ಬೆಂಗಳೂರು: ನಗರದ ಜನ ಬಳಕೆ ಮಾಡಿದ ನೀರನ್ನು ನೆರೆಯ ಊರುಗಳಿಗೆ ಹರಿಸುವ ಬಗ್ಗೆ ಪರ-ವಿರೋಧಗಳು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ ಅಂತಹದ್ದೇ ಬರದ ನಾಡಿನ ರೈತರೊಬ್ಬರು ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಸುರಿದು ಪಟ್ಟಣದ ಕೊಳಚೆನೀರು ಖರೀದಿಸಿ, ಕೈತುಂಬಾ ಆದಾಯ ಗಳಿಸುತ್ತಿದ್ದಾರೆ. ರಾಜ್ಯದಲ್ಲಿ ಹೀಗೆ ಕೃಷಿಗಾಗಿ ಹಣ ಕೊಟ್ಟು, ಕೊಳಚೆನೀರು ಖರೀದಿಸುತ್ತಿರುವ ಮೊದಲ ರೈತಕೂಡ ಇವರಾಗಿದ್ದಾರೆ!
ಕೊಳಚೆನೀರಿಗೆ ಭಾರೀ ಬೇಡಿಕೆ: ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಹಿತ್ತಲಹಳ್ಳಿಯ ಎಚ್.ಕೆ. ಸುರೇಶ್, ಶಿಡ್ಲಘಟ್ಟ ಪಟ್ಟಣದ ಜನ ಬಳಸಿದ ನೀರನ್ನು ಹಣಕೊಟ್ಟು ಖರೀದಿಸಿ ಅದೇ ನೀರಿನಲ್ಲಿ ಮಾವು, ದಾಳಿಂಬೆ, ರೇಷ್ಮೆ ಬೆಳೆದು ಮಿಂಚುತ್ತಿದ್ದಾರೆ. ಈ ಪ್ರಯೋಗವು ಹಳ್ಳಿಯ ಇತರೆ ರೈತರಿಗೂ ಮಾದರಿಯಾಗಿದ್ದು, ಅವರು ಕೂಡ ಖರೀದಿಗೆ ಮುಂದಾಗಿದ್ದಾರೆ. ಪರಿಣಾಮ ಶಿಡ್ಲಘಟ್ಟ ಪಟ್ಟಣದ ಕೊಳಚೆನೀರಿಗೆ ಭಾರೀ ಬೇಡಿಕೆ ಬಂದಿದ್ದು, ಹರಾಜು ಮೂಲಕ ಹಂಚಿಕೆ ಮಾಡುವಂತಾಗಿದೆ.
ರಾಜ್ಯಮಟ್ಟದ ಅತ್ಯುತ್ತಮ ರೈತ: ಪ್ರಸಕ್ತ ಸಾಲಿನಲ್ಲಿ ಎಚ್.ಕೆ. ಸುರೇಶ್ ಅವರು ಐದೂವರೆ ಲಕ್ಷ ರೂ. ಕೊಟ್ಟು ನೀರು ಖರೀದಿಸಿದ್ದಾರೆ. ಮೊದಲ ಹಂತ ದಲ್ಲಿ ಸಂಸ್ಕರಣೆಗೊಂಡು ಪೂರೈಕೆಯಾದ ನೀರನ್ನು,ಸ್ವಂತ ವ್ಯವಸ್ಥೆಯಲ್ಲಿ ಮರುಸಂಸ್ಕರಿಸಿ ಹನಿ ನೀರಾವರಿ ಪದ್ಧತಿಯಲ್ಲಿ ಬೆಳೆಗಳಿಗೆ ಉಣಿಸುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಬರೋಬ್ಬರಿ 42.80 ಲಕ್ಷ ರೂ. ಕೊಳಚೆನೀರಿಗಾಗಿ ಸುರಿದಿದ್ದಾರೆ. ಇದಕ್ಕೆ ಪ್ರತಿಯಾಗಿ ಹೆಚ್ಚು-ಕಡಿಮೆ ದುಪ್ಪಟ್ಟು ಆದಾಯ ಗಳಿಸಿದ್ದಾರೆ. ಇದರೊಂದಿಗೆ ರಾಜ್ಯಮಟ್ಟದ ಅತ್ಯುತ್ತಮ ರೈತ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.
ಇಸ್ರೇಲ್ ಪ್ರವಾಸದಿಂದ ಬದಲಾದ ಅದೃಷ್ಟ: ಈ ಹಿಂದೆ ತಮ್ಮ6ಎಕರೆ ಮಳೆಯಾಶ್ರಿತ ಜಮೀನಿನಲ್ಲಿ ಸುರೇಶ್ ಸುಮಾರು 18-19 ಕೊಳವೆಬಾವಿಗಳನ್ನುಕೊರೆಸಿ ಕೈಸುಟ್ಟುಕೊಂಡಿದ್ದಾರೆ. ಒಂದೇ ಒಂದು ಬಾವಿಯಿಂದ ನೀರು ದೊರೆಯಲಿಲ್ಲ. ಇದರಿಂದ ಬೇಸತ್ತ ಸಂದರ್ಭದಲ್ಲೇ 1999ರಲ್ಲಿ ಯೋಜನೆಯೊಂದರಲ್ಲಿ ಸರ್ಕಾರ ಆರು ರೈತರನ್ನು ಇಸ್ರೇಲ್ ಪ್ರವಾಸಕ್ಕೆ ಕಳುಹಿಸಿತು. ಆ ಪೈಕಿ ಸುರೇಶ್ ಕೂಡ ಒಬ್ಬರಾಗಿದ್ದರು. ಅಲ್ಲಿಂದ ಬಂದ ನಂತರ ಅವರ ಜೀವನ ಹೊಸ ತಿರುವು ಪಡೆದುಕೊಂಡಿತು. ಮಳೆನೀರು ಸಂಗ್ರಹಿಸಿ, ತಂತ್ರಜ್ಞಾನಗಳ ನೆರವಿನಲ್ಲಿ ಹನಿ ನೀರಾವರಿಯತ್ತ ಮುಖಮಾಡಿದರು. ಈ ಮಧ್ಯೆ ಒಂದು ದಿನ ಜಮೀನಿನ ಹತ್ತಿರದಲ್ಲೇ ವ್ಯರ್ಥವಾಗಿ ಹೋಗುತ್ತಿದ್ದ ಕೊಳಚೆನೀರು ಗಮನಸೆಳೆಯಿತು. ಆ ನೀರನ್ನು ಸ್ಥಳೀಯ ಸಂಸ್ಥೆಯ ಅನುಮತಿ ಮೇರೆಗೆ ಸಂಸ್ಕರಿಸಿ ಬಳಸಲು ಮುಂದಾದರು.
