Advertisement

ಬದುಕು ಬದಲಿಸಿತೇ ರೈಲು ಮಾರ್ಗ?

04:02 PM Dec 04, 2019 | Naveen |

„ಸಿದ್ದಯ್ಯ ಪಾಟೀಲ
ಸುರಪುರ:
ಗಿರಿಭಾಗದ ಜನರ ಬಹುದಿನದ ಕನಸಾದ ವಾಡಿ ಗದಗ-ರೈಲು ಮಾರ್ಗ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಚಾಲನೆ ನೀಡಿದ್ದು, ಶಹಾಪುರ ತಾಲೂಕಿನಲ್ಲಿ ಈಗಾಗಲೇ ಕಾಮಗಾರಿ ಆರಂಭವಾಗಿದೆ. ಸುರಪುರ ತಾಲೂಕಿನಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡರೆ ಇಲ್ಲಿನ ಜನರ ಬದುಕು ಬದಲಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ.

Advertisement

ವಾಡಿ-ಗದಗ ರೈಲು ಮಾರ್ಗದ ಭೂಸ್ವಾಧೀನ ಕಾರ್ಯ ಭರದಿಂದ ಸಾಗಿದ್ದು, ಅಧಿಕಾರಿಗಳು ರೈಲು ಮಾರ್ಗಕ್ಕೆ ಭೂಮಿ ಕಳೆದುಕೊಳ್ಳುತ್ತಿರುವ ರೈತರೊಂದಿಗೆ ಸಭೆ ನಡೆಸಿದ್ದಾರೆ. ಶಹಾಪುರ, ಸುರಪುರ ಭಾಗದ ಬಹುತೇಕ ರೈತರು ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಭೂ ಸ್ವಾಧೀನ: ಶಹಾಪುರ ತಾಲೂಕಿನಲ್ಲಿ 500 ಎಕರೆ, ಸುರಪುರ ತಾಲೂಕಿನಲ್ಲಿ 451 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿದೆ. ಸುರಪುರ ತಾಲೂಕಿನಲ್ಲಿ ಎಸ್‌. ಎಚ್‌. ಖಾನಪುರ ಹಾಗೂ ದೇವಪುರದ ಕೆಲ ರೈತರು ಸರಕಾರ ನಿಗದಿ ಮಾಡಿದ ಬೆಲೆಗಿಂತ ಇನ್ನೂ ಹೆಚ್ಚಿನ ದರ ನೀಡಬೇಕು ಎಂದು ಒತ್ತಾಯಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹೀಗಾಗಿ ತಾಲೂಕಿನಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತದೆ.

ದರ ನಿಗದಿ: ಈಗಾಗಲೇ ತಾಲೂಕು ಹಾಗೂ ಹೋಬಳಿವಾರು ಪ್ರತಿ ಎಕರೆಗೆ ಆಯಾ ಭಾಗದ ಕಂದಾಯ ಇಲಾಖೆ ನಿಗದಿಪಡಿಸಿದ ಜಮೀನುಗಳ ಮೌಲ್ಯಕ್ಕೆ ಅನುಗುಣವಾಗಿ ನಾಲ್ಕು ಪಟ್ಟು ಸೇರಿಸಿ ದರ ನಿಗದಿಪಡಿಸಿ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಸುರಪುರ ತಾಲೂಕಿನಲ್ಲಿ ಎಕರೆಗೆ 12ರಿಂದ 18 ಲಕ್ಷ ರೂ. ವರೆಗೆ ಬೆಲೆ ನಿಗದಿಪಡಿಸಿ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ.

ಬೆಲೆಯಲ್ಲಿ ಭಿನ್ನತೆ: ಭೂಸ್ವಾಧೀನ ಮಾಡಿಕೊಂಡಿರುವ ಜಮೀನಿನ ಬೆಲೆ ನಿಗದಿ ಒಂದೇ ರೀತಿಯಾಗಿಲ್ಲ. ತಾಲೂಕಿನಿಂದ ತಾಲೂಕಿಗೆ, ಪ್ರದೇಶದಿಂದ ಪ್ರದೇಶಕ್ಕೆ, ಹೋಬಳಿಯಿಂದ ಹೋಬಳಿಗೆ ಬೆಲೆಯಲ್ಲಿ ಭಿನ್ನತೆಯಿದೆ. ನೀರಾವರಿ ಮತ್ತು ಖುಷ್ಕಿ ಭೂಮಿ ವಿಂಗಡಿಸಲಾಗಿದೆ. ನೀರಾವರಿಯಲ್ಲಿ ಭಾಗಾಯತ(ತೆರದಬಾವಿ-ಕೊಳವೆಬಾವಿ) ಮತ್ತು ತರಿ(ನೀರಾವರಿ) ಎಂದು ವಿಭಜಿಸಲಾಗಿದೆ.

Advertisement

ತೆರದ ಬಾವಿ, ಕೊಳವೆ ಬಾವಿ ಮೂಲಕ ಬೆಳೆಯಬಹುದಾದ ತೋಟಗಾರಿಕೆ, ತರಕಾರಿ ಬೆಳೆಯನ್ನು ಭಾಗಾಯತದಲ್ಲಿ ಸೇರ್ಪಡ ಮಾಡಿಲಾಗಿದೆ. ವಾಣಿಜ್ಯ ಬೆಳೆ ಬೆಳೆಯುವ ಜಮೀನುಗಳನ್ನು (ತರಿ) ನೀರಾವರಿ ಎಂದು ಗುರುತಿಸಲಾಗಿದೆ. ಭಾಗಾಯತಕ್ಕೆ ಎಕರೆಗೆ 16 ಲಕ್ಷ ರೂ. ಮತ್ತು ತರಿ ಭೂಮಿಗೆ 17 ಲಕ್ಷ ರೂ. ಬೆಲೆ ನಿಗದಿಯಾಗಿದೆ.

