Advertisement

ಅಯೋಧ್ಯೆ ವಿವಾದ: ಸಂಧಾನಕ್ಕೆ ಸುಪ್ರೀಂ ಕೋರ್ಟ್‌ ಸಲಹೆ

03:50 AM Mar 22, 2017 | Team Udayavani |

ನವದೆಹಲಿ/ಲಕ್ನೋ: ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಮುಖ್ಯ ಭೂಮಿಕೆ ವಹಿಸಿರುವ ಅಯೋಧ್ಯೆ ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥ ಮಾಡುವ ಬಗ್ಗೆ ಸುಪ್ರೀಂಕೋರ್ಟು ಮಂಗಳವಾರ ಸಲಹೆ ಮಾಡಿದೆ. ಇದೊಂದು ಭಾವನಾತ್ಮಕ ಮತ್ತು ಸೂಕ್ಷ್ಮ ವಿಚಾರವಾದ್ದರಿಂದ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಮಾತುಕತೆ ಮೂಲಕ ಪರಿಹರಿಸಿಕೊಳ್ಳಿ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್‌.ಖೆಹರ್‌ ನೇತೃತ್ವದ ನ್ಯಾಯಪೀಠ ಸಲಹೆ ಮಾಡಿದೆ. ಒಂದು ಹಂತದಲ್ಲಿ ನ್ಯಾ.ಖೆಹರ್‌ ಅವರು ಅಗತ್ಯ ಬಿದ್ದರೆ ತಾವೇ ವೈಯಕ್ತಿಕವಾಗಿ ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿದ ಪ್ರಸಂಗವೂ ನಡೆಯಿತು. ಈ ಬಗ್ಗೆ ಎರಡೂ ಸಮುದಾಯವರು ಮಾ.31ರ ಒಳಗಾಗಿ ನಿರ್ಧಾರ ತಿಳಿಸಬೇಕೆಂದು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠ ಹೇಳಿದೆ.  ಬಿಜೆಪಿ ಮತ್ತು ಕಾಂಗೆ‌Åಸ್‌ ಈ ಸಲಹೆಯನ್ನು ಸ್ವಾಗತಿಸಿದ್ದರೆ, ಮುಸ್ಲಿಂ ಸಂಘಟನೆಗಳು ಮುಖ್ಯ ನ್ಯಾಯಮೂರ್ತಿಗಳ ಸಲಹೆಗೆ ಉತ್ಸಾಹ ತೋರಿಸಿಲ್ಲ.

Advertisement

ಬಿಜೆಪಿ ನಾಯಕ ಡಾ.ಸುಬ್ರಹ್ಮಣ್ಯನ್‌ ಸ್ವಾಮಿ ದೇಗುಲಕ್ಕೆ ಸಂಬಂಧಿಸಿದಂತೆ ತ್ವರಿತವಾಗಿ ವಿಚಾರಣೆ ನಡೆಸಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಆರು ವರ್ಷಗಳಿಂದ ಈ ವಿಚಾರಕ್ಕೆ ಸಂಬಂಧಿಸಿದ ನ್ಯಾಯಾಂಗ ವಿಚಾರಣೆ ತೆವಳುತ್ತಾ ಸಾಗಿದೆ. ಹೀಗಾಗಿ ತ್ವರಿತವಾಗಿ ಅರ್ಜಿಯ ವಿಚಾರಣೆಯಾಗಬೇಕೆಂದು ಪ್ರತಿಪಾದಿಸಿದರು. ಅದಕ್ಕೆ ಉತ್ತರಿಸಿದ ನ್ಯಾಯಪೀಠ “ಇಂಥ ವಿಚಾರಗಳನ್ನು ಬಗೆ ಹರಿಸಲು ಹೊಸತಾಗಿ ಪ್ರಯತ್ನಗಳನ್ನು ನಡೆಸಬೇಕು. ಅಗತ್ಯಬಿದ್ದರೆ ಉಭಯ ಪಕ್ಷಗಳೂ ಮಧ್ಯವರ್ತಿಯೊಬ್ಬರನ್ನು ನೇಮಿಸಿಕೊಳ್ಳಿ. ಏಕೆಂದರೆ ಅದರಲ್ಲಿ ಧಾರ್ಮಿಕ ಮತ್ತು ಸೂಕ್ಷ್ಮ ವಿಚಾರಗಳು ಒಳಗೊಂಡಿರುತ್ತವೆ’ ಎಂದು ಹೇಳಿತು.