ಮೂರು ಟ್ಯಾಂಕ್ ನಿರ್ಮಾಣ: “ಕಳೆದ 18 ವರ್ಷಗಳಿಂದ ಕೊಳವೆಬಾವಿ ಸಹಾಯವಿಲ್ಲದೆ, ಸಮಗ್ರ ಕೃಷಿ ಮಾಡುತ್ತಿದ್ದೇನೆ . ಇನ್ನು ಮನೆ ಬಳಕೆಗೆ ನಿತ್ಯ 2ಸಾವಿರ ಲೀ. ನೀರು ಬೇಕಾಗುತ್ತದೆ. ಈ ಪೈಕಿ 400 ಲೀ. ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡುತ್ತಿದ್ದೇನೆ. ಜತೆಗೆ 50/50, 70/70 ಅಡಿ ಗಾತ್ರದ ಮೂರು ಟ್ಯಾಂಕ್‌ಗಳನ್ನು ನಿರ್ಮಿಸಿದ್ದು, ಇಲ್ಲಿ ಸಂಗ್ರಹವಾದ ಮಳೆ ನೀರನ್ನು ಇತರೆ ಬೆಳೆಗಳು ಮತ್ತು ಮನೆಗೆ ಉಪಯೋಗಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.
ವೈವಿಧ್ಯಬೆಳೆಗಳು : “ಜಮೀನಿನಲ್ಲಿ ರೇಷ್ಮೆಹುಳುಗಳ ಸಾಕಣೆ,ಕುರಿ, ಸ್ವರ್ಣಧಾರಕೋಳಿ, ಮೇವಿನ ಮುಸುಕಿನಜೋಳ, ಅಗಸೆ ಮರ, ನೇಪಿಯರ್ ಹುಲ್ಲು,ಕೈತೋಟ, ಪಪಾಯ, ಸೀಬೆ, ಸೀತಾಫಲ, ನಿಂಬೆ,ಬಾಳೆ ಸೇರಿದಂತೆಹಲವು ಹಣ್ಣಿನ ಗಿಡಗಳು, ಸಿಲ್ವರ್‌ಓಕ್‌ನಂತಹ ಅರಣ್ಯ ಮರಗಳನ್ನು ಬೆಳೆಯುತ್ತಿದ್ದೇನೆ. ಸಾಸಿವೆ,ಚೆಂಡು ಹೂವು ರಕ್ಷಣೆಬೆಳೆ, ರಾಗಿ, ತೊಗರಿ, ನವಣೆ ಕೂಡಬೆಳೆಯುತ್ತಿದ್ದೇನೆ. ಚಾಕಿ ಸಾಕಣೆಯನ್ನು ಮುಖ್ಯ ಕಸುಬಾಗಿ, ಪ್ರತಿಬ್ಯಾಚ್‌ನಲ್ಲಿ 4 ಸಾವಿರ ಡಿಎಫ್ಎಲ್ ಮೊಟ್ಟೆಗಳ ಎರಡನೇ ಹಂತದ ಮರಿಗಳನ್ನು ರೈತರಿಗೆ ಮಾರಾಟ ಮಾಡುತ್ತಿದ್ದೇನೆ’ ಎಂದು ಸುರೇಶ್‌ಹೇಳಿದರು.
ಹಲವು ಪ್ರಶಸ್ತಿ ಪಡೆದಿರುವ ಸುರೇಶ್ : ಎಚ್.ಕೆ. ಸುರೇಶ್ ಮೂರು ಬಾರಿ ಎಸ್ಸೆಸ್ಸೆಲ್ಸಿ ಹಾಗೂ ಎರಡು ಬಾರಿ ಪಿಯುಸಿ ಫೇಲ್ ಆಗಿದ್ದಾರೆ. ನಂತರದಲ್ಲಿ ಬೆಂಗಳೂರು ಕೃಷಿ ವಿವಿಯಲ್ಲಿ ಬಿಎಸ್ಸಿ(ರೇಷ್ಮೆ) ಪದವಿ ಪೂರೈಸಿದ್ದಾರೆ. ಪ್ರಸ್ತುತ ಭಾರತೀಯ ರೇಷ್ಮೆ ಸಂಘದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇದುವರೆಗೆ ಕೃಷಿಗೆ ಸಂಬಂಧಿಸಿದ 8-10ಪ್ರ ಶಸ್ತಿಗಳು ಇವರಿಗೆ ಒಲಿದು ಬಂದಿವೆ.25ದೇಶಗಳಿಂದ ಪ್ರತಿನಿಧಿಗಳು ಸುರೇಶ್ ಅವರ ಜಮೀನಿಗೆ ಭೇಟಿ ನೀಡಿದ್ದಾರೆ. ಮಾಹಿತಿಗೆ ಮೊ: 9986830435.