ಹಾದು ಹೋಗುವ ಮಾರ್ಗ: ಕಲಬುರಿಗಿ ಜಿಲ್ಲೆ ಚಿತ್ತಾಪುರ ತಾಲೂಕು ವಾಡಿಯಿಂದ ಆರಂಭವಾಗುವ ಮಾರ್ಗ ನರಬೋಳಿ, ಬುರ್ಜಗಿ ಮೂಲಕ ಯಾದಗಿರಿ ಜಿಲ್ಲೆ ಶಹಾಪುರದ ಅಣಬಿ, ಶಿರವಾಳ ಮಡ್ನಾಳ, ಬೆನಕನಳ್ಳಿ, ಕನ್ಯಾಕೋಳೂರ, ತಿಪ್ಪನಳ್ಳಿ, ವಿಭೂತಳ್ಳಿ, ರಸ್ತಾಪುರ, ಮಂಡಗಳ್ಳಿ, ಬಿಜಾಸ್ಪೂರ, ಲಕ್ಷ್ಮೀಪುರ, (ಅರಕೇರಾ.ಕೆ) ಸತ್ಯಂಪೇಟ (ವಣಕ್ಯಾಳ), ರುಕ್ಮಾಪುರ (ಎಸ್‌ಎಚ್‌ ಖಾನಾಪುರ), ಗುಡ್ಯಾಳ ಜೆ., ದೇವಾಪುರ, ಕಕ್ಕೇರಾ, ಗುಡುಗುಂಟಿ, ಲಿಂಗಸುಗೂರು,
ಬನ್ನಿಗೋಳ, ಲಿಂಗನಬಂಡಿ, ಯಲಬುರ್ಗ, ಕುಕನೂರ ಮಾರ್ಗವಾಗಿ ಗದಗ ತಲುಪಲಿದೆ.

ಕಾಮಗಾರಿ ಆರಂಭ: ಗದಗ-ವಾಡಿಯಿಂದ ಈಗಾಗಲೇ ಕಾಮಗಾರಿ ಆರಂಭವಾಗಿದೆ. ಗದುಗ ಮತ್ತು ಕುಷ್ಟಗಿ ಭಾಗದಲ್ಲಿ ಕಾಮಗಾರಿ ಮುಗಿದ್ದಿದ್ದು, ಇತ್ತ ವಾಡಿಯಿಂದ ಶಹಾಪುರ ತಾಲೂಕಿನ ಬೆನಕನಹಳ್ಳಿ ವರೆಗೆ ನಡೆದಿದೆ. ಸುರಪುರ ತಾಲೂಕಿನಲ್ಲಿ ಬೆಲೆ ನಿಗದಿ ಹೆಚ್ಚಳಕ್ಕೆ ಆಕ್ಷೇಪಣೆ ಸಲ್ಲಿಸಿದ್ದರಿಂದ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದೆ. ಇದರಿಂದ ಕಾಮಗಾರಿ ಪ್ರಕ್ರಿಯೆಗೆ ಹಿನ್ನಡೆಯಾಗಿದೆ.

ಸುರಪುರ ಬಳಿ ನಿಲ್ದಾಣ: ತಾಲೂಕಿನ ರುಕ್ಮಾಪುರ -ಸತ್ಯಂಪೇಟ ಹತ್ತಿರ ರೈಲು ನಿಲ್ದಾಣ ನಿರ್ಮಿಸಲಾಗುತ್ತದೆ. ನಿಲ್ದಾಣ ನಿರ್ಮಾಣದಿಂದ ಈ ಭಾಗದಲ್ಲಿ ಉದ್ಯೋಗ ಅವಕಾಶ ಸೃಷ್ಠಿಯಾಗುವ ಸಾಧ್ಯತೆಯಿದೆ. ವ್ಯಾಪಾರ-ವಹಿವಾಟುಗಳು ಮುನ್ನಲೆಗೆ ಬರಲಿದ್ದು, ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ. ಈ ನಿಲ್ದಾಣದಿಂದ ಬೇರೆಡೆ ಕಡಿಮೆ ದರದಲ್ಲೇ ಹೋಗಲು ಸಾಧ್ಯವಾಗುತ್ತದೆ.

ವಿಪುಲ ಅವಕಾಶ: ರೈಲು ಮಾರ್ಗ ಅನುಷ್ಠಾನದಿಂದ ಈ ಭಾಗ ಅಭಿವೃದ್ಧಿಯಾಗಲಿದೆ. ಉದ್ಯೋಗ ಅವಕಾಶಗಳು ಸೃಷ್ಠಿಯಾಗುತ್ತವೆ. ರೈಲು ಸಂಚಾರದಿಂದ ಈ ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿ ಔದ್ಯೋಗೀಕರಣಕ್ಕೆ ನಾಂದಿಯಾಗುತ್ತದೆ. ಕಾರ್ಖಾನೆಗಳು ತಲೆ ಎತ್ತಿದರೆ ಜನರಿಗೆ ಉದ್ಯೋಗಗಳು ಸಿಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next