Advertisement

ಎನ್‌ಐಟಿಕೆ ಟೋಲ್‌ಗೇಟ್‌ಗೆ ಮತ್ತೆ ಟೆಂಡರ್‌? ಟೋಲ್‌ ಮತ್ತಷ್ಟು ಹೆಚ್ಚಳ ಭೀತಿ

01:30 AM Mar 15, 2022 | Team Udayavani |

ಸುರತ್ಕಲ್‌: ತಾತ್ಕಾಲಿಕ ನೆಲೆಯಲ್ಲಿ ಆರಂಭಗೊಂಡಿದ್ದ ಸುರತ್ಕಲ್‌ ಎನ್‌ಐಟಿಕೆ ಬಳಿಯ ಟೋಲ್‌ಗೇಟನ್ನು ರದ್ದು ಮಾಡುವ ಭರವಸೆ ನೀಡಿ ವರ್ಷವಾದರೂ ಯಾವುದೇ ಕ್ರಮ ಕೈಗೊಳ್ಳದಿರುವ ಕಾರಣ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆಯೇ ಟೋಲ್‌ ಸಂಗ್ರಹಕ್ಕೆ ಟೆಂಡರ್‌ ನೀಡುವ ಪ್ರಕ್ರಿಯೆ ಎಪ್ರಿಲ್‌ನಲ್ಲಿ ಮತ್ತೆ ಆರಂಭವಾಗಲಿದೆ.

Advertisement

ಜನರ ತೀವ್ರ ವಿರೋಧದ ನಡುವೆ ಈ ಟೋಲ್‌ ಗೇಟ್‌ 2014ರಲ್ಲಿ ಆರಂಭವಾಗಿದ್ದು, ಇದುವರೆಗೆ ನಿರಂತರ ಪ್ರತಿಭಟನೆ ಎದುರಿಸಿದೆ. ಕನಿಷ್ಠ 60 ಕಿ.ಮೀ. ಅಂತರದ ನಡುವೆ ಟೋಲ್‌ಗೇಟ್‌ ಇರಬೇಕೆಂಬ ನಿಯಮ ಈ ಹಿಂದೆ ಇತ್ತು. ಇದೀಗ ಹೆದ್ದಾರಿ ಇಲಾಖೆಯೇ ಕಾಮಗಾರಿ ನಡೆದ ಸ್ಥಳ ಹಾಗೂ ವೆಚ್ಚದ ಅನ್ವಯ ಸುರತ್ಕಲ್‌ನಲ್ಲಿ ಟೋಲ್‌ಗೇಟ್‌ ನಿರ್ಮಾಣವಾಗಿದೆ ಎಂಬ ಮಾಹಿತಿಯ ಫ್ಲೆಕ್ಸ್‌ ಅಳವಡಿಸಿದೆ.

ವಸೂಲಿ ಮಾತ್ರ; ಸೌಲಭ್ಯಗಳಿಲ್ಲ !
ಇಲ್ಲಿನ ಟೋಲ್‌ಗೇಟ್‌ ಜನರಿಂದ ವಸೂಲಿಗೆ ಮಾತ್ರ ಎಂಬಂತಿದೆ. ಕನಿಷ್ಠ ಮೂಲಸೌಕರ್ಯಗಳಾದ ಶೌಚಾಲಯ
ವಾಗಲಿ, ವಾಹನ ಚಾಲಕರ ವಿಶ್ರಾಂತಿ ತಾಣವಾಗಲಿ, ವಾಹನಗಳ ಸಣ್ಣಪುಟ್ಟ ದುರಸ್ತಿಗೆ ಸ್ಥಳಾವಕಾಶವಾಗಲಿ ಇಲ್ಲಿಲ್ಲ. ಈಗಾಗಲೇ ಇಲ್ಲಿ ಟೋಲ್‌ ದುಬಾರಿಯಾಗಿದೆ. ಇದೀಗ ಕೂಳೂರಿನಲ್ಲಿ 66 ಕೋಟಿ ರೂ. ವೆಚ್ಚದಲ್ಲಿ ಸೇತುವೆ, ಕೆಪಿಟಿ ಬಳಿ 24 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಲಿದ್ದು ಮುಂದಿನ ದಿನಗಳಲ್ಲಿ ಶುಲ್ಕ ಏರಿಸುವ ಮೂಲಕ ವಾಹನ ಸವಾರರ ಮೇಲೆ ಇದರ ಹೊರೆಯನ್ನು ಹೇರುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.

ಇದನ್ನೂ ಓದಿ:ಅಗತ್ಯ ಇರುವ ಕಡೆ ಉಪ ನೋಂದಣಾಧಿಕಾರಿ ಕಚೇರಿ: ಅಶೋಕ್‌

ಪ್ರತಿಭಟನೆ ಮುಂದಕ್ಕೆ
ಮೂರು ಕಡೆಗಳಲ್ಲಿ ದುಬಾರಿ ಸುಂಕ ಪಾವತಿಸಿ ವಾಹನಗಳು ಹೋಗಬೇಕಾಗಿರುವುದರಿಂದ ಹೊರೆ ತಾಳಲಾರದೆ ಜನರ ಅಸಹನೆ ಹೆಚ್ಚುತ್ತಿದೆ. ಆಸೀಫ್‌ ನೇತೃತ್ವ ದಲ್ಲಿ ಇತ್ತೀಚೆಗೆ ಹಲವು ದಿನಗಳ ಕಾಲ ಅಹೋರಾತ್ರಿ ಹೋರಾಟ ನಡೆದಿತ್ತು. ಎನ್‌ಐಟಿಕೆ ಟೋಲ್‌ಗೇಟ್‌ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಹೆಜಮಾಡಿಯಿಂದ ಸುರತ್ಕಲ್‌ ಟೋಲ್‌ಗೇಟ್‌ ವರೆಗೆ ಮಾ. 15ರಂದು ಬೃಹತ್‌ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಹೇರಿರುವ ಕಾರಣ ಪಾದಯಾತ್ರೆಯನ್ನು ಮುಂದೂಡಲಾಗಿದೆ.

Advertisement

ನಳಿನ್‌ ಮನವಿ: ಗಡ್ಕರಿ ಸ್ಪಂದನೆ ಬಗ್ಗೆ ಕುತೂಹಲ
ದ.ಕ. ಜಿಲ್ಲೆಯಲ್ಲಿ ಹೆದ್ದಾರಿ ಕಾಮಗಾರಿಗಳ ಶಿಲಾನ್ಯಾಸಕ್ಕೆ ಬಂದಿದ್ದ ಕೇಂದ್ರ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರಲ್ಲಿ ಸುರತ್ಕಲ್‌ ಟೋಲ್‌ಗೇಟ್‌ ರದ್ದು ಮಾಡುವಂತೆ ಸಂಸದ ನಳಿನ್‌ ಕುಮಾರ್‌ ಕಟೀಲು ಬಹಿರಂಗವಾಗಿ ಮನವಿ ಮಾಡಿದ್ದರು. ಕೇಂದ್ರ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

 

Advertisement

Udayavani is now on Telegram. Click here to join our channel and stay updated with the latest news.

Next