ಅಹಮದಾಬಾದ್: ಋತುಮತಿ ಆಗಿದ್ದಾರೋ ಅಂತ ಪರೀಕ್ಷಿಸಲು ವಿದ್ಯಾರ್ಥಿನಿಯರ ಒಳ ಉಡುಪು ತೆಗೆಸಿ ಪರೀಕ್ಷಿಸಿದ ಘಟನೆ ನಡೆದ ಬೆನ್ನಲ್ಲೇ ಈಗ ಸೂರತ್ ಮಹಾನಗರ ಪಾಲಿಕೆಯ(ಎಸ್ ಎಂಸಿ) ತರಬೇತಿಯಲ್ಲಿರುವ ಮಹಿಳಾ ಕ್ಲರ್ಕ್ ಗಳನ್ನು ಆಸ್ಪತ್ರೆಯಲ್ಲಿ ನಗ್ನಗೊಳಿಸಿ ಮೆಡಿಕಲ್ ಟೆಸ್ಟ್ ನಡೆಸಿದ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಸೂರತ್ ನಲ್ಲಿ ಮಹಾನಗರ ಪಾಲಿಕೆಗೆ ಒಳಪಟ್ಟ ಆಸ್ಪತ್ರೆಯ ಸ್ತ್ರೀರೋಗ ತಪಾಸಣಾ ವಾರ್ಡ್ ನಲ್ಲಿ ಹತ್ತು ಮಂದಿ ಮಹಿಳಾ ಕ್ಲರ್ಕ್ ಗಳನ್ನು ನಗ್ನಗೊಳಿಸಿ ನಿಲ್ಲಿಸಿ ಪರೀಕ್ಷೆ ನಡೆಸಿರುವ ಪ್ರಕರಣದ ಬಗ್ಗೆ ಮುನ್ಸಿಪಲ್ ಕಮಿಷನರ್ ಬಾನ್ಛಾನಿಧಿ ಪಾನಿ ಆದೇಶ ಹೊರಡಿಸಿದ್ದಾರೆ ಎಂದು ವರದಿ ತಿಳಿಸಿದೆ.
ಅವಿವಾಹಿತರನ್ನೂ ಕೂಡಾ ಮಹಿಳಾ ವೈದ್ಯರುಗಳು ಗರ್ಭಿಣಿಯಾಗಿದ್ದಾರೋ ಇಲ್ಲವೋ ಎಂದು ಪರೀಕ್ಷಿಸಿರುವುದಾಗಿ ಎಸ್ ಎಂಸಿ ಉದ್ಯೋಗಿಗಳ ಒಕ್ಕೂಟ ಕಮೀಷನರ್ ಗೆ ನೀಡಿರುವ ದೂರಿನಲ್ಲಿ ತಿಳಿಸಿದೆ.
ಸೂರತ್ ಮುನ್ಸಿಪಲ್ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಅಂಡ್ ರಿಸರ್ಚ್ ಆಸ್ಪತ್ರೆಯಲ್ಲಿ ಫೆ.20ರಂದು ಈ ಘಟನೆ ನಡೆದಿದೆ. ದೂರಿನ ಆಧಾರದ ಮೇಲೆ ಕಮಿಷನರ್ ಮೂವರು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿ, ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ. ಅಲ್ಲದೇ 15 ದಿನದೊಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
Related Articles
ಮೆಡಿಕಲ್ ಕಾಲೇಜಿನ ಮಾಜಿ ಡೀನ್ ಡಾ.ಕಲ್ಪನಾ ದೇಸಾಯಿ, ಮುನ್ಸಿಪಲ್ ಸಹಾಯಕ ಕಮಿಷನರ್ ಗಾಯತ್ರಿ ಜಾರಿವಾಲಾ ಮತ್ತು ಎಕ್ಸಿಕ್ಯೂಟಿವ್ ತೃಪ್ತಿ ಕಾಲಾಥಿಯಾ ಅವರನ್ನೊಳಗೊಂಡ ಸಮಿತಿ ರಚಿಸಿದ್ದಾರೆ.
ಕಾನೂನು ಪ್ರಕಾರ, ಎಲ್ಲಾ ಟ್ರೈನಿ ಉದ್ಯೋಗಿಗಳು ದೈಹಿಕ ಪರೀಕ್ಷೆಗೆ ಒಳಪಡಬೇಕು. ಅವರು ತರಬೇತಿ ಸಮಯದಲ್ಲಿ ದೈಹಿಕವಾಗಿ ಆರೋಗ್ಯವಂತರಾಗಿದ್ದರೆ ಎಂಬುದನ್ನು ಪರೀಕ್ಷಿಸುತ್ತಾರೆ. ಮೂರು ವರ್ಷಗಳ ತರಬೇತಿ ಮುಕ್ತಾಯಗೊಂಡ ನಂತರ ಕೆಲವು ಮಹಿಳಾ ಟ್ರೈನಿ ಕ್ಲರ್ಕ್ ಗಳು ಆಸ್ಪತ್ರೆಗೆ ಮೆಡಿಕಲ್ ಟೆಸ್ಟ್ ಗೆ ಬರುವುದು ಕಡ್ಡಾಯ ಎಂದು ಅಧಿಕಾರಿ ತಿಳಿಸಿದ್ದಾರೆ.
ಕಡ್ಡಾಯ ಪರೀಕ್ಷೆಗೆ ನಮ್ಮ ವಿರೋಧವಿಲ್ಲ. ಆದರೆ ಮಹಿಳಾ ಸಿಬ್ಬಂದಿಗಳನ್ನು ಸ್ತ್ರೀರೋಗ ಪರೀಕ್ಷಾ ಕೊಠಡಿಯಲ್ಲಿ ನಡೆಸಿಕೊಂಡ ರೀತಿ ಸರಿಯಲ್ಲ. ಒಬ್ಬರ ನಂತರ ಒಬ್ಬರನ್ನು ಪರೀಕ್ಷಿಸಲಿ. ಇಲ್ಲಿ ಎಲ್ಲಾ ಹತ್ತು ಮಂದಿ ಯುವತಿಯರನ್ನು ಒಟ್ಟಿಗೆ ನಗ್ನಗೊಳಿಸಿ ನಿಲ್ಲಿಸಿ ಪರೀಕ್ಷೆ ನಡೆಸಿದ್ದು ತಪ್ಪು ಎಂದು ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ ಎಂದು ವರದಿ ತಿಳಿಸಿದೆ.