Advertisement

ಸುರತ್ಕಲ್‌ ಸೌಂದರ್ಯ ವೃದ್ಧಿಸಿದ ಅಭಿವೃದ್ಧಿ ಕಾರ್ಯ

10:26 AM Feb 24, 2018 | Team Udayavani |

ಸುರತ್ಕಲ್‌ : ಇಲ್ಲಿಯ ಫ್ಲೈ ಓವರ್‌ ತಳ ಭಾಗದಲ್ಲಿ ಅಲ್ಲಲ್ಲಿ ಇದ್ದ ಮಣ್ಣಿನ ರಾಶಿ ತೆರವಾಗಿ, ಸರ್ವಿಸ್‌ ರಸ್ತೆ ಬದಿ ಅರೆಬರೆಯಾಗಿದ್ದ ಕಾಮಗಾರಿ ಪೂರ್ಣಗೊಂಡಿದ್ದು, ಇತ್ತ ತಳಭಾಗದ ಉದ್ದಕ್ಕೂ ಇಂಟರ್‌ಲಾಕ್‌ ಅಳವಡಿಕೆ, ಫ‌ುಟ್‌ಪಾತ್‌ ನಿರ್ಮಾಣ, ಹಸುರು ಉದ್ಯಾನವನ ಸುರತ್ಕಲ್‌ನ ಸೌಂದರ್ಯವನ್ನು ಹೆಚ್ಚಿಸಿದೆ.

Advertisement

ಸುರತ್ಕಲ್‌ ನಾಗರಿಕ ಸಲಹ ಸಮಿತಿಯ ಕಾರ್ಯಯೋಜನೆಯ ನೇತೃತ್ವದಲ್ಲಿ ಇದೀಗ ಸುಮಾರು ಕಿ.ಮೀ. ಉದ್ದವಿರುವ ಫ್ಲೈ ಓವರ್‌ ತಳಭಾಗದಲ್ಲಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಕರ್ಣಾಟಕ ಬ್ಯಾಂಕ್‌ ಸಹಕಾರದಲ್ಲಿ ನಾಗರಿಕರಿಗೆ ಸಹಕಾರಿಯಾಗುವ ಫ‌ುಟ್‌ ಪಾತ್‌ ನಿರ್ಮಾಣ ಕಾಮಗಾರಿ ಮುಕ್ತಾಯವಾಗಿದೆ. ಇನ್ನು ಪ್ರತಿ ಸ್ಲ್ಯಾಬ್ ಕೆಳ ಭಾಗದಲ್ಲಿ ಲಯನ್ಸ್‌, ರೋಟರಿ, ಟೆಂಪೋ ಮತ್ತಿತರ ಸಂಘ-ಸಂಸ್ಥೆಗಳ ಸಹಕಾರ ದಿಂದ ಸ್ಲ್ಯಾಬ್ ಗಳು ವರ್ಣಮಯ ಚಿತ್ರಗಳಿಂದ ಕಂಗೊಳಿಸುತ್ತಿವೆ. ಕೆಳಭಾಗದಲ್ಲಿ ಗಾರ್ಡನ್‌, ಪರಿಸರ ಸಹ್ಯ ಕಲಾ ಚಿತ್ರಗಳು ಆಕರ್ಷಣೀಯವಾಗಿವೆ.

