Advertisement

ಸುರತ್ಕಲ್‌ ಮಾರುಕಟ್ಟೆ ಬಂದ್‌, ಪ್ರತಿಭಟನೆ

10:42 AM Dec 14, 2017 | Team Udayavani |

ಸುರತ್ಕಲ್‌: ತಮ್ಮನ್ನು ಯಾವುದೇ ಮುನ್ಸೂಚನೆ ನೀಡದೆ ಮೂಲ ಸೌಕರ್ಯಗಳಿಲ್ಲದ ತಾತ್ಕಾಲಿಕ ಶೆಡ್‌ಗಳಿಗೆ ಸ್ಥಳಾಂತರಿಸಲು ಮನಪಾ ಆಯುಕ್ತರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಸುರತ್ಕಲ್‌ ಹಳೆ ಮಾರುಕಟ್ಟೆ ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬುಧವಾರ ಪ್ರತಿಭಟನೆ ನಡೆಸಿದರು. 

Advertisement

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಸಚಿವ ಹಾಗೂ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಕೃಷ್ಣ ಜೆ. ಪಾಲೆಮಾರ್‌, ಮಾರುಕಟ್ಟೆ ಕಾಮಗಾರಿಗೆ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ. ಸರಿಯಾದ ನೀಲಿನಕಾಶೆ ರೂಪಿಸಲಾಗಿಲ್ಲ. ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಮಾರುಕಟ್ಟೆ ಕೋಳಿಗೂಡಿನಂತಿದ್ದು, ವ್ಯಾಪಾರಕ್ಕೆ ಯೋಗ್ಯವಾಗಿಲ್ಲ. ನೂತನ ಮಾರುಕಟ್ಟೆ ನಿರ್ಮಾಣಕ್ಕಾಗಿ ಅವಸರ ಮಾಡುತ್ತಿರುವುದನ್ನು ನೋಡಿದರೆ ಇದರ ಹಿಂದೆ ಲಾಬಿ ಇರುವ ಸಂಶಯವಿದೆ ಹಾಗೂ ಹಳೆ ವ್ಯಾಪಾರಿಗಳಿಗೆ ಮತ್ತೆ ನೆಲೆ ಸಿಗುವ ಬಗ್ಗೆಯೂ ಅನುಮಾನವಿದೆ ಎಂದರು.

ಭರವಸೆ ನೀಡಿ: ಶೆಟ್ಟಿ
ಮಾಜಿ ಶಾಸಕ ವಿಜಯ್‌ ಕುಮಾರ್‌ ಶೆಟ್ಟಿ ಮಾತನಾಡಿ, ಮನಪಾ ಆಯುಕ್ತರು ಅಂಗಡಿ ತೆರವು ಮಾಡುವ ಮುನ್ನ ವ್ಯಾಪಾರಿಗಳ ಬೇಡಿಕೆಗಳನ್ನು ಆಲಿಸಬೇಕಾಗಿದೆ. ಸ್ಥಳಾಂತರಕ್ಕೆ ಮೊದಲು ಸಮಯಾವಕಾಶ ನೀಡಿ ಲಿಖೀತ ನೋಟಿಸ್‌ ಮತ್ತು ಹೊಸ ಮಾರುಕಟ್ಟೆಯಲ್ಲಿ ಮಳಿಗೆ ಒದಗಿಸುವ ಭರವಸೆ ನೀಡಬೇಕು ಎಂದು ಹೇಳಿದರು.

