ಸುರಪುರ: ಇಲ್ಲಿಯ ಬಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 16 ಜನ ಸಾರಿಗೆ ಸಿಬ್ಬಂದಿಗೆ ಕೊವೀಡ್ ಸೋಂಕು ದೃಢಪಟ್ಟಿದ್ದು, ಶನಿವಾರ ಸಂಜೆಯಿಂದ ಬಸ್ ಘಟಕ ಶೀಲ್‌ಡೌನ್ ಮಾಡಲಾಗಿದೆ ಎಂದು ತಹಶೀಲ್ದಾರ್ ನಿಂಗಣ್ಣ ಬಿರಾದಾರ ತಿಳಿಸಿದ್ದಾರೆ.
ಶುಕ್ರವಾರವೇ ಶೀಲ್‌ಡೌನ್ ಮಾಡಬೇಕಿತ್ತು. ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದಿರುವುದರಿಂದ ಶನಿವಾರ ಶೀಲ್‌ಡೌನ್ ಮಾಡಲಾಗಿದೆ. ಮುಂದಿನ ಆದೇಶದವರೆಗೆ ಘಟಕದಿಂದ ಯಾವುದೇ ಬಸ್ ಕಾರ್ಯಾಚರಿಸುವುದಿಲ್ಲ. ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಮೊದಲು ಘಟಕದಲ್ಲಿ 8 ಜನರಿಗೆ ಕೋವಿಡ್ ವಕ್ಕರಿಸಿತ್ತು. ಇವರ ಪ್ರಾಥಮಿಕ ಸಂಪರ್ಕದಿಂದ ಮತ್ತೆ 8 ಜನರಿಗೆ ಸೋಂಕು ತಗುಲಿದ್ದು, ಇದುವರೆಗೆ ಒಟ್ಟು 16 ಜನರಿಗೆ ಸೋಂಕು ದೃಢಪಟ್ಟಿದೆ. ಎಲ್ಲ ಸೋಂಕಿತರನ್ನು ನಿಷ್ಠಿ ಕಾಲೇಜಿನ ಐಸೋಲೇಷನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾರಿಗೆ ಘಟಕದ ಉಳಿದ 40ರಿಂದ 50 ಜನ ಸಿಬ್ಬಂದಿ ವರದಿ ನಗೆಟಿವ್ ಬಂದಿದ್ದು, ಅವರೆಲ್ಲರಿಗೂ ಹೋಂ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಆರ್.ವಿ. ನಾಯಕ ತಿಳಿಸಿದ್ದಾರೆ.
ತಹಶೀಲ್ದಾರ್ ಆದೇಶದ ಹಿನ್ನೆಲೆಯಲ್ಲಿ ಘಟಕಕ್ಕೆ ಬೀಗ ಹಾಕಲಾಗಿದೆ. ಘಟಕದ ಒಳಹೋಗುವ ದ್ವಾರದ ರಸ್ತೆ ಅಗೆಯಲಾಗಿದ್ದು ಘಟಕದ ಸುತ್ತಲೂ ಮುಳ್ಳು ಬೇಲಿ ಹಾಕಲಾಗಿದೆ ಎಂದು ಪೌರಾಯುಕ್ತ ಜೀವನಕುಮಾರ ತಿಳಿಸಿದ್ದಾರೆ. ಕೇವಲ ಸುರಪುರ ಘಟಕ ಒಂದೇ ಶೀಲ್ ಡೌನ್ ಮಾಡಿದರೆ ಸಾಲದು, ಇಡೀ ಸಾರಿಗೆ ಸಂಚಾರವನ್ನೇ ನಿಷೇಧಿಸಿ ಇನ್ನಷ್ಟು ದಿನ ಲಾಕ್ ಡೌನ್ ಮಾಡಿದರೆ ಒಳ್ಳೆಯದು. ಈ ಕುರಿತು ರಾಜ್ಯ ಸರಕಾರ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ದಲಿತ ಸಂಘಟನೆ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಒತ್ತಾಯಿಸಿದ್ದಾರೆ.