ಮಾರ್ಚ್‌ 31 ಡೆಡ್‌ಲೈನ್‌!: ಸಂಧಾನ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಬಗ್ಗೆ ಎರಡೂ ಧರ್ಮಗಳ ಮುಖಂಡರನ್ನು ಸಂಪರ್ಕಿಸಿ ಮಾತುಕತೆ ನಡೆಸಿ. ರಾಜಕೀಯ ಪಕ್ಷಗಳೂ ನ್ಯಾಯಪೀಠ ನೀಡುತ್ತಿರುವ ಸಲಹೆ ಒಪ್ಪುವುದಾದರೆ, ಈ ಕುರಿತ ನಿರ್ಧಾರವನ್ನು ಮಾರ್ಚ್‌ 31ರಂದು ನಡೆಯಲಿರುವ ವಿಚಾರಣೆಯ ವೇಳೆಯಲ್ಲಿ ಉಲ್ಲೇಖೀಸಿ. ಈ ಬಗ್ಗೆ ಮಾಹಿತಿ ಒದಗಿಸಿ ಎಂದು ಅರ್ಜಿದಾರ ಸುಬ್ರಮಣಿಯನ್‌ ಸ್ವಾಮಿಗೆ ಸೂಚನೆ ನೀಡಿದೆ.

ಸರ್ಕಾರದ್ದೂ ಇದೇ ಅಭಿಮತ: ಸುಪ್ರೀಂಕೋರ್ಟು ಸಲಹೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಕಾನೂನು ಮತ್ತು ನ್ಯಾಯ ಖಾತೆ ಸಹಾಯಕ ಸಚಿವ ಪಿ.ಪಿ.ಚೌಧರಿ, ಕೇಂದ್ರ ಸರ್ಕಾರದ್ದೂ ಮಾತುಕತೆ ಮೂಲಕವೇ ವಿವಾದ ಪರಿಹಾರ ಮಾಡುವುದೇ ಆಗಿದೆ ಎಂದಿದ್ದಾರೆ. ಕೇಂದ್ರ ಸಂಸ್ಕೃತಿ ಖಾತೆ ಸಚಿವ ಮಹೇಶ್‌ ಶರ್ಮಾ ಮಾತನಾಡಿ ಇದೊಂದು ದೊಡ್ಡ ಹೆಜ್ಜೆ ಎಂದಿದ್ದಾರೆ.

ಮುಸ್ಲಿಂ ಸಂಘಟನೆಗಳ ನಿರುತ್ಸಾಹ: ಮುಖ್ಯ ನ್ಯಾಯಮೂರ್ತಿ ನೀಡಿದ ಸಲಹೆಗೆ ಮುಸ್ಲಿಂ ಸಂಘಟನೆಗಳು ನಿರುತ್ಸಾಹ ತೋರಿವೆ. ಮುಖ್ಯ ನ್ಯಾಯಮೂರ್ತಿಗಳು ಮಧ್ಯಸ್ತಿಕೆ ವಹಿಸುವ ಬಗ್ಗೆ ಮುಂದಾಗಿದ್ದು ಸಂತೋಷವೇ. ಅವರು ಈ ಬಗ್ಗೆ ಯಾರನ್ನಾದರೂ ನೇಮಿಸಿದರೆ ಸಂತೋಷ. ಕೋರ್ಟಿನ ಹೊರಗೆ ಈ ವಿಚಾರದ ಪರಿಹಾರ ಅಸಾಧ್ಯ. ಈ ಬಗ್ಗೆ ಸುಪ್ರೀಂಕೋರ್ಟು ಆದೇಶ ನೀಡಿದಲ್ಲಿ ಅದನ್ನು ಪರಿಗಣಿಸುವುದಾಗಿ ಬಾಬರಿ ಮಸೀದಿ ಕ್ರಿಯಾ ಸಮಿತಿಯ ಸಂಚಾಲಕ ಝಫ‌ರಿಯಾಬ್‌ ಜಿಲಾನಿ ತಿಳಿಸಿದ್ದಾರೆ.

Advertisement

ಹಿಂದಿನ ಮೂರು ದಶಕಗಳಲ್ಲಿ ಇಂಥ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿಲ್ಲ. 1986ರಲ್ಲಿ ಕಾಂಚಿ ಕಾಮಕೋಟಿ ಸ್ವಾಮಿ ಮತ್ತು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಡುವೆ ಮಾತುಕತೆ ನಡೆದರೂ ವಿಫ‌ಲವಾಯಿತು. 1990ರಲ್ಲಿಯೂ ಇದೇ ವಿಚಾರ ಪುನರಾವರ್ತನೆಯಾಯಿತು ಎಂದಿದ್ದಾರೆ ಅವರು.

26ರಿಂದ ವಿಎಚ್‌ಪಿ ರಾಮ ಮಹೋತ್ಸವ  
ಉತ್ತರ ಪ್ರದೇಶ ಸಿಎಂ ಆಗಿ ಯೋಗಿ ಆದಿತ್ಯನಾಥ್‌ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ “ರಾಮ್‌ ಮಹೋತ್ಸವ್‌’ ಹೆಸರಿನಲ್ಲಿ ಅಭಿಯಾನಕ್ಕೆ ಚಾಲನೆ ನೀಡಲು ವಿಶ್ವ ಹಿಂದೂ ಪರಿಷತ್‌ ಸಿದ್ಧತೆ ನಡೆಸಿದೆ. ಮಾರ್ಚ್‌ 26ರಿಂದ ಏಪ್ರಿಲ್‌ 16ರ ತನಕ ಈ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದೆ. ಹಿಂದು ಸಂಪ್ರದಾಯದ ಪ್ರಕಾರ ಮಾರ್ಚ್‌ 28ರಿಂದ ಹೊಸ ವರ್ಷ ಆರಂಭಗೊಳ್ಳಲಿದೆ. ಇದಕ್ಕೂ ಎರಡು ದಿನ ಮೊದಲು ಈ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. 

