ರದರ್ಶನಗೊಂಡಿತು. ಗಿರೀಶ್ ಸ್ವಾಗತಿಸಿದರು. ಮಧುಕರ್ ಕಾರ್ಯಕ್ರಮ ನಿರ್ವಹಿಸಿದರು. ಸುನಿಲ್ ವಂದಿಸಿದರು.