Advertisement

ಅಭಿವೃದ್ಧಿಗೆ ವಿರೋಧವಿಲ್ಲ : ರಾಜುಗೌಡ

01:23 PM Jan 12, 2020 | Naveen |

ಸುರಪುರ: ರಂಗಂಪೇಟೆ-ತಿಮ್ಮಾಪುರ ರಸ್ತೆ ಅಗಲೀಕರಣಕ್ಕೆ ನನ್ನ ವಿರೋಧವಿಲ್ಲ. ಆದರೆ ಅಲ್ಲಿಯ ನಿವಾಸಿಗಳ ಹಿತ ಗಮನದಲ್ಲಿಟ್ಟುಕೊಂಡು ರಸ್ತೆ ಅಗಲೀಕರಣ ಮಾಡಲು ಸೂಚಿಸಿದ್ದೇನೆ. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದು, ಸಾಧ್ಯವಾದಷ್ಟು ಅಗಲೀಕರಣ ಪ್ರಮಾಣ ಕಡಿಮೆ ಮಾಡಿಸಲು ಪ್ರಯತ್ನಿಸುವುದಾಗಿ ಶಾಸಕ ನರಸಿಂಹನಾಯಕ (ರಾಜುಗೌಡ) ಹೇಳಿದರು.

Advertisement

ನಗರದ ತಮ್ಮ ನಿವಾಸದ ಬಿಜೆಪಿ ಕಚೇರಿಯಲ್ಲಿ ಶನಿವಾರ ರಸ್ತೆ ಅಗಲೀಕರಣ ನಿಮಿತ್ತ ಕರೆಯಲಾಗಿದ್ದ ರಂಗಂಪೇಟೆ-ತಿಮ್ಮಾಪುರ ಸಾರ್ವಜನಿಕರ ಸಭೆಯಲ್ಲಿ ಅವರು ಮಾತನಾಡಿದರು.

ಅಭಿವೃದ್ಧಿಯೇ ಮುಖ್ಯ: ರಸ್ತೆ ಅಗಲೀಕರಣ ಕಾರ್ಯದಲ್ಲಿ ಶಾಸಕರು ವಿಳಂಬ ಮಾಡುತ್ತಿದ್ದಾರೆ. ಅಭಿವೃದ್ಧಿಗೆ ವಿರೋಧಿ ಸುತ್ತಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ನನಗೆ ತಾಲೂಕು ಅಭಿವೃದ್ಧಿ ಮುಖ್ಯ ಹೊರತು ಬೇರೇನು ಅಲ್ಲ ಎಂದರು.

ರಸ್ತೆ ಅಗಲೀಕರಣದಲ್ಲಿ ಶಾಸಕರಿಗೆ ಆಸಕ್ತಿಯಿಲ್ಲ ಎಂದು ರಂಗಂಪೇಟೆ ಕೆಲವರು ವಿಭಾಗೀಯ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ರಸ್ತೆ ಅಗಲೀಕರಣಕ್ಕೆ ಒಳಪಡದವರಿಂದ ಏನೇನೋ ಹೇಳಿಕೆ ಬರುತ್ತಿವೆ. ಮನೆ ಕಳೆದುಕೊಳ್ಳುವವರ ನೋವು ಆರೋಪಿಸುವವರಿಗೇನು ಗೊತ್ತು. ಕಷ್ಟ ಎದುರಿಸುವವರು ಮುಖ್ಯ; ಹೊರತು ಆರೋಪಿಸುವವರು ಮುಖ್ಯವಲ್ಲ. ಸಾಧ್ಯವಾದಷ್ಟು ಕಡಿಮೆ ಮಾಡಿಸಿಕೊಡುವುದಾಗಿ ತಿಳಿಸಿದರು.

ಶಾಸಕರಲ್ಲಿ ಮನವಿ: ರಸ್ತೆ ಅಗಲೀಕರಣಕ್ಕೆ ನಮ್ಮ ಸ್ವಾಗತವಿದೆ. 46 ಅಡಿ ಹೆಚ್ಚಾಗುತ್ತದೆ. ದೊಡ್ಡ ವ್ಯಾಪಾರ- ವಹಿವಾಟು ಇಲ್ಲ. ಕಿರಾಣಿ ಅಂಗಡಿ ಬಿಟ್ಟರೆ ಇಲ್ಲಿ ಏನೊಂದು ಇಲ್ಲ. ಶಾಲಾ ಬಸ್‌ಗಳ ಸಂಚಾರ
ಬಿಟ್ಟರೆ ದೊಡ್ಡ ವಾಹನಗಳು ಬರುವುದಿಲ್ಲ. ಕಾರಣ 36 ಅಡಿ ಅಗಲೀಕರಣ ಸಾಕು ಎಂದು ಶಾಸಕರನ್ನು ಸಾರ್ವಜನಿಕರು ಮನವಿ ಮಾಡಿದರು.

Advertisement

ಅಗಲೀಕರಣ ಕಡಿಮೆ ಮಾಡಲು ಚಿಂತನೆ: 46 ಅಡಿಗಿಂತ ಕಡಿಮೆ ಮಾಡಲು ಡಿಸಿ ಒಪ್ಪುತ್ತಿಲ್ಲ ಕಾನೂನು ಪ್ರಕಾರ ಈಗಾಗಲೇ ಆದೇಶ ಜಾರಿಯಾಗಿದೆ. ಮಾನವೀಯತೆ ದೃಷ್ಟಿಯಲ್ಲಿ ರಸ್ತೆ ಅಗಲೀಕರಣ ಕಡಿಮೆಗೆ ಚಿಂತಿಸಲಾಗುತ್ತಿದೆ. ಅಗಲೀಕರಣದಿಂದ ಎಷ್ಟು ನಷ್ಟ ಉಂಟಾಗುತ್ತದೆ ಎಂಬುದನ್ನು ಗಮನಿಸಲಾಗುತ್ತಿದೆ. ಸಂಪೂರ್ಣ ಮನೆ ಕಳೆದುಕೊಳ್ಳುವ ಬಡವರಿಗೆ ವಸತಿ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಡಲಾಗುವುದು.

ಅಗಲೀಕರಣದ ಗುರುತು ರೇಖೆ ಸರಿಯಾಗಿಲ್ಲ. ಮತ್ತೂಮ್ಮೆ ಗುರತು ಹಾಕಲು ಪೌರಾಯುಕ್ತರಿಗೆ ಸೂಚಿಸಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಚಿದಾನಂದ ಸ್ವಾಮಿ, ರುದ್ರಸ್ವಾಮಿ ಮಠ, ಮಾನಪ್ಪ ನಾಲ್ವಾರ, ಈರಣ್ಣ ಗೂಡೂರು, ಸುಧೀರ ವಿಭೂತೆ, ಬಾಬುಸಾಬ ಅಗ್ರಹಾರ, ಗೋಪಾಲ ಕಿಡಕಿ, ಸುನೀಲ ನಾಯಕ ದಾಸೆ, ಪ್ರದೀಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next