ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಮುಕ್ಕ ಪಣಂಬೂರು, ಕೂಳೂರು ವ್ಯಾಪ್ತಿಯಲ್ಲಿ ಬೀದಿದೀಪ ಅಳವಡಿಸಿದ್ದರೂ ಸಮರ್ಪಕ ನಿರ್ವಹಣೆಯಿಲ್ಲದೆ ಸೊರಗುತ್ತಿದೆ.
ಮಳೆಗಾಲದ ಮುನ್ನ ಉರಿಯದ ಹಲವು ದೀಪಗಳು, ಈಗಲೂ ಇದೇ ಪರಿಸ್ಥಿತಿ ಮುಂದುವರಿದಿದೆ. ಮಳೆಗಾಲದಲ್ಲಿ ಹೆದ್ದಾರಿ ಬದಿ ದೀಪವಿಲ್ಲದೆ ವಾಹನ ಸವಾರರು ಓಡಾಡುವಂತಾಗಿತ್ತು.
ಹೆದ್ದಾರಿ ಕಾಮಗಾರಿ ಮುಗಿದು ಹಲವು ವರ್ಷಗಳೇ ಬೀದಿ ದೀಪ ಅಳವಡಿಕೆಗೆ ಸಮಯ ಹಿಡಿಯಿತು.
ನ್ಯೂ ಮಂಗಳೂರು ಪೋರ್ಟ್ ರೋಡ್ ಆಗಿದ್ದರಿಂದ ಎನ್‌ಎಂಪಿಎ ತನ್ನ ನಿಧಿಯಿಂದ ಸ್ವಲ್ಪ ಅನುದಾನ, ಮಹಾನಗರ ಪಾಲಿಕೆಯಿಂದ ಅನುದಾನ ಹೀಗೆ ವಿವಿಧ ಮೂಲಗಳಿಂದ ಬೀದಿ ದೀಪವನ್ನು ಕೊನೆಗೂ ಹಾಕಲಾಯಿತಾದರೂ ನಿರ್ವಹಣೆ ಇದೀಗ ಕಬ್ಬಿಣದ ಕಡಲೆಯಾಗಿದೆ. ಕೆಲವೆಡೆ ಎಲ್‌ಇಡಿ ಬಲ್ಬ್ ಉರಿಯುತ್ತಿಲ್ಲ. ಅಪಘಾತವಲಯವಾದ ಹೊಸಬೆಟ್ಟು ತಿರುವು, ಮುಕ್ಕ ತಡಂಬೈಲ್ ಮತ್ತಿತರೆಡೆ ದೀಪವೇ ಇಲ್ಲ. ಇನ್ನೊಂದೆಡೆ ಸರ್ವಿಸ್ ರಸ್ತೆಯಿಲ್ಲದೆ ಜನತೆ ಹೆದ್ದಾರಿ ಬದಿಯೇ ನಡೆದುಕೊಂಡು ಹೋಗುವ ಅನಿವಾರ್ಯ ಇರುವುದರಿಂದ ಬೀದಿ ದೀಪದ ಅಗತ್ಯವಿದೆ.
ಧರೆಗೆ ಉರುಳಿದ ಬೀದಿದೀಪಗಳ ಕಂಬ
ಈ ವ್ಯಾಪ್ತಿಯ ಹೆದ್ದಾರಿಯಲ್ಲಿ ಅಳವಡಿಸಿದ ಬೀದಿ ದೀಪಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿದ ಉದಾಹರಣೆಗಳಿಲ್ಲ. ಅಪಘಾತಕ್ಕೀಡಾಗಿ ಬೀದಿದೀಪಗಳ ಕಂಬ ತಡಂಬೈಲ್‌ನಲ್ಲಿ ಧರೆಗೆ ಉರುಳಿವೆ. ಹೊಸ ಕಂಬ ಎದ್ದು ನಿಂತಿಲ್ಲ. ಬೀದಿ ದೀಪದ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಆಗ್ರಹವಾಗಿದೆ.