Advertisement

ಸುರತ್ಕಲ್‌: ಕಚೇರಿಯ ಆನ್‌ಲೈನ್‌ ಸ್ತಬ್ಧ!

10:22 AM Oct 22, 2017 | Team Udayavani |

ಸುರತ್ಕಲ್‌ : ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್‌ ವಲಯ ಕಚೇರಿಯಲ್ಲಿ ದೂರವಾಣಿ ಸಂಪರ್ಕ ವ್ಯತ್ಯಯವಾಗಿದ್ದು, ಒಂದು ವಾರದಿಂದ ಆನ್‌ಲೈನ್‌ ಸ್ತಬ್ಧಗೊಂಡಿದೆ.

Advertisement

ಆನ್‌ಲೈನ್‌ ಸೇವೆಯ ಬಳಕೆಗಾಗಿ ಪಾಲಿಕೆ ಹಣ ಪಾವತಿಸದೇ ಇರುವುದರಿಂದ ದೂರಸಂಪರ್ಕ ಇಲಾಖೆ ಇಂಟರ್‌ನೆಟ್‌ ಸೌಲಭ್ಯಕ್ಕೇ ಕತ್ತರಿ ಹಾಕಿದೆ. ಇದರಿಂದಾಗಿ ನೀರಿನ ಬಿಲ್‌ ಪರಿಶೀಲನೆ, ನೋಂದಣಿ, ಅನುಮತಿ ಪತ್ರ ಮತ್ತಿತರ ದಾಖಲೆ ಪತ್ರ ಪಡೆಯಲಾಗದೆ ನಾಗರಿಕರು ಬರಿಗೈಯಲ್ಲಿ ಹಿಂದಿರುಗುವಂತಾಗಿದೆ.

ಇದೀಗ ಪಾಲಿಕೆಯ ಬಹುತೇಕ ಕೆಲಸ ಕಾರ್ಯಗಳು ಆನ್‌ಲೈನ್‌ ಮೂಲಕವೇ ನಡೆಯುತ್ತಿವೆ. ಇಲ್ಲಿನ ಪಾಲಿಕೆ ವ್ಯಾಪ್ತಿಯಲ್ಲಿ 12 ವಾರ್ಡ್‌ಗಳು ಬರುತ್ತಿದ್ದು, ವಲಯ ಕಚೇರಿಯಲ್ಲೇ ಎಲ್ಲ ದಾಖಲೆಗಳು ನಿರ್ವಹಣೆಯಾಗುತ್ತಿವೆ. ಹೀಗಾಗಿ ಸಹಜವಾಗಿಯೇ ಇಂಟರ್‌ನೆಟ್‌ ಬಳಕೆ ಅತಿಯಾಗುತ್ತಿದೆ. ಕಳೆದ ಸೋಮವಾರವೇ ಅಂತರ್ಜಾಲ ಸ್ತಬ್ಧಗೊಂಡಿದ್ದರೂ ದುರಸ್ತಿಗೆ ಹಬ್ಬದ ರಜಾ ದಿನಗಳು ಅಡ್ಡಿಯಾಗಿವೆ.

ಸೋಮವಾರದ ವೇಳೆಗೆ ಆನ್‌ ಲೈನ್‌ ವ್ಯವಸ್ಥೆ ಸರಿಯಾಗುವ ವಿಶ್ವಾಸವಿದೆ. ಇಂಟರ್‌ನೆಟ್‌ ಸಂಪರ್ಕ ಸರಿಹೋದರೂ ಸಿಬಂದಿಗೆ ಕೆಲಸದ ಒತ್ತಡ ಅಧಿಕವಾಗಲಿದೆ.

ಜನಪ್ರತಿನಿಧಿಗಳು ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಮೂಲ ಸೌಕರ್ಯ ನೀಡಲು ಮುಂದಾಗಬೇಕು ಎಂದು ಹಿಂದೂಸ್ತಾನ್‌ ಹ್ಯೂಮನ್‌ ರೈಟ್ಸ್‌ ಅಧ್ಯಕ್ಷ ಉಸ್ಮಾನ್‌ ಎಂ.ಬಿ. ತಿಳಿಸಿದ್ದಾರೆ.

Advertisement

ತಾಸುಗಟ್ಟಲೆ ಸರತಿ ನಿಲ್ಲಬೇಕಾದ ಸ್ಥಿತಿ
ಆನ್‌ಲೈನ್‌ ಸ್ತಬ್ಧ ಹಾಗೂ ಹಬ್ಬದ ಕಾರಣಕ್ಕೆ ಒಂದು ವಾರದಿಂದ ಸ್ಥಗಿತ ಗೊಂಡಿದ್ದ ಎಲ್ಲ ಕೆಲಸಗಳಿಗಾಗಿ ನಾಗರಿಕರೂ ತಾಸುಗಟ್ಟಲೆ ಸರತಿಯಲ್ಲಿ ನಿಲ್ಲಬೇಕಾದ ಸಾಧ್ಯತೆ ಇಲ್ಲದಿಲ್ಲ. ಸ್ಥಳೀಯ ನಾಗರಿಕರಿಗೆ ಮಂಗಳೂರಿನವರೆಗೆ ತೆರಳುವ ಬದಲು ಸುರತ್ಕಲ್‌ನಲ್ಲಿಯೇ ಸೌಲಭ್ಯ ದೊರೆಯಲಿ ಎಂದು ವಲಯ ಕಚೇರಿ ಮಾಡಲಾಗಿದೆ. ಕೆಲಸ ಕಾರ್ಯಗಳು ಅಂತರ್ಜಾಲ ಮೂಲಕ ನಿರ್ವಹಣೆಯಾಗುತ್ತಿವೆ. ಆದರೆ ಇಲ್ಲಿ ದೂರವಾಣಿ ಬಿಲ್‌ ಕಟ್ಟಲೂ ಹಣವಿಲ್ಲದ ಸ್ಥಿತಿಯಿದೆ.

Advertisement

Udayavani is now on Telegram. Click here to join our channel and stay updated with the latest news.

Next