ವಿವಾದ ಶೀಘ್ರ ಮುಕ್ತಾಯವಾಗಲಿ
ರಾಮಮಂದಿರ – ಬಾಬ್ರಿ ಮಸೀದಿ ವಿವಾದ ಶೀಘ್ರ ಇತ್ಯರ್ಥಗೊಳ್ಳಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್‌) ಹೇಳಿದೆ. ಮಾತುಕತೆಯ ಮೂಲಕ ಇತ್ಯರ್ಥಪಡಿಸಿಕೊಳ್ಳಬೇಕೆಂದು ಸುಪ್ರೀಂ ಕೋರ್ಟ್‌ ನೀಡಿರುವ ಸಲಹೆಯನ್ನು ಬೆಂಬಲಿಸು ತ್ತೇವೆ. ಧರ್ಮ ಸಂಸತ್‌ನಲ್ಲಿ ಬಗೆಹರಿಸಿಕೊಳ್ಳುವ ನಿರ್ಧಾರಕ್ಕೆ ಬಂದರೆ ಅದು ಸ್ವಾಗತಾರ್ಹ. ಆರೆಸ್ಸೆಸ್‌ ಇದನ್ನು ನಿರ್ಧರಿಸುವುದಿಲ್ಲ. ಧರ್ಮ ಸಂಸತ್‌ನಲ್ಲಿ ನಿರ್ಧಾರಗೊಳ್ಳುವುದಾದರೆ ಅದನ್ನು ಬೆಂಬಲಿಸುತ್ತದೆ ಎಂದಿದೆ. ಇದೇ ಅಭಿಪ್ರಾಯವನ್ನು ವಿಶ್ವ ಹಿಂದೂ ಪರಿಷತ್‌ ವ್ಯಕ್ತಪಡಿಸಿದೆ ವಿವಾದ ಸೃಷ್ಟಿಸಿಕೊಂಡಿರುವ ಎರಡು ಧರ್ಮ ಮುಖಂಡರು ವಿವಾದ ಇತ್ಯರ್ಥಗೊಳಿಸಿಕೊಳ್ಳುವ ಬಗ್ಗೆ ಮನಸ್ಸು ಮಾಡಬೇಕು. ಸಂಧಾನ, ಕೋರ್ಟು ಮೂಲಕವೋ ಎಂಬುದನ್ನು ನಿರ್ಧರಿಸಬೇಕು.
ರಣದೀಪ್‌ ಸುಜೇವಾಲಾ, ಕಾಂಗ್ರೆಸ್‌ ವಕ್ತಾರ

ಸುಪ್ರೀಂಕೋರ್ಟು ಹೇಳಿದ ವಿಚಾರ ಸ್ವಾಗತಾರ್ಹವಾದದ್ದು. ಹೀಗಾಗಿ ಎಲ್ಲರೂ ಅದನ್ನು ಗಂಭೀರವಾಗಿ ಪರಿಗಣಿಸಿ ರಾಮ ದೇಗುಲ ವಿಚಾರಕ್ಕೆ ಸಂಬಂಧಿಸಿದ ವಿವಾದ ಇತ್ಯರ್ಥಕ್ಕೆ ನೆರವಾಗುತ್ತಾರೆಂದ ವಿಶ್ವಾಸವಿದೆ.
ಎಲ್‌.ಕೆ.ಆಡ್ವಾಣಿ, ಬಿಜೆಪಿ ನಾಯಕ

ಸಂಧಾನ ಮಾತುಕತೆ, ನೇರ ಸಮಾಲೋಚ ನೆಗಳೆಲ್ಲವೂ ಮುಗಿದಿರುವ ಅಧ್ಯಾಯ. ಮತ್ತೆ ಸಂಧಾನ, ಮಾತುಕತೆ ಸಾಧ್ಯವಾಗದ ಮಾತು. ಈ ಹಿಂದೆ ನಡೆದ ಎಲ್ಲಾ ಮಾತುಕತೆಗಳೂ ವಿಫ‌ಲವಾಗಿವೆ.
ಸಯೀದ್‌ ಖಾಸಿಮ್‌ ಇಲಿಯಾಸ್‌, ಬಾಬ್ರಿ ಮಸೀದಿ ಸಮಿತಿ ಜಂಟಿ ಸಂಚಾಲಕ

Advertisement

Udayavani is now on Telegram. Click here to join our channel and stay updated with the latest news.

Next