ವ್ಯಾಪಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ: ಸತ್ಯಜಿತ್‌
ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಸತ್ಯಜಿತ್‌ ಸುರತ್ಕಲ್‌ ಮಾತನಾಡಿ, ವ್ಯಾಪಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸೌಜನ್ಯವನ್ನು ಶಾಸಕರಾಗಲಿ, ಪಾಲಿಕೆಯಾಗಲಿ ತೋರಿಸಿಲ್ಲ. ಸಮಗ್ರ ಅಭಿವೃದ್ಧಿ ಕಾಮಗಾರಿ ಕುರಿತು ಮಾಹಿತಿಯನ್ನೂ ನೀಡದೆ ವ್ಯಾಪಾರಿಗಳನ್ನು ಕತ್ತಲಲ್ಲಿಡಲಾಗಿದೆ. ಮೀನು ವ್ಯಾಪಾರಿಗಳಿಗೆ ಸರಿಯಾದ ವ್ಯವಸ್ಥೆಯಿಲ್ಲ ಎಂದು ಆರೋಪಿಸಿದರು. ಸಭೆಯಲ್ಲಿ ವ್ಯಾಪಾರಿಗಳ ಬೇಡಿಕೆಯನ್ನು ಮಂಡಿಸಿ ಹಕ್ಕೊತ್ತಾಯ ಮಾಡಲಾಯಿತು.

ಬೇಡಿಕೆಗಳ ಪಟ್ಟಿ
ಅವ್ಯವಸ್ಥಿತ ತಾತ್ಕಾಲಿಕ ಮಾರುಕಟ್ಟೆಯನ್ನು ಸರಿಪಡಿಸಬೇಕು, ಅಂಗಡಿಗಳ ಬಾಗಿಲು ಸಮಸ್ಯೆಯನ್ನು ಸರಿಪಡಿಸಬೇಕು, ಹೊಸ ಮಾರುಕಟ್ಟೆಯಲ್ಲಿ ತಮ್ಮ ಅಂಗಡಿ ಜಾಗವನ್ನು ಗುರುತಿಸಬೇಕು ಮುಂತಾದ ಹಲವು ಬೇಡಿಕೆಗಳನ್ನು ವ್ಯಾಪಾರಿಗಳು ಮುಂದಿರಿಸಿದರು. ಇವುಗಳು ಈಡೇರಿದರೆ ಸ್ಥಳಾಂತರಕ್ಕೆ ಸಿದ್ಧ ಎಂದು ಅವರು ಹೇಳಿದರು.

Advertisement

ಬಿಜೆಪಿ ಮಂಗಳೂರು ಉತ್ತರ ಘಟಕದ ಅಧ್ಯಕ್ಷ ಡಾ| ಭರತ್‌ ಶೆಟ್ಟಿ ವೈ., ಮಾಜಿ ಮೇಯರ್‌ ಗಣೇಶ್‌ ಹೊಸಬೆಟ್ಟು, ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಫಾರೂಕ್‌, ಸಂತೋಷ್‌ ಶೆಟ್ಟಿ, ವ್ಯಾಪಾರಿಗಳಾದ ವಸಂತ್‌ ಹೊಸಬೆಟ್ಟು, ಮಾಜಿ ಮೇಯರ್‌ ಗಣೇಶ್‌ ಹೊಸಬೆಟ್ಟು, ವರುಣ್‌ ಚೌಟ, ಉಮೇಶ್‌ ದೇವಾಡಿಗ ಇಡ್ಯಾ, ನಯನಾ ಶ್ರೀಯಾನ್‌ ಮತ್ತಿತರರು ಉಪಸ್ಥಿತರಿದ್ದರು.

ಮಾರುಕಟ್ಟೆ ಬಂದ್‌!
ಬುಧವಾರ ಸುರತ್ಕಲ್‌ನಲ್ಲಿ ಸಂತೆ ವ್ಯಾಪಾರ ಸ್ಥಗಿತಗೊಳಿಸಿ ಮುಡಾ ಸಹಿತ ಎಲ್ಲ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸದಿರಲು ತೀರ್ಮಾನಿಸಿ ಬಂದ್‌ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ಅಂಗಡಿ ಮಾಲಕರು ಸ್ವಯಂಪ್ರೇರಿತರಾಗಿ ಅಂಗಡಿ ಬಂದ್‌ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಪ್ರತಿಭಟನೆ ಬಳಿಕ ಸುರತ್ಕಲ್‌ನಲ್ಲಿರುವ ಮನಪಾ ಉಪ ಕಚೇರಿಯಲ್ಲಿ ಕಮಿಷನರ್‌ಗೆ ಮನವಿ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next