ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿರುವ ಬೆನ್ನಲ್ಲೆ ರಾಜ್ಯ ಚುನಾವಣಾ ಆಯೋಗ ಚಟುವಟಿಕೆಗಳು ಚುರುಕುಗೊಂಡಿವೆ.
ಈ ಸಂಬಂಧ ರಾಜ್ಯ ಚುನಾವಣಾ ಆಯುಕ್ತರು ಬುಧವಾರ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ ಆಯೋಗವನ್ನು ಪ್ರತಿನಿಧಿಸುವ ನ್ಯಾಯವಾದಿಗಳು ಹಾಗೂ ಕಾನೂನು ತಜ್ಞರ ಜೊತೆಗೆ ಸಭೆ ನಡೆಸಿದ್ದಾರೆ. ಆಯೋಗದ ಮುಂದಿನ ನಡೆ ಏನಿರಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹೇಳಲಾಗಿದೆ.
ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯದಂತೆ ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿರುವ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಂಬಂಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಆಯೋಗದಿಂದ ಪತ್ರ ಬರೆಯಲು ನಿರ್ಧರಿಸಲಾಗಿದೆ. ಈ ಮಧ್ಯೆ, ಸುಪ್ರೀಂಕೋರ್ಟ್ ಮುಂದೆ ಆಯೋಗದ ವತಿಯಿಂದ ಈ ವಿಷಯ ಪ್ರಸ್ತಾಪಿಸಲು ತೀರ್ಮಾನಿಸಲಾಗಿದೆ.
ಅದೇ ರೀತಿ ಜಿ.ಪಂ. ಹಾಗೂ ತಾ.ಪಂ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಹೈಕೋರ್ಟ್‌ಗೆ ಈಗಾಗಲೇ ಅರ್ಜಿ ಸಲ್ಲಿಸಿದ್ದು, ಅದು ವಿಚಾರಣಾ ಹಂತದಲ್ಲಿದೆ. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ರಜಾಕಾಲದ ನ್ಯಾಯಪೀಠದ ಮುಂದೆ ಮಧ್ಯಂತರ ಮನವಿ ಸಲ್ಲಿಸಲು ಆಯೋಗ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.
ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಜಿ.ಪಂ, ತಾ.ಪಂ ಹಾಗೂ ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ನಲ್ಲಿ ಆಗುವ ಬೆಳವಣಿಗೆಗಳು ಮತ್ತು ನ್ಯಾಯಾಲಯ ನೀಡುವ ನಿರ್ದೇಶನಗಳಂತೆ ಸರ್ಕಾರದ ಸಹಕಾರದೊಂದಿಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.