ಸಂತೆಯಿಂದ ಮಾಲಿನ್ಯ
ಪ್ರತಿ ರವಿವಾರ ಮತ್ತು ಬುಧವಾರ ಸುರತ್ಕಲ್‌ನಲ್ಲಿ ಸಂತೆ ನಡೆಯುತ್ತಿದ್ದು, ಸುರತ್ಕಲ್‌ ಮಾರುಕಟ್ಟೆ ಬಳಿ ಹಾಗೂ ಹೆದ್ದಾರಿ ಸಮೀಪ ಸಂತೆಯಾಗುತ್ತದೆ. ರಾತ್ರಿಯಾದೊಡನೆ ಅಳಿದುಳಿದ ತರಕಾರಿ ತ್ಯಾಜ್ಯಗಳು ಫ್ಲೈ ಓವರ್‌ ತಳ ಭಾಗ ಸೇರುತ್ತಿದ್ದವು. ಇದೀಗ ಇದಕ್ಕೆ ನಿಯಂತ್ರಣ ಹಾಕಲಾಗಿದ್ದು, ಫ‌ುಟ್‌ ಪಾತ್‌ ಹಾಗೂ ಗಾರ್ಡನ್‌ ಸುತ್ತಲೂ ತಡೆ ಬೇಲಿ ನಿರ್ಮಿಸಲಾಗಿದೆ. ಟೆಂಪೋ ಮತ್ತಿತರ ಆಯ್ದ ಬಾಡಿಗೆ ವಾಹನಗಳ ನಿಲುಗಡೆಗೆ ವ್ಯವಸ್ಥೆ ರೂಪಿಸಲಾಗಿದೆ.

ಕುಡಿಯುವ ನೀರು ವ್ಯವಸ್ಥೆ, ಗಾರ್ಡನ್‌ಗೆ ನೀರಿನ ವ್ಯವಸ್ಥೆ ಮಹಾನಗರ ಪಾಲಿಕೆಯಿಂದ ಪಡೆಯಲು ಆಯುಕ್ತರಿಗೆ ಈಗಾಗಲೇ ಮನವಿ ಮಾಡಲಾಗಿದೆ. ಇದೀಗ ಇದರ ನಿರ್ವಹಣೆ ಮಾಡಲು ಎಂಆರ್‌ಪಿಎಲ್‌ ಮುಂದೆ ಬಂದಿದೆ.

ಫೆ. 26: ಫ‌ುಟ್‌ ಪಾತ್‌ ಉದ್ಘಾಟನೆ
ಸ್ವಚ್ಛ ಸುರತ್ಕಲ್‌ ಅಂಗವಾಗಿ ನಾಗರಿಕ ಸಲಹಾ ಸಮಿತಿ ನೇತೃತ್ವದಲ್ಲಿ ದಾನಿಗಳ, ಸಂಘ-ಸಂಸ್ಥೆಗಳ ಕೊಡುಗೆಯಿಂದ ಕಾಮಗಾರಿ ತ್ವರಿತವಾಗಿ ಆಗುತ್ತಿದೆ. ಫೆ. 26ರಂದು ಬೆಳಗ್ಗೆ ಫ‌ುಟ್‌ಪಾತ್‌ ಉದ್ಘಾಟನೆಯಾಗಲಿದೆ. ಮಾ. 3ರಂದು ಫ್ಲೈ ಓವರ್‌ ತಳಭಾಗದ ಎಲ್ಲ ಕಾಮಗಾರಿಗಳ ಉದ್ಘಾಟನೆ ಮಾಡಲಾಗುತ್ತದೆ. ವಿದ್ಯುತ್‌, ನೀರಿನ ಸಂಪರ್ಕ ಒದಗಿಸಲು ಪಾಲಿಕೆ ಆಯುಕ್ತರು ಒಪ್ಪಿಗೆ ನೀಡಿದ್ದಾರೆ. ಇದರ ಬಳಿಕ ರಾಮಕೃಷ್ಣ ಮಿಷನ್‌ ಸಹಯೋಗದಲ್ಲಿ ಸ್ವಚ್ಛ ಸುರತ್ಕಲ್‌ ಯೋಜನೆ ರೂಪಿಸಿ ಸ್ವಚ್ಛ ಭಾರತ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
– ರಾಜ್‌ ಮೋಹನ್‌ ರಾವ್‌,
ಸಂಚಾಲಕರು,
ನಾಗರಿಕ ಸಲಹ ಸಮಿತಿ, ಸುರತ್ಕಲ್‌

Advertisement

ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next