Advertisement

Mangalore: ರೌಡಿಶೀಟರ್‌ ಮೇಲೆ ತಲವಾರು ದಾಳಿ ನಡೆಸಿ ಕೊಲೆಯತ್ನ

10:48 PM May 30, 2024 | Team Udayavani |

ಮಂಗಳೂರು: ರೌಡಿಶೀಟರ್‌ ಭರತ್‌ ಶೆಟ್ಟಿ ಮೇಲೆ ತಲವಾರು, ಚೂರಿಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಬುಧವಾರ ರಾತ್ರಿ ಸುರತ್ಕಲ್‌ ಠಾಣಾ ವ್ಯಾಪ್ತಿಯ ಕುಳಾಯಿ ಗ್ರಾಮದ ಕುಳಾಯಿಗುಡ್ಡೆಯಲ್ಲಿ ನಡೆದಿದೆ.

Advertisement

ಭರತ್‌ ಶೆಟ್ಟಿ ತನ್ನ ಗೆಳೆಯ ಸುವಿನ್‌ ಜತೆ ದ್ವಿಚಕ್ರ ವಾಹನದಲ್ಲಿ ರಾತ್ರಿ 10.15ರ ಸುಮಾರಿಗೆ ಕುಳಾçಗುಡ್ಡೆಯ ವೈನ್‌ಶಾಪ್‌ವೊಂದಕ್ಕೆ ಬಂದಿದ್ದ. ಸುವಿನ್‌ ಬಿಯರ್‌ ತರಲು ವೈನ್‌ಶಾಪ್‌ನ ಒಳಗೆ ಹೋಗಿದ್ದ. ಅದೇ ಸಮಯ ಅಲ್ಲಿ ಸಿಕ್ಕಿದ್ದ ಪರಿಚಯದ ಸುಜೀತ್‌ ಜತೆಗೆ ಭರತ್‌ ಶೆಟ್ಟಿ ದ್ವಿಚಕ್ರ ವಾಹನದಲ್ಲಿ ಕುಳಿತು ಮಾತನಾಡುತ್ತಿದ್ದ. ಆಗ ಕಾರಿನಲ್ಲಿ ಬಂದ ಆರೋಪಿಗಳಾದ ಕಿಶನ್‌, ಚೇತು ಪಡೀಲ್‌, ರಾಜು ಫ‌ರಂಗಿಪೇಟೆ, ಗುಜ್ಜೆ ಶೈಲೇಶ್‌ ಮತ್ತು ಇತರ ಕೆಲವರು ಕಾರನ್ನು ಭರತ್‌ ಶೆಟ್ಟಿ ಮೇಲೆ ಢಿಕ್ಕಿ ಹೊಡೆಯಿಸಿ ಕೊಲೆಗೆ ಯತ್ನಿಸಿದರು. ಅಲ್ಲದೆ ತಲವಾರು ಮತ್ತು ಚೂರಿಯಿಂದ ಭರತ್‌ ಶೆಟ್ಟಿಯ ಎಡಗೈ, ಬಲ ಕಾಲು, ಕೆಳ ತುಟಿಗೆ ಕಡಿದು ಕೊಲೆಗೆ ಯತ್ನಿಸಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಇತರರು ಭರತ್‌ ಶೆಟ್ಟಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮನೋಜ್‌ ಕುಮ್ಮಕ್ಕು :

ಆರೋಪಿಗಳು ಮನೋಜ್‌ ಕೋಡಿಕೆರೆಯ ಕುಮ್ಮಕ್ಕಿನಂತೆ ಈ ಕೃತ್ಯ ನಡೆಸಿದ್ದಾರೆ. ತನ್ನ ಚಲನವಲನಗಳನ್ನು ತಿಳಿದುಕೊಂಡ ಮನೀಶ್‌ ಪೂಜಾರಿ ತೋರಿಸಿಕೊಟ್ಟಂತೆ ದಾಳಿ ನಡೆಸಲಾಗಿದೆ ಎಂದು ಭರತ್‌ ಶೆಟ್ಟಿ ಸುರತ್ಕಲ್‌ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ.

ಇಬ್ಬರೂ ರೌಡಿಶೀಟರ್‌ಗಳು:

Advertisement

ಭರತ್‌ ಶೆಟ್ಟಿ ವಿರುದ್ಧ ಪಾಂಡೇಶ್ವರ ಮತ್ತು ಸುರತ್ಕಲ್‌ ಠಾಣೆಗಳಲ್ಲಿ ಕೊಲೆ ಪ್ರಕರಣಗಳು ದಾಖಲಾಗಿದ್ದವು. ಈತ ರೌಡಿಶೀಟರ್‌. ಮನೋಜ್‌ ಕೋಡಿಕೆರೆ ಕೂಡ ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಈತ ಕೂಡ ರೌಡಿಶೀಟರ್‌ ಆಗಿದ್ದಾನೆ.

ಕೋಡಿಕೆರೆ ಮನೋಜ್‌ ನೇತೃತ್ವದ “ಕೋಡಿಕೆರೆ ಟೀಮ್‌’ ಎಂದು ಕರೆಯಲಾಗುವ ಗ್ಯಾಂಗ್‌ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದೆ. 2020ರ ಸೆಪ್ಟಂಬರ್‌ನಲ್ಲಿ ಹಿರಿಯಡಕದಲ್ಲಿ ರೌಡಿಶೀಟರ್‌ ಕಿಶನ್‌ ಹೆಗ್ಡೆ ಕೊಲೆ ಪ್ರಕರಣದಲ್ಲಿಯೂ ಮನೋಜ್‌ ಕೋಡಿಕೆರೆ ಪ್ರಮುಖ ಆರೋಪಿಯಾಗಿದ್ದ. ಈತನ ಜತೆ ಚೇತು ಪಡೀಲ್‌ ಸಹಿತ 5 ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ ಈ ತಂಡ ಸಕ್ರಿಯವಾಗಿದೆ. ಹಲ್ಲೆಗೊಳಗಾದ ಭರತ್‌ ಶೆಟ್ಟಿ ಕೂಡ ಈ ಹಿಂದೆ ಕೋಡಿಕೆರೆ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next