Advertisement

ಸುರತ್ಕಲ್‌, ಹೆಜಮಾಡಿ ಟೋಲ್‌ ಶೀಘ್ರ ವಿಲೀನ : ಪತ್ರಕ್ಕೆ ಸ್ಪಂದಿಸಿದ ಭೂಸಾರಿಗೆ ಸಚಿವ ಗಡ್ಕರಿ

02:48 PM Aug 23, 2022 | Team Udayavani |

ಕುಂದಾಪುರ: ಹೆಜಮಾಡಿಯಿಂದ ಕೇವಲ 11 ಕಿ.ಮೀ. ದೂರದಲ್ಲಿರುವ ಸುರತ್ಕಲ್‌ನಲ್ಲಿ ಹೆದ್ದಾರಿ ನಿಯಮಗಳನ್ನು ಮೀರಿ ಟೋಲ್‌ ವಸೂಲಾತಿ ನಡೆಯುತ್ತಿದ್ದು ಟೋಲ್‌ ರದ್ದು ಮಾಡಬೇಕೆಂದು ಕೇಂದ್ರ ಭೂಸಾರಿಗೆ ಖಾತೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ಇಲ್ಲಿನ ನಿವಾಸಿ ಸಾಫ್ಟ್ವೇರ್‌ ಉದ್ಯೋಗಿ ವಿಘ್ನೇಶ್‌ ಶೆಣೈ ಪತ್ರ ಬರೆದಿದ್ದಾರೆ. ಇದಕ್ಕೆ ಕೇವಲ 14 ದಿನಗಳಲ್ಲಿ ಸ್ಪಂದನೆ ದೊರೆತಿದೆ.

Advertisement

ಪ್ರಯಾಣ ದುಬಾರಿ
ಕುಂದಾಪುರದಿಂದ ಮಂಗಳೂರಿಗೆ ಹೋಗುವಾಗ ಸಾಸ್ತಾನ, ಹೆಜಮಾಡಿ, ಸುರತ್ಕಲ್‌ನಲ್ಲಿ ಟೋಲ್‌ ಪಾವತಿಸಬೇಕಾಗುತ್ತದೆ. ಸುರತ್ಕಲ್‌ ಟೋಲ್‌ನಲ್ಲಿ ಮಂಗಳೂರು ನೋಂದ ಣಿಯ ಕೆಲವು ವಾಹನಗಳಿಗೆ ಈಗಲೂ ರಿಯಾಯಿತಿ ಇದೆ. ಆದರೆ ಉಡುಪಿ ನೋಂದಣಿ ಯವರು ಕಡ್ಡಾಯ ಪಾವತಿಸಬೇಕು. ಇದರಿಂದ ಕುಂದಾಪುರ -ಉಡುಪಿ -ಮಂಗಳೂರು ನಡುವಿನ ಸವಾರರಿಗೆ ಪ್ರಯಾಣ ತೀರಾ ದುಬಾರಿಯಾಗುತ್ತದೆ.

ಉತ್ತರ 
ಸುರತ್ಕಲ್‌ ಟೋಲ್‌ಗೇಟ್‌ ಆರಂಭಿಸಲು 2008ರ ಡಿ.5ರಂದು ನೋಟಿಫಿಕೇಶನ್‌ ಆಗಿದೆ. ಪಕ್ಕದ ಹೆಜಮಾಡಿಯಲ್ಲಿ ಟೋಲ್‌ ಆರಂಭಿಸಲು ಸೂಕ್ತ ಕಾರಣಗಳಿದ್ದವು. ಹಾಗಿದ್ದರೂ ಸುರತ್ಕಲ್‌ ಟೋಲ್‌ ಅನ್ನು ಹೆಜಮಾಡಿ ಟೋಲ್‌ ಜತೆ ವಿಲೀನ ಮಾಡಲು ಹೆ. ಇಲಾಖೆ ಪ್ರಾದೇಶಿಕ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿ, ಅಲ್ಲಿ ಮಾನ್ಯತೆಗೊಂಡಿದ್ದು ಕಾರ್ಯಹಂತದಲ್ಲಿದೆ ಎಂದು ಉತ್ತರಿಸಲಾಗಿದೆ.

ಹೆದ್ದಾರಿ ಪ್ರಾಧಿಕಾರ ಮಾಹಿತಿ ಸುರತ್ಕಲ್‌ ಟೋಲ್‌ಗೇಟ್‌ ಸಮೀಪದಲ್ಲಿರುವ ಹೆಜಮಾಡಿ ಮತ್ತು ತಲಪಾಡಿ ಟೋಲ್‌ಗೇಟ್‌ನೊಂದಿಗೆ ವಿಲೀನ ಮಾಡಲು ಹೆದ್ದಾರಿ ಇಲಾಖೆ ಪ್ರಾಧಿಕಾರ ಮುಂದಾಗಿದೆ ಎಂದು ಆ. 19ರಂದು ಮೂಲಗಳು ತಿಳಿಸಿದ್ದು ವರದಿಯಾಗಿತ್ತು.

ಸಚಿವ ನಿತಿನ್‌ ಗಡ್ಕರಿಗೆ ಪತ್ರ
ಹೆಜಮಾಡಿಯಿಂದ 11 ಕಿ.ಮೀ. ದೂರದಲ್ಲಿ ಸುರತ್ಕಲ್‌ಲ್ಲಿ ಟೋಲ್‌ ಗೇಟ್‌ ಇದೆ. ಇಲ್ಲಿನ ವ್ಯವಸ್ಥೆಗಳೂ ತೀರಾ ಕಳಪೆಯಾಗಿವೆ. ಸುಸಜ್ಜಿತವಿಲ್ಲದೇ, ಮೂಲಭೂತ ಸೌಕರ್ಯವೂ ಇಲ್ಲದೇ, ಉತ್ತರ ಭಾರತದ ಸಿಬಂದಿ ವಾಹನ ಚಾಲಕರ ಜತೆ ಒರಟಾಗಿ ವರ್ತಿಸುತ್ತಾರೆ ಎಂದು ಗಡ್ಕರಿ ಅವರಿಗೆ ಬರೆದ ಪತ್ರದಲ್ಲಿ ವಿವರಿಸಲಾಗಿದೆ. ಇದಕ್ಕೂ ಮೊದಲು ವಿಘ್ನೇಶ್‌ ಶೆಣೈ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಪತ್ರ ಬರೆದಿದ್ದರು. ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಆ. 4ರಂದು ನಿತಿನ್‌ ಗಡ್ಕರಿ ಅವರಿಗೆ ಪತ್ರವನ್ನು ಮೇಲ್‌ ಮಾಡಿದ್ದರು. ಆ. 6ರಂದು ಅಲ್ಲಿಂದ ಮಂಗಳೂರು ಕಚೇರಿಗೆ ರವಾನೆಯಾಗಿದೆ. ಆ.18ರಂದು ಹೆದ್ದಾರಿ ಇಲಾಖೆ ಮಂಗಳೂರಿನ ಯೋಜನ ನಿರ್ದೇಶಕರಿಂದ ಉತ್ತರ ಕಳುಹಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next