ಸುರತ್ಕಲ್: ಸುರತ್ಕಲ್ ರೈಲು ನಿಲ್ದಾಣದಲ್ಲಿ ಹತ್ತು ವರ್ಷಗಳ ಬೇಡಿಕೆಯಾಗಿದ್ದ ಪ್ರಯಾಣಿಕರ ಟಿಕೆಟ್ ಕಾದಿರಿಸುವ ವ್ಯವಸ್ಥೆ (ಪ್ಯಾಸೆಂಜರ್ಸ್ ರಿಸರ್ವೇಷನ್ ಸಿಸ್ಟಮ್) ಕೊನೆಗೂ ಕೈಗೂಡಿದೆ. ಶಾಸಕ ಡಾ| ಭರತ್ ಶೆಟ್ಟಿ ವೈ. ಸೋಮವಾರ ಸಾಂಕೇತಿಕವಾಗಿ ಟಿಕೆಟ್ ನೀಡುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿ, ಸಂಸದ ನಳಿನ್ ಕುಮಾರ್ ಕಟೀಲು ಅವರು ರೈಲು ನಿಲ್ದಾಣದ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ.
ಸ್ಥಳೀಯ ಸಂಘ- ಸಂಸ್ಥೆಗಳ ಬೇಡಿಕೆಯೂ ಇತ್ತು. ಇನ್ನು ಇಲ್ಲಿರುವ ಬೃಹತ್ ಕಂಪೆನಿಗಳ, ಎನ್‌ಐಟಿಕೆ ಕಾಲೇಜು ಸಹಿತ ನೌಕರ ವರ್ಗದವರು, ವಿದ್ಯಾರ್ಥಿಗಳು ಹಾಗೂ ಮುಖ್ಯವಾಗಿ ಮುಂಬಯಿ ಹಾಗೂ ಬೆಂಗಳೂರಿನಲ್ಲಿ ವಿವಿಧ ಕಾರಣಗಳಿಗಾಗಿ ವಲಸೆ ಹೋದ ಸಾವಿರಾರು ಮಂದಿ ಸುರತ್ಕಲ್‌ನಲ್ಲೇ ಸೀಟು ಕಾದಿರಿಸಬಹುದು.
ಈ ವರೆಗೆ ಮಂಗಳೂರು ಅಥವಾ ಉಡುಪಿ ಕೇಂದ್ರ ನಿಲ್ದಾಣಕ್ಕೆ ಹೋಗಬೇಕಿತ್ತು. ಈಗ ಆ ಸಮಸ್ಯೆ ನೀಗಿದೆ. ಮುಂದೆ ಇದನ್ನು ಸ್ಮಾರ್ಟ್ ರೈಲು ನಿಲ್ದಾಣವಾ ಗಿಸುವ ಯೋಜನೆಯಿದೆ. 1.50 ಕೋ.ರೂ. ವೆಚ್ಚದಲ್ಲಿ ನಿಲ್ದಾಣದ ಮೂಲಸೌಕರ್ಯ ಮೇಲ್ದರ್ಜೆಗೆ ಏರಿಸಲಾಗುವುದು. ಈಗಾಗಲೇ 50 ಲಕ್ಷ ರೂ. ಬಿಡುಗಡೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೊಂಕಣ ರೈಲ್ವೇ ಚೇರ್ಮನ್ ಮತ್ತು ಸಿಎಂಡಿ ಸಂಜಯ್ ಗುಪ್ತ, ಕಾರವಾರ ರೀಜನ್ ರೈಲ್ವೇ ಮ್ಯಾನೇಜರ್ ಬಿ.ಬಿ. ನಿಕ್ಕಮ್, ಹಿರಿಯ ಆರ್‌ಟಿಎಂ ವಿನಯ್ ಕುಮಾರ್, ಪಿಆರ್‌ಒ ಸುಧಾ ಕೃಷ್ಣಮೂರ್ತಿ, ಎಟಿಎಂ ಜಿ.ಡಿ. ಮೀನ ಮೊದಲಾದವರು ಉಪಸ್ಥಿತರಿದ್ದರು.
ಟಿಕೆಟ್ ರದ್ದತಿ ಇನ್ನು ಸರಳ
ಸುರತ್ಕಲ್ ರೈಲು ನಿಲ್ದಾಣದಲ್ಲಿ ಪಿಆರ್‌ಎಸ್ ಆರಂಭವಾಗಿರುವು ದರಿಂದ ಟಿಕೆಟ್ ಕಾದಿರಿಸುವಿಕೆ, ರದ್ದು ಮತ್ತಿತರ ಸೌಲಭ್ಯಗಳು ಸಿಗಲಿವೆ. ಆಟೋ ರಿಕ್ಷಾ ಪ್ರಿ ಪೇಯ್ಡ, ಕಾರು ಪಾರ್ಕಿಂಗ್, ಮುಂಭಾಗದ ವೃತ್ತ ನವೀಕರಣ, ಕಟ್ಟಡಕ್ಕೆ ಬಣ್ಣ ಬಳಿಯುವಿಕೆ ಹಾಗೂ ನೂತನ ಮಹಿಳಾ ವಿಶ್ರಾಂತಿ ಕೊಠಡಿ ನಿರ್ಮಿಸುವ ಯೋಜನೆ ರೂಪಿಸಲಾಗುತ್ತಿದೆ.